ಸಂಸ್ಕೃತಿಯ ಮೂಲಾಂಶಗಳು

  • ಡಾ.ಅಜಕ್ಕಳ ಗಿರೀಶ ಭಟ್
  • ಅಂಕಣ: ಗಿರಿಲಹರಿ
  • www.bantwalnews.com

ಸಂಸ್ಕೃತಿ ಎಂದರೇನು ಎಂಬ ಬಗ್ಗೆ ಭಾರತದ ಹಾಗೂ ಬೇರೆ ಬೇರೆ ದೇಶಗಳ ವಿದ್ವಾಂಸರು ವಿವರಿಸಿದ್ದಾರೆ. ಸಂಸ್ಕಾರದಿಂದ ಸಂಸ್ಕೃತಿ ಅಂತ ಸಾಮಾನ್ಯವಾಗಿ ಹೇಳಲಾಗುತ್ತದೆ. ಹಾಗೆಯೇ ನಾಗರಿಕತೆ ಮತ್ತು ಸಂಸ್ಕೃತಿಯ ನಡುವಿನ ವ್ಯತ್ಯಾಸಗಳ ಬಗ್ಗೆಯೂ ಸಾಕಷ್ಟು ಮಂದಿ ಹೇಳಿದ್ದಾರೆ. ಅವುಗಳ ವಿವರಗಳಿಗೆ ಇಲ್ಲಿ ನಾನು ಹೋಗುವುದಿಲ್ಲ. ಗೂಗಲೇಶ್ವರನ ಬಳಿ ಹೋಗಿ ಕಲ್ಚರ್ ಮತ್ತು ಸಿವಿಲೈಸೇಶನ್ ಅಂತ ಕೇಳಿದರೆ ಅವನು ಸಾವಿರಗಟ್ಟಲೆ ಲೇಖನಗಳ ಪಟ್ಟಿಯನ್ನು ಕೊಟ್ಟಾನು.

ಸಂಸ್ಕೃತಿ ಇರುವುದು ಒಬ್ಬ ವ್ಯಕ್ತಿಯಲ್ಲೋ ಅಥವಾ ಒಂದು ಸಮೂಹದಲ್ಲೋ ಅಥವಾ ಸಮಾಜದಲ್ಲೋ? ಈ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡುವುದು ಕಷ್ಟ. ಯಾಕೆಂದರೆ ನಾವು ಭಾರತೀಯ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕೃತಿ, ಕನ್ನಡ ಸಂಸ್ಕೃತಿ, ಬಂಟರ ಸಂಸ್ಕೃತಿ, ಬ್ರಾಹ್ಮಣರ ಸಂಸ್ಕೃತಿ – ಹೀಗೆ ಪದಪುಂಜಗಳನ್ನು ಬಳಸುತ್ತೇವೆ.

ಆದರೂ ಅಂತಿಮವಾಗಿ ಸಮಾಜದಲ್ಲಿ ಅಥವಾ ದೇಶದಲ್ಲಿ ವ್ಯಕ್ತಿಗಳು ಸರಿಯಿಲ್ಲದಿದ್ದರೆ ಇಡೀ ಸಮಾಜ ಅಥವಾ ದೇಶಕ್ಕೇ ಕೆಟ್ಟ ಹೆಸರು ಬರುತ್ತದೆ.

ಆದ್ದರಿಂದಲೇ ನಾವು ಭಾರತೀಯ ಸಂಸ್ಕೃತಿ ಬಗ್ಗೆ ಎಷ್ಟೇ ಹೇಳಿದರೂ ಬೆಂಗಳೂರಿನಲ್ಲೋ ಅಥವಾ ದೆಹಲಿಯಲ್ಲೋ ಒಂದು ಅತ್ಯಾಚಾರ ಅಥವಾ ದೌರ್ಜನ್ಯ ಪ್ರಕರಣ ನಡೆದರೆ ಮಾಧ್ಯಮಗಳು ಇಡೀ ನಗರವನ್ನೇ ಹೊಣೆ ಮಾಡುತ್ತದೆ.

ವಿದೇಶಗಳಲ್ಲಿ ಇಡೀ ಭಾರತವೇ ಅಂಥ ಕೆಟ್ಟ ಸ್ಥಿತಿಯಲ್ಲಿದೆ ಎಂಬ ಚಿತ್ರಣ ಹರಡಲಾರಂಭಿಸುತ್ತದೆ. ಹೀಗಾಗಿ ಸಂಸ್ಕೃತಿ ಎಲ್ಲರೂ ಸೇರಿ ಆಗುವಂಥಾದ್ದಾದರೂ ಅದರ ಹೆಸರು ಕೆಡಿಸಲು ಒಬ್ಬ ವ್ಯಕ್ತಿ ಸಾಕು. ಒಬ್ಬ ವ್ಯಕ್ತಿಯ ಸಂಸ್ಕೃತಿ ನಿಜವಾಗಿ ವ್ಯಕ್ತವಾಗುವುದು ಎಲ್ಲಿ? ಅಥವಾ ಒಬ್ಬ ವ್ಯಕ್ತಿ ಸುಸಂಸ್ಕೃತ ಅಂತ ಅನ್ನಿಸಿಕೊಳ್ಳುವುದು ಹೇಗೆ?

ಇದನ್ನು ನಮ್ಮ ಪಂಚೇಂದ್ರಿಯಗಳ ಪರಿಕಲ್ಪನೆಯ ಮೂಲಕ ಕೂಡ ಅರ್ಥ ಮಾಡಿಕೊಳ್ಳಬಹುದು. ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ ಇವುಗಳನ್ನು ಪಂಚೇಂದ್ರಿಯಗಳು ಎಂದು ಪಟ್ಟಿ ಮಾಡಿದ್ದಾರೆ ಎಂದು ನಮಗೆಲ್ಲ ಗೊತ್ತು. ಇವುಗಳನ್ನೇ ಯಾಕೆ ಮಾಡಿದ್ದಾರೆ ಅನ್ನುವುದು ಕೂಡ ಕುತೂಹಲಕರ. ಈ ಇಂದ್ರಿಯಗಳ ಕೆಲಸಗಳನ್ನು ಗಮನಿಸಿದರೆ ಎಷ್ಟು ಆಲೋಚಿಸಿ ಇವುಗಳನ್ನೇ ಪಟ್ಟಿ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ.

ನಮ್ಮ ಬದುಕಿನಲ್ಲಿ ನಾವು ಬಹಳವಾಗಿ ಅಪೇಕ್ಷಿಸುವುದು ಪಂಚೇಂದ್ರಿಯ ಸುಖವನ್ನು. ಹಳೆಯ ಕಾವ್ಯಗಳಲ್ಲಿ ಸರೋವರಗಳು ಕಾಡಿನಲ್ಲಿ ಸಂಚರಿಸಿ ಅಥವಾ ಬೇಟೆಯಿಂದ ಬಳಲಿದ ರಾಜಕುಮಾರರಿಗೆ ಪಂಚೇಂದ್ರಿಯ ಸುಖ ನೀಡಿದ ಉಲ್ಲೇಖಗಳು ಬರುತ್ತವೆ. ಸ್ಪರ್ಶಕ್ಕೆ ತಂಪಾಗಿ, ಕುಡಿಯಲು ರುಚಿಯಾಗಿ, ಜುಳುಜುಳು ನಾದ ಅಥವಾ ಹಂಸಗಳ ಕಲರವ ಕಿವಿಗೆ ಹಿತವಾಗಿ, ಮೂಗಿಗೆ ಪರಿಮಳವಾಗಿ, ಕಣ್ಣಿಗೆ ಸುಂದರವಾಗಿ ಸರೋವರಗಳು ಪಂಚೇಂದ್ರಿಯ ಸುಖ ನೀಡುತ್ತವೆ.

ಊಟ ಕೂಡ ಪಂಚೇಂದ್ರಿಯ ಸುಖ ನೀಡಬೇಕಂತೆ. ಆಹಾರ ಪದಾರ್ಥಗಳ ಪರಿಮಳ, ಸ್ಪರ್ಶಕ್ಕೆ ಹಿತ, ಕಣ್ಣಿಗೆ ಚಂದ, ನಾಲಗೆಗೆ ರುಚಿ ಎಲ್ಲ ಸರಿಯೇ. ಕಿವಿಗೆ? ಹಪ್ಪಳ ಚಕ್ಕುಲಿಯಂಥ ವಸ್ತುಗಳು ಬಹುಶಃ ಕಿವಿಗೆ ಹಿತವಾದ ಶಬ್ದವನ್ನು ಉಂಟುಮಾಡಬೇಕೇನೋ? ಅಥವಾ ಕೆಲವರು ಪಚಪಚ ಅಂತ ಇತರರಿಗೆ ಕಿರಿಕಿರಿಯಾಗುವಂತೆ ಊಟ ಮಾಡಬಾರದು ಅಂತಲೂ ಇರಬಹುದು. ಅಡಿಗೆ ಸ್ಪರ್ಧೆಗಳಲ್ಲಿ ಅಡಿಗೆಯ ಅಲಂಕಾರಕ್ಕೇ ಅಂಕ ಸಿಗುತ್ತದೆ ಅನ್ನುವುದನ್ನು ನಾವು ಟಿವಿ ಕಾರ್ಯಕ್ರಮಗಳಲ್ಲಿ ನೋಡುತ್ತೇವೆ.

ಎಲ್ಲರೂ ಒಳ್ಳೆಯ ಸಂಗೀತವೋ ಧ್ವನಿಯನ್ನೋ ಕೇಳಲು ಬಯಸುತ್ತಾರೆ. ಒಳ್ಳೆಯ ಆಹಾರದ ರುಚಿಯನ್ನು ಬಯಸುತ್ತಾರೆ. ಒಳ್ಳೆಯ ಪರಿಮಳಕ್ಕಾಗಿ ಸೆಂಟು, ಅಗರಬತ್ತಿ, ಧೂಪಗಳನ್ನೆಲ್ಲ ಬಳಸುತ್ತಾರೆ. ಸ್ಪರ್ಶಕ್ಕಾಗಿ ಮೆತ್ತನೆ ಹಾಸಿಗೆಯೋ ಕುರ್ಚಿಯೋ ಬೇಕಾಗುತ್ತದೆ. ನೋಟಕ್ಕೆ ಮನೆ, ಕಟ್ಟಡ, ಊರು ಹಾಗೂ ಮನುಷ್ಯರನ್ನು ಸಿಂಗರಿಸುತ್ತೇವೆ. ಗಮನಿಸಿ, ಶ್ರೀಮಂತಿಕೆಯನ್ನು ಅನುಸರಿಸಿ ಮೇಲಿನ ವ್ಯವಸ್ಥೆಗಳು ಇರುತ್ತವೆ. ಮೇಲಿನ ಒಂದೊಂದು ಅಂಶ ಕೂಡ ವ್ಯಕ್ತಿಯ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಹೇಗೆ ಬದಲಾಗುತ್ತದೆ ಅನ್ನುವುದೇ ಸೋಜಿಗ.

ಸುಸಂಸ್ಕೃತರಲ್ಲದವರು ಈ ಪಂಚೇಂದ್ರಿಯಸುಖವನ್ನು ಬಯಸುವ ಬಗೆ ಸ್ವಲ್ಪ ಭಿನ್ನ. ಅಂಥವರು ಪಂಚೇಂದ್ರಿಯಗಳ ಮೇಲೆ ಸ್ವಲ್ಪವೂ ಹಿಡಿತವಿಲ್ಲದವರಾದ್ದರಿಂದ ನೋಡಬಾರದ್ದನ್ನು ನೋಡಲು, ಮುಟ್ಟಬಾರದ್ದನ್ನು ಮುಟ್ಟಲು, ಕುಡಿಯಬಾರದ್ದನ್ನು ಕುಡಿಯಲು, ಮೂಸಬಾರದ್ದನ್ನು ಮೂಸಲು, ಕೇಳಬಾರದ್ದನ್ನು ಕೇಳಲು ಅಥವಾ ಇತರರಿಗೆ ಬಲವಂತವಾಗಿ ಕೇಳಿಸಲು ಬಯಸುತ್ತಾರೆ.

ಪಂಚೇಂದ್ರಿಯಗಳನ್ನು ಗೆದ್ದವರು ಸಂತರಾಗುತ್ತಾರೆ. ಎಲ್ಲರಿಗೂ ಅದು ಸಾಧ್ಯವಿಲ್ಲ. ಆದರೂ ಒಂದಷ್ಟಾದರೂ ಈ ಬಗ್ಗೆ ಗಮನವಿದ್ದರೆ ಎಲ್ಲರೂ ಸುಸಂಸ್ಕೃತರಾಗಬಹುದು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಸಂಸ್ಕೃತಿಯ ಮೂಲಾಂಶಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*