ಸಾಂಸ್ಕೃತಿಕ

ನೆನಪಿನಲ್ಲಿ ಉಳಿದ ಸಮರ್ಪಣ್ ನೃತ್ಯೋತ್ಸವ

ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4,5ರಂದು ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ನೃತ್ಯ ಹಬ್ಬ ‘ಸಮರ್ಪಣ್-2017’ ನಾಲ್ಕನೇ ಕಾರ್ಯಕ್ರಮ ಕಲಾರಸಿಕರನ್ನು ರಂಜಿಸಿತು.
ಕಾವ್ಯಾ ಮಹೇಶ್, ದಕ್ಷಿಣಾ ವೈದ್ಯನಾಥನ್, ಹೈದರಾಬಾದ್‌ನ ಪೂರ್ವ ಧನಶ್ರೀ, ಮಂಗಳೂರಿನ ರಮ್ಯಾ ರಾವ್, ಬೆಂಗಳೂರಿನ ಸ್ವೀಕೃತ್ ಬಿ.ಪಿ. ಹಾಗೂ ಶ್ವೇತಾ ಪ್ರಚಂಡೆ ನೃತ್ಯ ಪ್ರದರ್ಶನ ಮೂಲಕ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನೋಡುಗರನ್ನು ಬೆರಗುಗೊಳಿಸಿತು. ಕಲಾ ವಿಮರ್ಶಕ ಹಾಗೂ ಇತಿಹಾಸಜ್ಞ ಪ್ರೊ.ಆಶಿಷ್ ಮೋಹನ್ ಖೋಕರ್ ಸಂಸ್ಥೆ ಹಾಗೂ ಯುವ ಪ್ರತಿಭೆಗಳ ಕಾರ್ಯ ಶ್ಲಾಘಿಸಿದರು.
ಮಂಗಳೂರಿನ ಉದಯೋನ್ಮುಖ ಪ್ರತಿಭೆ, ರಾಧಿಕಾ ಶೆಟ್ಟಿ ಅವರ ಶಿಷ್ಯೆ ಕಾವ್ಯಾ ಮಹೇಶ್ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಎಲ್ಲ ವಿಘ್ನ ನಿವಾರಣೆಗೆ ಗಣೇಶ ಸ್ತುತಿಗೆ ರೂಪಕ ಆರಂಭಿಸಿ, ದ್ವಿತೀಯ ನೃತ್ಯದಲ್ಲಿ ಅಭಿನಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪುರಂದರ ದಾಸರ ‘ಅಮ್ಮ ನಿಮ್ಮ ಮನೆಗಳಲ್ಲಿ’ ಮನೋಜ್ಞವಾಗಿ ಭಾವನೆಯನ್ನು ವ್ಯಕ್ತಪಡಿಸಿ, ತಿಲ್ಲಾನದೊಂದಿಗೆ ನೃತ್ಯ ಕೊನೆಗೊಳಿಸಿದರು.
ದೆಹಲಿಯ ದಕ್ಷಿಣಾ ವೈದ್ಯನಾಥನ್ ಸನ್ನಿವೇಶ ಆಧರಿತ ಏಕ ಭರತನಾಟ್ಯ ರೂಪಕ (ಶೂರ್ಪನಖಿ)ಮನಮೋಹಕವಾಗಿತ್ತು. ಶೂರ್ಪನಖಿಯ ಸೇಡು ಹಾಗೂ ಚತುರತೆಯನ್ನು ಕಲಾವಿದೆ ಚೆನ್ನಾಗಿ ಬಿಂಬಿಸಿದರು. ಸೋದರನೇ ತನ್ನನ್ನು ವಿಧವೆ ಮಾಡಿದ ಎಂಬ ನೋವಿನ ಆಳದಿಂದ ಹೊರಬರಲು ಲಂಕೆ ತೊರೆದು ಭಾರತಕ್ಕೆ ಬರುತ್ತಾಳೆ. ಆಗ ಕಾಡಿನಲ್ಲಿ, ನಿರ್ಜನ ಪ್ರದೇಶಗಳಲ್ಲಿ ಅಲೆದು ಕೊನೆಗೆ ಆಕೆಯ ಕಣ್ಣುಗಳು ದೇವರಾದ ಶ್ರೀರಾಮನ ಮೇಲೆ ಬೀಳುತ್ತದೆ. ಈ ಚಿತ್ರಣ ಜನರ ಮನಸ್ಸಿನಲ್ಲಿ ಉಳಿಯುವಂತೆ ರೂಪಕದ ಮೂಲಕ ಸುಂದರವಾಗಿ ಮನೋಜ್ಞ ಅಭಿನಯದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿದ್ದಾರೆ ದಕ್ಷಿಣಾ ವೈದ್ಯನಾಥನ್.
2ನೇ ದಿನದ ಮೊದಲ ಭರತನಾಟ್ಯ ಪ್ರದರ್ಶನ ನೃತ್ಯ ಭಾರತಿಯ ಗೀತಾ ಸರಳಾಯ ಹಾಗೂ ರಶ್ಮಿ ಚಿದಾನಂದ ಅವರ ಶಿಷ್ಯೆ ಮಂಗಳೂರಿನ ರಮ್ಯಾ ರಾವ್ ಅವರಿಂದ ಆರಂಭಗೊಂಡಿತು. ಈಕೆಯ ಕಲಾಪ್ರೌಢಿಮೆ, ನೃತ್ಯದ ಭಂಗಿ ಜನರನ್ನು ಮಂತ್ರಮುಗ್ಧಗೊಳಿಸಿತು. ಅಂಬಾ ಸ್ತುತಿ, ಶಿವ ಸ್ತುತಿ ಹಾಗೂ ಜಾವಳಿ ನೃತ್ಯದ ಮೂಲಕ ರೂಪಕದ ಮೆರುಗನ್ನು ರಮ್ಯಾ ಹೆಚ್ಚಿಸಿದರು.
ಬೆಂಗಳೂರಿನ ಕಥಕ್ ನೃತ್ಯಪಟು ಸ್ವೀಕೃತ್ ಬಿ.ಪಿ. ಅವರ ರೂಪಕ ಜನರನ್ನು ಪೂರ್ಣವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಸಾಂಪ್ರದಾಯಿಕ ಕಥಕ್ ನೃತ್ಯ ಭಂಡಾರದಿಂದ ಆಯ್ದು ಗಣೇಶ ವಂದನಾ, ತೀನ್ ತಾಲ್, ಮಧುರಾಷ್ಟಕಂ ಪ್ರಸ್ತುತಪಡಿಸಿ ಕೊನೆಗೆ ತರಾನಾ ಮೂಲಕ ನೃತ್ಯ ಕೊನೆಗೊಳಿಸಿದರು.
ದ್ವಿತೀಯ ದಿನದ ಕೊನೆಗೆ ಚೆನ್ನೈ ಮೂಲದ ಭರತನಾಟ್ಯ ಕಲಾವಿದೆ ಶ್ವೇತಾ ಪ್ರಚಂಡೆ ಅವರಿಂದ ಭರತನಾಟ್ಯ ಪ್ರದರ್ಶನ ಉತ್ತಮ ಗುಣಮಟ್ಟದಿಂದ ಕೂಡಿತ್ತು. ವೇದಿಕೆಯಲ್ಲಿ ಅವರು ನೃತ್ಯ ಪ್ರದರ್ಶಿಸಿದ ರೀತಿ ನೆರೆದ ಸಭಿಕರನ್ನು ಅವರೆಡೆಗೆ ಸೆಳೆಯಿತು. ಮಲ್ಹಾರಿ ಯೊಂದಿಗೆ ರೂಪಕ ಆರಂಭ ಮಾಡಿ ಖಮಾಸ್‌ನಲ್ಲಿ ಪ್ರಸಿದ್ಧ ದರು ವರ್ಣಂ ಮುಂದುವರೆದು ಪದಂ ಹಾಗೂ ಜಾವಳಿ ರೂಪಕ ಪ್ರದರ್ಶಿಸಿದರು. ತಿಲ್ಲಾನದೊಂದಿಗೆ ಅವರ ನೃತ್ಯ ಕೊನೆಗೊಂಡಿತು.
ವಿಲಾಸಿನಿ ನಾಟ್ಯ ಆಂಧ್ರಪ್ರದೇಶದ ಒಂದು ಸುಂದರ ನಾಟ್ಯ ಪ್ರಕಾರ. ಇದನ್ನು ಸಮರ್ಪಣ್ ಮೂಲಕ ಮಂಗಳೂರ ಜನತೆಗೆ ಪರಿಚಯಿಸಿದವರು ಹೈದರಾಬಾದ್ ಮೂಲದ ಕಲಾವಿದೆ ಪೂರ್ವಧನಶ್ರೀ. ಶ್ಲೋಕದೊಂದಿಗೆ ನೃತ್ಯ ಆರಂಭಿಸಿದ ಅವರು, ಜತಿಸ್ವರಂ ಮೂಲಕ ಜನರಿಗೆ ವಿಲಾಸಿನಿ ನಾಟ್ಯದ ರುಚಿ ತೋರಿಸಿದರು. ಪ್ರತಿ ಪದವನ್ನೂ ಸುಂದರವಾಗಿ ವರ್ಣದ ಮೂಲಕ ಕಲಾತ್ಮಕವಾಗಿ ವಿವರಿಸುವ ಮೂಲಕ ಮೊದಲ ದಿನದ ನೃತ್ಯ ಪ್ರದರ್ಶನ ಕೊನೆಗೊಂಡಿತು.
ಮಂಗಳೂರಿನ ಸ್ಥಳೀಯ ನೃತ್ಯ ಪ್ರತಿಭೆಗಳಿಗೆ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಲು ಅವಕಾಶ ಸಿಗಬೇಕು ಎಂಬುದು ನಮ್ಮ ಆಶಯ. ಬೇರೆ ಊರುಗಳಿಂದ ಪ್ರತಿಭಾನ್ವಿತ ನರ್ತಕಿರಯನ್ನು ಕರೆಸಿ ಇತರ ಕಲಾ ಪ್ರಕಾರವನ್ನು ಇಲ್ಲಿನ ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದು ಇನ್ನೊಂದು ಉದ್ದೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಹೇಳಿದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts