ಆರಾಧನೆ

ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

  • ಪ್ರೊ.ರಾಜಮಣಿ ರಾಮಕುಂಜ

ಬಂಟ್ವಾಳದ ಕೇಂದ್ರ ಸ್ಥಳವಾದ ಜೋಡು ಮಾರ್ಗದಲ್ಲಿ ಹಲವು ಶತಮಾನಗಳ ಹಿಂದೆಯೇ ಈ ದೇವಾಲಯವಿತ್ತೆಂಬುದು ಪ್ರತೀತಿ; ಅನಂತರ ಅದು ಭೂಗತವಾಗಿ ಹೋಗಿತ್ತು. 2003 ರಲ್ಲಷ್ಟೆ ಸಾರ್ವಜನಿಕವಾಗಿ ಮತ್ತೆ ಬ್ರಹ್ಮಕಲಶದ ಮೂಲಕ ಪ್ರಕಟವಾಯಿತು. ಬಿ.ಸಿ.ರೋಡಿಗೊಂದು ದೇವಾಲಯವಿಲ್ಲ ಎಂಬ ಭಕ್ತರ ಕೊರಗನ್ನು ಹೋಗಲಾಡಿಸಿದ ಈ ದೇವಾಲಯ, ಸಾರ್ವಜನಿಕರೆಲ್ಲರೂ ಒಟ್ಟಾಗಿ ಸೇರುವಲ್ಲಿ ಅನುವು ಮಾಡಿಕೊಟ್ಟಿದೆ. ನಂದ ಅರಸರ ಕಾಲದಲ್ಲಿದ್ದ ನಂದರಬೆಟ್ಟು ಪಂಜುರ್ಲಿ ಸ್ಥಾನವೇ ಇಲ್ಲಿನ ಏಕೈಕ ಶ್ರದ್ಧಾ ಕೇಂದ್ರವಾಗಿತ್ತು, ಮಾತ್ರವಲ್ಲ ದೈವಾರಾಧನೆಗೇ ಮೀಸಲಾಗಿತ್ತು ಕೂಡ. ಈ ಪಂಜುರ್ಲಿ ಗ್ರಾಮ ದೈವದ ಸ್ಥಾನವನ್ನೂ ಪಡೆದಿತ್ತು. ಬಿ. ಮೂಡ ಗ್ರಾಮ ದೇವರಾಗಿ ಆರಾಧನೆಗೊಳ್ಳುತ್ತಿರುವುದು ಕನಪ್ಪಾಡಿ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ.

ಸುಮಾರು 30 ವರ್ಷಗಳ ನಿರಂತರ ಪರಿಶ್ರಮದಿಂದ, ಹಲವು ಮಂದಿ ಭಕ್ತ ಜನರಿಂದ, ಕೆಲಮಂದಿ ಕ್ರಿಯಾಶೀಲ ವ್ಯಕ್ತಿಗಳ ಕೂಡುವಿಕೆಯಿಂದ ಈ ದೇವಾಲಯ ನಿರ್ಮಾಣವಾದುದು ಒಂದು ಇತಿಹಾಸವೇ ಸರಿ. ಹಿಂದೆ ದೇವಾಲಯವಿದ್ದ ಜಾಗದಲ್ಲಿ ಮತ್ತೆ ದೇಗುಲದ ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದಲೇ ಶ್ರೀರಾಮ ಭಜನಾ ಮಂಡಳಿಯನ್ನು ಸ್ಥಾಪಿಸಿ ಜನಜಾಗೃತಿಯನ್ನು ನಡೆಸಲಾಯಿತು. ಶ್ರೀರಾಮ ಯಕ್ಷಗಾನ ಮಂಡಳಿ, ನಗರ ಭಜನೆ, ನಿತ್ಯ ರೂ ಒಂದರಂತೆ ವ್ಯಾಪಾರಸ್ಥರಿಂದ ಸಂಗ್ರಹ ಹೀಗೆ ಹತ್ತು ಹಲವು ವಿಷಯಗಳ ಮೂಲಕ ದೇವಾಲಯ ನಿರ್ಮಾಣದ ಕನಸಿಗೆ ಸಂಬಂಧವನ್ನು ಬೆಸೆಯಲಾಯಿತು. ಅಂತಹ ವ್ಯಕ್ತಿತ್ವಗಳ ಪರಿಶ್ರಮದ ಉಸಿರು ಈ ದೇವಾಲಯ ನಿರ್ಮಾಣದ ನೆನಪಿನ ಸಂದರ್ಭದಲ್ಲಿ ಮರೆಯಲಸಾಧ್ಯ.

ಈ ಹಿಂದೆ ಇದೇ ಸ್ಥಳದಲ್ಲಿ ದೇವಾಲಯವಿತ್ತೆನ್ನುವುದಕ್ಕೆ ಇಲ್ಲಿರುವ ಪಾಳು ಬಿದ್ದ ಬಾವಿಯೊಂದು ಸಾಕ್ಷಿ ನುಡಿಯುತ್ತದೆ. ಅತಿ ಎತ್ತರದಲ್ಲಿರುವ ಈ ದೇವಾಲಯವಿರುವ ಸ್ಥಳನಾಮ ಚಂಡಾಡಿ. ಚಂಡಿಕಾ ಪರಮೇಶ್ವರಿಯ ಸಾನ್ನಿದ್ಧ್ಯದಿಂದಾಗಿ ಚಂಡಾಡಿ ಅನ್ನುವ ಹೆಸರು ಬಂದಿರುವ ಸಾಧ್ಯತೆಗಳಿರಬಹುದು. ಚಂಡಾಡಿ ಅನ್ನುವ ಮನೆತನದ ದೇವರು ಅನ್ನುವ ಮಾತುಗಳೂ ಇಲ್ಲದಿಲ್ಲ. ಇದರ ಜತೆಯಲ್ಲೇ ರಾಜ ಮನೆತನದವರಿಂದ ಸ್ಥಾಪಿಸಲ್ಪಟ್ಟ ದೇವಸ್ಥಾನವೆಂಬ ನಂಬಿಕೆಯೂ ಇದೆ. ಇದೇ ದೇವಾಲಯದ ಉತ್ತರ ಭಾಗದಲ್ಲಿ, ಸುಮಾರು ಒಂದು ಫರ್ಲಾಂಗ್ ದೂರದಲ್ಲಿರುವ ಅಗ್ರಬೈಲಿನಲ್ಲಿ ದಟ್ಟವಾಗಿ ಮರಗಳು, ಪೊದರುಗಳು ಹಬ್ಬಿರುವ ಪ್ರದೇಶವೊಂದರಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ದೊಡ್ಡ ದೇವಾಲಯವಿತ್ತೆಂಬ ಮಾತುಗಳೂ ಚಾಲ್ತಿಯಲ್ಲಿವೆ, ಅದಕ್ಕೆ ಕುರುಹುಗಳು ಅನ್ನುವಂತೆ ವಿರಳವಾಗಿ ಇಟ್ಟಿಗೆಗಳಿಂದ ಕೂಡಿರುವ ಮಣ್ಣಿನ ದಿಬ್ಬವೊಂದು ಕಂಡುಬರುತ್ತಿದೆ. ಅದರ ಸುತ್ತಲೂ ವಿಸ್ತಾರವಾದ ಪ್ರದೇಶವೂ ಇದೆ. ಈಗ ದಿಬ್ಬದ ಸುತ್ತಲೂ ಹೆಮ್ಮರಗಳು ಬೆಳೆದಿವೆ. ಇದು ಅತ್ಯಂತ ಪುರಾತನ ದೇವಾಲಯವಾಗಿದ್ದಿರಬಹುದು ಅನ್ನುವುದು ಸುತ್ತಲಿನವರ ಮಾತು.

2003ರ ಮೇ 14ರಂದು ಚಂಡಿಕಾ ಪರಮೇಶ್ವರಿಯ ಪ್ರತಿಷ್ಠಾ ಕಾರ್ಯ ನಡೆದಿದ್ದು ತ್ರಿಕಾಲದಲ್ಲೂ ಪೂಜೆ ನಡೆಯುತ್ತದೆ. ವಿಷುಕಣಿ, ಮೇ ತಿಂಗಳಲ್ಲಿ ಪ್ರತಿಷ್ಠಾ ವರ್ಧಂತಿ, ಗಣೇಶ ಚತುರ್ಥಿ, ನಾಗರ ಪಂಚಮಿ, ನವರಾತ್ರಿ, ಶ್ರಾವಣ ಮಾಸದ ವಿಶೇಷ ಸೇವೆ ಇವಿಷ್ಟು ಇಲ್ಲಿನ ವಾರ್ಷಿಕ ನಡಾವಳಿಗಳು. ಗರ್ಭಗುಡಿ, ತೀರ್ಥಮಂಟಪ, ಇಡೆನಾಳಿ, ನಾಲ್ಕು ಸುತ್ತಲೂ ಪೌಳಿ ಇವಿಷ್ಟು ಇಲ್ಲಿನ ವಾಸ್ತು ರಚನೆ. ಗಣಪತಿ, ಅಯ್ಯಪ್ಪ, ಪರಿವಾರ ದೇವರು; ಹಾಗೆಯೇ ನಾಗ ಸನ್ನಿಧಿಯೂ ಇದೆ. ರಾಹು ಗುಳಿಗ, ಭೈರವ ಹಾಗೂ ರಕ್ತೇಶ್ವರಿ ಇಲ್ಲಿನ ಪರಿವಾರ ದೈವಗಳು.

ಇದೀಗ ಈ ದೇವಾಲಯದಲ್ಲಿ ಜಾತ್ರಾ ಸಂಭ್ರಮ. ದಿನಾಂಕ 12ರಿಂದ 14 ರವರೆಗೆ ಮೂರು ದಿನಗಳ ಜಾತ್ರೆ ಇಲ್ಲಿ ನಡೆಯುತ್ತದೆ. ದಿನಾಂಕ 12 ರಂದು ಸಂಜೆ ಗಂಟೆ 7ಕ್ಕೆ ಪ್ರಾರ್ಥನೆ, ಪುಣ್ಯಾಹವಾಚನಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ, ವಾಸ್ತುಬಲಿ, ಮಹಾಪೂಜೆ; ದಿನಾಂಕ13 ರಂದು ಗಣಹೋಮ, ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಶೇಕ, ಮಹಾಪೂಜೆ ಅನ್ನ ಸಂತರ್ಪಣೆ, ದೀಪಾಲಂಕಾರ ಪೂಜೆ ವಾದ್ಯ ಸೇವೆ, ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ರಾತ್ರೆ ಗಂಟೆ 10.30 ಕ್ಕೆ ವಿಶೇಷ ನರ್ತನ ಬಲಿ; ದಿನಾಂಕ 14 ರಂದು ಬೆಳಿಗ್ಗೆ ಎಂಟಕ್ಕೆ ದರ್ಶನ ಬಲಿ ಆರಂಭ ಮತ್ತು ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ; ನವ ಕಲಶಾಭಿಶೇಕ, ಮಹಾಪೂಜೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ; ರಾತ್ರೆ ಗಂಟೆ 8ಕ್ಕೆ ವಿಶೇಷ ರಂಗಪೂಜೆಯೊಂದಿಗೆ ಜಾತ್ರೆ ಸಮಾಪ್ತಿಗೊಳ್ಳುತ್ತದೆ. ಜಾತ್ರಾ ದಿನಗಳಲ್ಲಿ ಪ್ರತೀ ದಿವಸ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts