ಫರಂಗಿಪೇಟೆ

ತುಂಬೆ ಕುಡಿಯುವ ನೀರು ಶಾಶ್ವತ ಪರಿಹಾರಕ್ಕೆ ಹೋರಾಟ ಸಮಿತಿ

ತುಂಬೆ ಗ್ರಾಮದ ಕುಡಿಯುವ ನೀರು ಶಾಶ್ವತ ಪರಿಹಾರಕ್ಕೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಶುಕ್ರವಾರ ತುಂಬೆ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಶಾಸ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷಾತೀತವಾಗಿ 27 ಮಂದಿಯನ್ನೊಳಗೊಂಡ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು.

ಹೋರಾಟದ ಪ್ರಥಮ ಹಂತವಾಗಿ ತುಂಬೆಯಿಂದ ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಕೆಯಾಗುತ್ತಿರುವ 18 ಎಂಜಿಡಿ ಪೈಪ್‌ಲೈನ್‌ನಿಂದ ತುಂಬೆ ಗ್ರಾಮಕ್ಕೂ ನೀರು ಸರಬರಾಜು ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ, ವಿಪ ಸದಸ್ಯರು, ಜಿಲ್ಲಾಧಿಕಾರಿ, ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ, ಮಂಗಳೂರು ಮಹಾ ನಗರ ಪಾಲಿಕೆಗೆ ಮನವಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕೆ ಸೂಕ್ತ ರೀತಿಯ ಸ್ಪಂದನೆ ಸಿಗದೆ ಇದಲ್ಲಿ ತುಂಬೆ ರೇಚಕ ಸ್ಥಾವರಕ್ಕೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಪ್ರಸ್ತಾವಿಕವಾಗಿ ಮಾತನಾಡಿದ ತುಂಬೆ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ, ಮಂಗಳೂರು ಮಹಾ ನಗರ ಪಾಲಿಕೆ, ಉಳ್ಳಾಲ ನಗರಸಭೆ, ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಗೆ ತುಂಬೆಯಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ.ನೀರಿನ ಸ್ಥಾವರ ನಿರ್ಮಾಣ ಹಾಗೂ ಪೈಪ್‌ಲೈನ್ ಅಳವಡಿಸಲು ತುಂಬೆ ಗ್ರಾಮದ ಹಲವಾರು ಮಂದಿ ಜಮೀನು ಕಳೆದುಕೊಂಡಿದ್ದಾರೆಯಾದರೂ ನೀರಿನ ಸೌಲಭ್ಯ ಮಾತ್ರ ಗ್ರಾಮಸ್ಥರಿಗೆ ಈವರೆಗೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ತುಂಬೆ ವೆಂಟೆಡ್ ಡ್ಯಾಂ ನಿರ್ಮಾಣದಿಂದಾಗಿ ಉಬ್ಬರ ಇಳಿತದ ಸಂದರ್ಭದಲ್ಲಿ ನೇತ್ರಾವತಿ ನದಿಗೆ ಉಪ್ಪು ನೀರು ಬರುತ್ತಿದ್ದು ತುಂಬೆ ಗ್ರಾಮದ ಬಾವಿ, ಕೊಳವೆ ಬಾವಿಯ ನೀರೂ ಉಪ್ಪಾಗಿದೆ. ಇದನ್ನೇ ಗ್ರಾಮಸ್ಥರು ಬಳಕೆಮಾಡುವಂತಾಗಿದೆ. ಇದಕ್ಕಾಗಿ ತುಂಬೆಗೆ ಶಾಸ್ವತ ಶುದ್ದ ಕುಡಿಯುವ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಳ್ಳಿಗೆ ಪಂಚಾಯತ್ ವ್ಯಾಪ್ತಿಗೆ ಕಲ್ಪಿಸಿದ ರೀತಿಯಲ್ಲೇ ಮಂಗಳೂರು ಮಹಾ ನಗರ ಪಾಲಿಕೆಗೆ ಕುಡಿಯುವ ನೀರು ಸರಬರಾಜಾಗುತ್ತಿರುವ ಪೈಪ್‌ಲೈನ್‌ನಿಂದಲೇ ತುಂಬೆ ಗ್ರಾಮಕ್ಕೂ ನೀರು ಒದಗಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒತ್ತಡ ಹೇರಲು ಈ ಹೋರಾಟ ಸಮಿತಿಯನ್ನು ರಚಿಸಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಹೇಮ ಜಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಗಣೇಶ್ ಸುವರ್ಣ, ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು, ಸದಸ್ಯರಾದ ಝಹೂರು ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಹೇಮ ಜಿ. ಪೂಜಾರಿ, ಗಣೇಶ್ ಸುವರ್ಣ, ಮುಹಮ್ಮದ್ ವಳವೂರು, ಗಣೇಶ್ ಸಲ್ಯಾನ್, ಪ್ರಕಾಶ್ ಬಿ. ಶೆಟ್ಟಿ, ಝಹೂರು ಅಹ್ಮದ್, ಲೋಕನಾಥ ತುಂಬೆ, ಅಬ್ದುಲ್ ಅಝೀಝ್, ಅರುಣ್ ಕುಮಾರ್ ಬೊಳ್ಳಾರಿ, ಅಮೀರ್ ಕೆ.ಎಸ್., ಮುಹಮ್ಮದ್ ಇರ್ಫಾನ್, ಕಿಶೋರ್ ರಾಮಲ್‌ಕಟ್ಟ, ಮುಹಮ್ಮದ್ ಕಾಣೆಮಾರ್, ಮನೋಹರ್ ಕೊಟ್ಟಾರಿ, ಚಂದ್ರಪ್ರಕಾಶ್ ಶೆಟ್ಟಿ, ಇಮ್ತಿಯಾಝ್ ಎ.ಕೆ., ಪ್ರಕಾಶ್ ರೊಟ್ಟಿಗುಡ್ಡೆ, ಸಂಜೀವ ಪೂಜಾರಿ, ದೇವದಾಸ್, ಆತಿಕಾ ಬಾನು, ಹರಿಣಾಕ್ಷಿ, ರಾಜು ಗಾಣದಲಚ್ಚಿಲು, ಅಬ್ದುಲ್ಲಾ, ಪ್ರಕಾಶ್ ಆಚಾರಿ, ರವೀಂದ್ರ ಕಂಬಳಿ, ಮೋನಪ್ಪ ಮಜಿ, ಜಗದೀಶ್ ಗಟ್ಟಿ ಇವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ