ಒಮಾನ್ ಮಸ್ಕತ್: ಸೋಶಿಯಲ್ ಫೋರಂ ಒಮಾನ್ ಇದರ ಕರ್ನಾಟಕ ಚಾಪ್ಟರ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಬಾಂಧವ್ಯ” ಫ್ಯಾಮಿಲಿ ಗೆಟ್ ಟುಗೆದರ್ ಕಾರ್ಯಕ್ರಮವು ಈ ಬಾರಿ 2017 ಫೆಬ್ರವರಿ 10ರಂದು ಬರ್ಕ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ಊರ ನೆನಪಿನಲ್ಲೇ ಅನಿವಾಸಿಯಾಗಿದ್ದುಕೊಂಡು ಈ “ಬಾಂಧವ್ಯ 2017″ಕ್ಕೆ ಹಾಜರಾದವರಿಗೆಲ್ಲಾ ಅಚ್ಚರಿ ಕಾದಿತ್ತು. ಅರಬಿ ದೇಶದಲ್ಲಿ ಊರ ಹೋಬಳಿಯ ಗೂಡಂಗಡಿಗಳು, ಬಾಲ್ಯ ಜೀವನದ ನೆನಪು ಬರಿಸುವ ಸಂತೆಯ ಸಾಮಾಗ್ರಿಗಳು, ಶಾಲಾ ದಿನಗಳಲ್ಲಿ ತಿಂದ ಚರ್ಮುರಿ, ಆಮ್ಲೇಟ್ ತಟ್ಟಿಯಂಗಡಿಗಳು, ಮತ್ತಷ್ಟು ವಿಶೇಷತೆಯೊಂದಿಗೆ ಸೈಕಲ್ ಐಸ್’ಕ್ಯಾಂಡಿಗಳು,ಗೋಳಿ ಸೋಡಾದ ನೆನಪುಗಳೊಂದಿಗೆ ಬಿಸಿಬಿಸಿ ಖರಿದ ತಿಂಡಿಗಳು, ನ್ಯಾಯ ಬೆಲೆ ಅಂಗಡಿ ಮತ್ತು ಮಾರುಕಟ್ಟೆ ಬಾಹ್ಯನೋಟಗಳ ವಿನೂತನ ಯಶಸ್ವಿ ಪ್ರಯೋಗದೊಂದಿಗೆ ಅಚ್ಚುಕಟ್ಟಾದ ಸ್ವಯಂಸೇವಕರೊಂದಿಗಿನ ಈ ಕಾರ್ಯಕ್ರಮವು ನೆರೆದ ಸಭಿಕರನ್ನು ಒಂದು ಕ್ಷಣ ಸ್ಥಬ್ದರನ್ನಾಗಿಸಿತ್ತು. ಬಾಲ್ಯ ಮತ್ತು ಶಾಲಾ ಜೀವನದ ನೆನಪುಗಳನ್ನು ಕಣ್ಣೆದುರಿಗೆ ಬಿಡಿಸಿಟ್ಟ ಸೋಶಿಯಲ್ ಫೋರಂ ತಂಡವನ್ನು ನೆರೆದ ಅನಿವಾಸಿ ಕರ್ನಾಟಕದ ಜನತೆ ಹುರಿದುಂಬಿಸಿ ಪ್ರಶಂಸಿಸಿತು.
ಮಕ್ಕಳ ಆಟೋಟದೊಂದಿಗೆ ಪ್ರಾರಂಭಗೊಂಡ ಈ ಬಾಂಧವ್ಯವು,ಈಗಿನ ಮಕ್ಕಳು ಕಾಣದ,ಕೇಳದ ಊರ ಗ್ರಾಮೀಣ ಆಟೋಟ ಸ್ಪರ್ದೆಯಲ್ಲಿ ಮಕ್ಕಳೊಂದಿಗೆ ಪೋಷಕರೂ ಉತ್ಸಾಹದಿಂದ ಪಾಲ್ಗೊಂಡರು. ಕಾರಣ ಮಕ್ಕಳ ಆಟೋಟ ಸ್ಪರ್ದೆಯಲ್ಲಿದ್ದಂತಹ ಆಟೋಟಗಳನ್ನು ಈಗಿನ ಪೋಷಕರು ಶಾಲಾ ದಿನಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಮುನಿಸಿಕೊಂಡ ಆಟವಾಗಿದ್ದು ಬಹಳಷ್ಟು ಸಿಹಿನೆನಪುಗಳ ಲೋಕಕ್ಕೆ ಕೊಂಡೊಯ್ಯುವಲ್ಲಿ ಸೋಶಿಯಲ್ ಫೋರಂ ಯಶಸ್ವಿಯಾಯಿತು.
ಅನಿವಾಸಿ ಜೀವನದ ಮರಳುಗಾಡಿನಲ್ಲಿ ಊರಿನಲ್ಲಿಯೂ ಕಾಣಸಿಗದ ಆಟೋಟ ಸ್ಪರ್ದೆಗಳನ್ನು ಆಸ್ವದಿಸುತ್ತಾ ಮತ್ತೆ ಮಗುವಾಗಿದ್ದರು. ಮಕ್ಕಳಿಗಾಗಿ, ಪುರುಷರಿಗಾಗಿ, ಅದೇ ರೀತಿ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಆಟೋಟ ಸ್ಪರ್ದೆಯನ್ನಿಟ್ಟು ನಿಯಂತ್ರಿಸಿದ ಸೋಶಿಯಲ್ ಫೋರಂನ ಈ ಕಾರ್ಯಕ್ರಮಕ್ಕಾಗಿ ವ್ಯಯಿಸಿದ 3ತಿಂಗಳ ಕಠಿಣ ಪರಿಶ್ರಮವು ಸಫಲವಾಗಲು ಸಹಕಾರಿಯಾಯಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆಯವರು ಮಾತನಾಡಿ, ವಿದೇಶದಲ್ಲಿ ಬಿಡುವಿಲ್ಲದ ಕೆಲಸದ ನಡುವೆಯೂ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವ ಅಚಲ ನಿರ್ಧಾರದೊಂದಿಗ ಹೆಜ್ಜೆಯಿಟ್ಟು ಯಶಸ್ವಿಯಾದ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪ್ರಸಕ್ತ ಸನ್ನಿವೇಷದಲ್ಲಿ ಹೊಂದಾಣಿಕೆ, ಒಗ್ಗಟ್ಟಿನ ಕೊರತೆಯಿಂದ ಭಾರತೀಯ ಮುಸಲ್ಮಾನರು ತಮ್ಮ ಹಕ್ಕು ಪಡೆಯುವಲ್ಲಿ ಹಿನ್ನಡೆಯಿಂದಿರುವ ರೀತಿಯನ್ನು ವಿವರಿಸುತ್ತಾ ಇಂತಹ ಸಂದರ್ಭದಲ್ಲಿ ಸಮುದಾಯವನ್ನು ಐಕ್ಯತೆಯಾಗಿಸುವ ನೆಲೆಯಲ್ಲಿ ಬಾಂಧವ್ಯವನ್ನು ವ್ರದ್ದಿಸುವ ಇಂತಹ ಕಾರ್ಯಕ್ರಮಗಳು ಸಮಸ್ಯಗಳಿಗೆ ಪರಿಹಾರವಾಗಬೇಕಿದೆ ಮತ್ತು ಇದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಹೀಗೇ ಬಾಂಧವ್ಯದೊಂದಿಗೆ ಮುಂದುವರಿಯುತ್ತಿದ್ದರೆ ನಾವು ಬಯಸುವ ಬದಲಾವಣೆ ಸನ್ನಿಹಿತವಿದೆ ಎಂದರು.
ವೇದಿಕೆಯಲ್ಲಿ ಸೋಶಿಯಲ್ ಫೋರಂ ಕೇಂದ್ರ ಅಧ್ಯಕ್ಷರಾದ ಅಬ್ದುಲ್ ಹಮೀದ್ ಪಾಣೆಮಂಗಳೂರು, ಕರ್ನಾಟಕ ಚಾಪ್ಟರ್ ಉಪಾಧ್ಯಕ್ಷರಾದ ಸಯ್ಯದ್ ಮೊಹಿದಿನ್ ಸಾಹೇಬ್ ಸಾಸ್ತಾನ್, ಪ್ರವಾಸಿ ಫೋರಂ ಕರ್ನಾಟಕ ಘಟಕದ ಅಧ್ಯಕ್ಷರಾದ ಅನ್ವರ್ ಮೂಡುಬಿದ್ರೆ ಉಪಸ್ಥಿತರಿದ್ದರು.
ಅಬ್ಬಾಸ್ ಕೈಕಂಬ ಸ್ವಾಗತಿಸದರೆ, ರಿಯಾಝ್ ಗಂಗೊಳ್ಳಿ ವಂದಿಸಿದರು, ನೂರ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಸಲಾಂ ಬೈಲೂರ್ ಮತ್ತು ಆಸಿಫ್ ಬೈಲೂರ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಕೊಚ್ಚಿನ್ ಜ್ಯುವೆಲ್ಲರಿ ಮತ್ತು ಅಲ್- ನಹ್ದಾ ಕನ್’ಸ್ಟ್ರಕ್ಷನ್ ಪ್ರಾಯೋಚಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಮದುವೆ ಮನೆಯನ್ನು ನೆನಪಿಸುವಂತೆ ಸೇರಿದ ಜನಸ್ತೋಮದ ಕಣ್ಣೆದುರಲ್ಲಿಯೇ ಸೋಶಿಯಲ್ ಫೋರಂ ಸದಸ್ಯರು ಸ್ವತಃ ತಯಾರಿಸಿದ ಊಟೋಪಚಾರ ಕಾರ್ಯಕ್ರಮಕ್ಕೆ ಮತ್ತೊಂದು ಮೆರುಗು ನೀಡಿತ್ತು.
ವರದಿ: ಹನೀಫ್ ಬಂಟ್ವಾಳ್