ಆರಾಧನೆ

ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

ಪ್ರೊ. ರಾಜಮಣಿ ರಾಮಕುಂಜ

www.bantwalnews.com

ರಾಯಿಯಿಂದ ಮೂರ್ಜೆಗೆ ಹೋಗುವ ದಾರಿಯಲ್ಲಿಯ ವಾಮದಪದವಿನಿಂದ 2 ಕಿಲೋಮೀಟರ್ ದೂರದಲ್ಲಿ ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನಿಂದ ನಾರಾವಿ ಮಾರ್ಗದಲ್ಲಿ 22 ಕಿ.ಮೀ. ಅಂತರದಲ್ಲಿದೆ.

ಕರಿಶಿಲೆಯಿಂದ ಕೆತ್ತಲ್ಪಟ್ಟ ಶ್ರೀ ವಿಷ್ಣುಮೂರ್ತಿಯ ನಿಂತ ಭಂಗಿಯ ಈ ವಿಗ್ರಹವು ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ಚತುರ್ಭುಜವುಳ್ಳದ್ದಾಗಿದೆ. ಸುಮಾರು 2 ಅಡಿಗಳಷ್ಟು ಎತ್ತರವಿರುವ ಈ ವಿಗ್ರಹವು ಯಾರನ್ನಾದರೂ ಆಕರ್ಷಿಸುವಂತಹದು.

ಏಕಚಿತ್ತದಿಂದ ಪ್ರಾರ್ಥಿಸಿದವರಿಗೆ ವಿವಾಹಯೋಗ, ಸಂತಾನಪ್ರಾಪ್ತಿಯನ್ನು ಕರುಣಿಸುತ್ತಿರುವ ಭಕ್ತವತ್ಸಲನಾದ ಶ್ರೀ ವಿಷ್ಣುಮೂರ್ತಿಯ ಪ್ರತಿಷ್ಟಾಪನೆ, ಕರ್ನಾಟಕವನ್ನು ಆಳುತ್ತಿದ್ದ ಮಯೂರವರ್ಮ, ಈತನ ಮಗನಾದ ಚಂದ್ರಾಗದನ ಕಾಲದಲ್ಲಿ ಆಗಿರಬೇಕೆಂದು ತಿಳಿದುಬರುತ್ತದೆ.

2003ರಲ್ಲಿ ಬ್ರಹ್ಮಕಲಶೋತ್ಸವವನ್ನು ಕಂಡ ಈ ದೇವಾಲಯಕ್ಕೆ ಸಾಕಷ್ಟು ಆಸ್ತಿ ಇದ್ದಿದ್ದರೂ ಈಗ ಅದೆಲ್ಲವೂ ಪರಾಭಾರೆಯಾಗಿದೆ. ಊರ ಭಕ್ತಾದಿಗಳ ಪರಿಶ್ರಮ, ಯುವಕರ ಸಾಂಘಿಕ ಶಕ್ತಿ, ಛಲದಿಂದಾಗಿ ನಿತ್ಯ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ವಿಷ್ಣುಮೂರ್ತಿಯೊಂದಿಗೆ ಗಣಪತಿಯ ಆರಾಧನೆಯೂ ಮುಖ್ಯವಾಗಿ ಇಲ್ಲಿ ನಡೆಯುತ್ತಿದೆ. ರಂಗಪೂಜೆ ಇಲ್ಲಿ ನಡೆಯವ ಮುಖ್ಯ ಸೇವೆ. ಇದರ ಜತೆಯಲ್ಲಿ ವಿಷ್ಣು ಸಂಬಂಧಿ ಇತರ ಸೇವೆಗಳು ನಡೆಯುತ್ತದೆ.

ದಿನಾಂಕ 6 ನೇ ಸೋಮವಾರದಿಂದ ದಿನಾಂಕ 8 ಬುಧವಾರ ಪರ್ಯಂತ ಶ್ರೀ ದೇಗುಲದಲ್ಲಿ ಪ್ರತಿಷ್ಟಾ ವರ್ಧಂತಿ ಹಾಗೂ ವರ್ಷಾವಧಿ ಜಾತ್ರೆಯು ನಡೆಯುತ್ತದೆ. ಪ್ರಧಾನ ಹೋಮ, ಕಲಷಾಭಿಷೇಕ, ಪ್ರಸನ್ನ ಪೂಜೆ ಹಾಗೂ 39ನೇ ವರ್ಷದ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಪಡುಸವಾರಿ, ಕಟ್ಟೆಪೂಜೆ, ದೇವರ ಉತ್ಸವದೊಂದಿಗೆ ದಿನಾಕ 7ನೇ ಮಂಗಳವಾರ ಬೆಳಗ್ಗೆ 11 ಕ್ಕೆ ದರ್ಶನೋತ್ಸವ, ಬಟ್ಟಲು ಕಾಣಿಕೆ, ಮಹಾಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ ಗಂಟೆ 6 ರಿಂದ ಮೂಡು ಸವಾರಿ, ಕಟ್ಟೆಪೂಜೆ, ದೇವರ ಉತ್ಸವ, ಭೂತ ಬಲಿ, ಕವಾಟ ಬಂಧನವಾಗಿ ದಿನಾಂಕ 8 ರ ಬುಧವಾರ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ದಿವ್ಯ ದರ್ಶನ; ಬೆಳಗ್ಗೆ 8ಕ್ಕೆ ವಿಷ್ಣುಯಾಗ, ಗಂಟೆ 10ಕ್ಕೆ ತುಲಾಭಾರ ಸೇವೆ, ಚೂರ್ಣೋತ್ಸವ; ರಾತ್ರಿ ಗಂಟೆ 7ರಿಂದ ಕರ್ನಾಟಕ ಸರಕಾರದ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಶ್ರೀ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿಯಲ್ಲಿ ವಿಷ್ಣುಪ್ರಸಾದಪ್ರಶಸ್ತಿ ಪ್ರದಾನ ನಡೆಯಲಿದೆ. ರಾತ್ರಿ ಗಂಟೆ 8ರಿಂದ ಶ್ರೀ ದೇವರ ಮಹೋತ್ಸವ, ದೈವಗಳ ಗಗ್ಗರ ಸೇವೆ, ದೇವರ ಹಾಗೂ ದೈವಗಳ ಭೇಟಿ, ಓಕುಳಿ ಉತ್ಸವ, ಅವಭೃತ ಸ್ನಾನದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳುತ್ತದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ