ಭವಿಷ್ಯದ ಹೊಂಗನಸಿನೊಂದಿಗೆ ಕತಾರ್ ಗೆಂದು ಹೋಗಿ ಅಲ್ಲಿ ತೊಂದರೆಗೊಳಗಾದ ಕಲ್ಲಡ್ಕ ವ್ಯಕ್ತಿಯೊಬ್ಬರ ಕತೆ ಇದು. ಕನಸುಗಳೆಲ್ಲ ಮುರಿದು ಕೊಠಡಿಯಲ್ಲೇ ದಿಕ್ಕು ತೋಚದೆ ಉಳಿದಾಗ ಇಂಡಿಯನ್ ಸೋಶಿಯಲ್ ಫಾರಂ ಸಂಘಟನೆ ಮೂಲಕ ಊರಿಗೆ ಮರಳಿದ ವೆಂಕಪ್ಪ ಪೂಜಾರಿಯವರ ಪ್ರಕಾರ ಇದು ನನ್ನ ಮರುಜನ್ಮ.
ಜಾತಿ, ಧರ್ಮಗಳ ವೈಷಮ್ಯವೇ ಅಕವಾಗುತ್ತಿರುವ ಈ ಹೊತ್ತಿನಲ್ಲಿ, ಹಿಂದು, ಮುಸ್ಲಿಂ ಎಂದು ನೋಡದೆ ಮಾನವೀಯತೆ ಮೆರೆದ ಸಂಘಟನೆಯಿಂದ ಇಂದು ಎರ್ಮೆಮಜಲು ನಿವಾಸಿ ವೆಂಕಪ್ಪ ಪೂಜಾರಿ ಊರಿಗೆ ಮರಳಿದ್ದಾರೆ.
ನನ್ನ ಊರು, ಧರ್ಮ ಮರೆತು ಕೇವಲ ನನ್ನನ್ನು ಸಂಕಷ್ಟದಲ್ಲಿರುವ ಭಾರತೀಯ ಎಂಬ ಭಾವನೆಯಿಂದ ಐಎಸ್ ಎಫ್ ಸದಸ್ಯರು ನಾನು ಮರಳಲು ಸಹಾಯ ಮಾಡಿದ್ದಾರೆ. ಇಬ್ರಾಹಿಂ ಬೊಳ್ಳೂರು, ಹಾರೂನ್ ಸುರತ್ಕಲ್, ಲತೀಫ್ ಮಡಿಕೇರಿ, ಶರೀಫ್ ವಗ್ಗಾ, ಯಾಹ್ಯಾ, ಅಶ್ರಫ್ ಮಾಚಾರ್ ನನಗೆ ನೆರವಾಗಿದ್ದಾರೆ ಅವರಿಗೆ ಕೃತಜ್ಞತೆ ಎಂದು ಮನತುಂಬಿ ಹೇಳಿದರು ವೆಂಕಪ್ಪ ಪೂಜಾರಿ.
ಅವರು ವಿಟ್ಲದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಆರ್ಥಿಕವಾಗಿ ಗಟ್ಟಿಯಾಗಬೇಕು ಎಂಬ ಹಿನ್ನೆಲೆಯಲ್ಲಿ ಏಜನ್ಸಿ ಯೊಂದರ ಮೂಲಕ ಅವರು ಕತಾರ್ ಗೆ 2016 ರ ಮೇ ತಿಂಗಳಲ್ಲಿ ತೆರಳಿದರು. ಆದರೆ ಹೋಗಿ ತಿಂಗಳೆರಡಾಗುವ ಹೊತ್ತಿನಲ್ಲಿ ಕಂಪನಿ ಮುಚ್ಚಿತು. ಅವರ ಪಾಸ್ ಪೋರ್ಟನ್ನು ಕಂಪನಿ ಮಾಲೀಕ ತೆಗೆದುಕೊಂಡುಬಿಟ್ಟಿದ್ದ. ಆದರೆ ಸಂಬಳವೂ ಸರಿಯಾಗಿ ದೊರಕದೆ ವೆಂಕಪ್ಪ ಪೂಜಾರಿ ಊರಿಗೂ ಮರಳಲಾಗದೆ ಕಂಗಾಲಾದರು.
ಅಲ್ಲೇ ಕೊಠಡಿಯೊಂದರಲ್ಲಿ ಉಳಿದುಕೊಂಡು, ಕೈಗೆ ಸಿಕ್ಕಿದ ಕೆಲಸ ಮಾಡತೊಡಗಿದರು. ಬದುಕು ಸಾಗಿಸುವುದಕ್ಕಾಗಿ ಚಿಂದಿ ಆಯ್ದರು. ಕರೆಂಟಿಲ್ಲದ ಕೊಠಡಿಯಲ್ಲಿ ಮೋಂಬತ್ತಿ ಉರಿಸಿದರು. ಎಷ್ಟೋ ಸಮಯ ಊಟಕ್ಕೂ ತೊಂದರೆ ಅನುಭವಿಸಿದರು. ಬದುಕೇ ಮುಗಿಯಿತು ಎಂದು ಯೋಚಿಸುವ ಹೊತ್ತಿಗೆ ನೆರವಿಗೆ ಧಾವಿಸಿದ್ದು ಇಂಡಿಯನ್ ಸೋಶಿಯಲ್ ಫೋರಂ.
ಇಂಡಿಯನ್ ಸೋಶಿಯಲ್ ಫೋರಂ ಎಂಬುದು ಊರಿನಿಂದ ಹೋದ ಸ್ನೇಹಿತರು ಒಟ್ಟು ಸೇರಿ ಕಟ್ಟಿಕೊಂಡ ಸಂಘಟನೆ. ಇದೊಂದು ಸ್ವಯಂಸೇವಾ ಸಂಘಟನೆಯಾಗಿದ್ದು, ಊರಿನವರ ಹಿತ ಕಾಯಲು ಅವರಿಗೆ ನೆರವಾಗಲು ಸದಸ್ಯರು ಶ್ರಮಿಸುತ್ತಾರೆ. ಇಲ್ಲಿರುವ ಸದಸ್ಯರೂ ಉದ್ಯೋಗಿಗಳೇ. ಬಿಡುವಿನ ವೇಳೆಯಲ್ಲಿ ಇವರಿಗೆ ನೆರವಾಗುತ್ತಾರೆ.
ವೆಂಕಪ್ಪ ಪೂಜಾರಿಯವರು ತಮ್ಮ ಈ ಸ್ಥಿತಿಗೆ ವೇದನೆಪಟ್ಟುಕೊಂಡು ಕೂರುವ ಹೊತ್ತಿನಲ್ಲೇ ಊರಿಗೆ ಹೋಗಲು ಪ್ರಯತ್ನಿಸುತ್ತಿದ್ದರು. ಅಚಾನಕ್ ಆಗಿ ಇಂಡಿಯನ್ ಸೋಶಿಯಲ್ ಫೋರಂಗೆ ವೆಂಕಪ್ಪರ ಕತೆ ಗೊತ್ತಾಯಿತು. ಕೂಡಲೇ ವೆಂಕಪ್ಪ ರ ನೆರವಿಗೆ ಐಎಸ್‌ಎಫ್ ಧಾವಿಸಿತು. ವೆಂಕಪ್ಪ ಪೂಜಾರಿಯವರಿಗೆ ಊರಿಗೆ ಮರಳಲು ಹಣವಿಲ್ಲ, ಪಾಸ್ ಪೋರ್ಟ್ ಕೈಯಲ್ಲೂ ಇಲ್ಲ. ಅದನ್ನು ತೆಗೆದುಕೊಂಡು ಹೋದ ಮಾಲೀಕನ ಪತ್ತೆಯೇ ಇಲ್ಲ ಎಂಬುದನ್ನು ಮನಗಂಡ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರು ತಮ್ಮ ಸದಸ್ಯನ ಕೊಠಡಿಯಲ್ಲೇ ವೆಂಕಪ್ಪ ಪೂಜಾರಿಯವರನ್ನು ಇರಿಸಿಕೊಂಡರು. ಊರಿಗೆ ಮರಳಲು ಸಹಕರಿಸಿದರು. ತಮ್ಮ ಮನೆಯ ಸದಸ್ಯನಂತೆಯೇ ಅವರನ್ನು ನೋಡಿಕೊಂಡರು. ಅವರ ಮಾಲೀಕನನ್ನು ಸಂಪರ್ಕಿಸಿ ಬೇಕಾದ ವ್ಯವಸ್ಥೆ ಮಾಡಿದರು. ಈ ಪ್ರಯತ್ನದ ಫಲವಾಗಿ ವೆಂಕಪ್ಪ ಪೂಜಾರಿ ಕೊನೆಗೂ ಊರಿಗೆ ಮರಳಿದರು.