ಕೊಳವೆಬಾವಿ ತೋಡಲು ಇದ್ದ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಾದ ಮಂಗಳೂರು ಮತ್ತು ಬಂಟ್ವಾಳ ಬರಪೀಡಿತ ಎಂದು ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಪರಿಹಾರೋಪಾಯಗಳ ಕುರಿತು ಚರ್ಚೆ ನಡೆಸಲಾಗುವುದು. ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲುವ ಕುರಿತು ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿನ ಬೃಹತ್ ಯೋಜನೆಗಳಾದ ತಾಲೂಕಿನ ಕರೋಪಾಡಿಯಲ್ಲಿ 26 ಕೋಟಿ ರೂ,, ಸಂಗಬೆಟ್ಟುವಿನ 36 ಕೋಟಿ ರೂ ಯೋಜನೆ ಕೆಲಸ ಕಾರ್ಯ ನಡೆಯುತ್ತಿದೆ. ಮಾಣಿಯಲ್ಲಿ 18 ಕೋಟಿ ರೂ ಯೋಜನೆ ಟೆಂಡರ್ ಆಗಿದೆ. ಸರಪಾಡಿ ಮತ್ತು ನರಿಕೊಂಬುವಿನ ಯೋಜನೆಗಳು ಕ್ಯಾಬಿನೆಟ್ ಹಂತಕ್ಕೆ ಬಂದಿದೆ. ಮಂಗಳೂರು ತಾಲೂಕಿನ ಉಳಾಯಿಬೆಟ್ಟುವಿನಲ್ಲೂ ಕುಡಿಯುವ ನೀರಿಗೆ ಯೋಜನೆ ಮಂಜೂರಾತಿ ಹಂತದಲ್ಲಿದೆ. ಹಾಗಾದರೆ ಇಡೀ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಹಾಗೂ ಎಲ್ಲರಿಗೂ ನಲ್ಲಿ ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ ಎಂದು ರೈ ಹೇಳಿದರು. ಕಡೇಶಿವಾಲಯದಿಂದ ಅಜಿಲಮೊಗರುವಿಗೆ ಸೌಹಾರ್ದ ಸೇತುವೆ ನಿರ್ಮಾಣಕ್ಕೆ 31 ಕೋಟಿ ರೂ ಮಂಜೂರಾಗಿದೆ ಎಂದರು ರಮಾನಾಥ ರೈ.
ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಮಂಗಳೂರಿನಿಂದ ಬರುವ ಬಸ್ಸುಗಳು ನಿಲ್ಲುವ ಸಂದರ್ಭ ಉದ್ಭವಿಸಬಹುದಾದ ಸಮಸ್ಯೆಗಳ ನಿವಾರಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಬಸ್ ನಿಲ್ದಾಣಕ್ಕೆ ಇನ್ನೂ ಹೆಚ್ಚುವರಿಯಾಗಿ ಒಂದೂವರೆ ಕೋಟಿ ರೂ ಅನುದಾನ ನೀಡುವುದಾಗಿ ರೈ ಹೇಳಿದರು. ಬಂಟ್ವಾಳದ ಮೆಸ್ಕಾಂ ವಿಭಾಗೀಯ ಕಚೇರಿ ಹಾಗೂ ಮಿನಿ ವಿಧಾನಸೌಧ ಸಹಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಐಬಿ ನಿರ್ಮಾಣ ಅಂತಿಮ ಹಂತದಲ್ಲಿದೆ ಎಂದು ಹೇಳಿದ ರೈ, ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.