ಆರಾಧನೆ

ನಾವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

  • ಪ್ರೊ. ರಾಜಮಣಿ ರಾಮಕುಂಜ

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

ಬಿ.ಸಿ.ರೋಡ್ ಧರ್ಮಸ್ಥಳ ರಸ್ತೆಯಲ್ಲಿ ೨ ಕಿಲೋಮೀಟರ್ ಮುಂಬರಿದಾಗ ಬಲಬದಿಗೆ ಸಿಗುವ ಸರಪಾಡಿ ರಸ್ತೆಯಲ್ಲಿ ೧ ಕಿಲೋಮೀಟರ್ ದೂರದಲ್ಲಿ ಸಿಗುವುದೇ ನಾವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಚಕ್ರ, ಶಂಖ, ಗದಾ, ಪದ್ಮವನ್ನು ತನ್ನ ಹಸ್ತಗಳಲ್ಲಿ ಹೊಂದಿರುವ ವಿಷ್ಣುಮೂರ್ತಿಯ ಶಿಲ್ಪ ಕಪ್ಪು ದೊರಗು ಕಲ್ಲಿನದು. ನೇತ್ರಾವತಿ ನದಿಯ ಬಲ ದಂಡೆಯಲ್ಲಿರುವ ಈ ದೇವಾಲಯದ ಮೂರ್ತಿ ಸೋದೆ ವಾದಿರಾಜರ ಪ್ರತಿಷ್ಠೆಯೆಂದು ಹೇಳಲಾಗುತ್ತಿದೆ. ವಿಷ್ಣುಮೂರ್ತಿ ಗುಡಿಯ ಬಲ ಮೂಲೆಯಲ್ಲಿ ಸುಮಾರು ೧೨೦೦ ವರ್ಷಗಳ ಹಿಂದಿನ ಪ್ರತಿಷ್ಠೆಯೆಂದು ಹೇಳಲಾದ ಈಶ್ವರನ ಗುಡಿಯಿದೆ. ಆದ ಕಾರಣ ಶಿವನೇ ಇಲ್ಲಿ ಪ್ರಧಾನ ಆರಾಧ್ಯ  ದೇವರೆಂದು ಜನ ಜನಿತ ಮಾತು.

ಸುತ್ತಲೂ ಗೋಪುರ ಹಾಗೂ ತೀರ್ಥ ಮಂಟಪವನ್ನು ಹೊಂದಿರುವ ಈ ದೇವಾಲಯದಲ್ಲಿ ಗರ್ಭ ಗುಡಿಯ ಸುತ್ತ ಪ್ರದಕ್ಷಿಣಾ ಪಥವಿದೆ. ಅರ್ಧ ಸೇರು ನೈವೇದ್ಯದೊಂದಿಗೆ ಒಂದು ಹೊತ್ತು ಪೂಜೆ ನಡೆಯುತ್ತಿದೆ. ಮಕರ ಮಾಸ ೨೩ ಸಲುವ ಸಾಧಾರಣ ಫೆಬ್ರವರಿ ೫ ಅಥವಾ ಆರರಂದು ಒಂದು ದಿನದ ಜಾತ್ರೆ ನಡೆಯುತ್ತದೆ. ಕಾರ್ತಿಕ ಹುಣ್ಣಿಮೆಯಂದು ದೀಪೋತ್ಸವ ಹಾಗೂ ಸಮಾರಾಧನೆ ನಡೆಯುತ್ತದೆ.

ಪ್ರಕೃತ, ಶಿಲೆಗಳ ಕೆತ್ತನೆಯ ಕೆಲಸಗಳು ನಡೆಯುತ್ತಿದ್ದು ದೇವಾಲಯ ಪುನರ್ ನಿರ್ಮಾಣದ ಹೊಸ್ತಿಲಲ್ಲಿದೆ.

ಈ ದೇವಾಲಯದ ನೈಋತ್ಯ ಭಾಗದಲ್ಲಿ ನೀರ ಕಟ್ಟೆ(ದಂಡ ತೀರ್ಥ) ಅನ್ನುವ ಪ್ರದೇಶವಿದೆ. ಸೋದೆ ಸ್ವಾಮೀಜಿಯೋರ್ವರು ತನ್ನ ದಂಡವನ್ನು ನದಿಗೆ ಅಡ್ಡಲಾಗಿ ಇಟ್ಟು ನೀರನ್ನು ನಿಲ್ಲಿಸಿ ಸ್ನಾನ ಮಾಡಿದರೆಂದೂ ಇದರಿಂದಾಗಿ ನಂದ ಅರಸರಿಗೆ ನದಿಯಲ್ಲಿ ನೀರು ಇಲ್ಲವಾಗಿ, ಇದರ ವಿಷಯವನ್ನು ತಿಳಿದ ಆತ ಸ್ವಾಮಿಗಳಿಗೆ ನೀರನ್ನು ಬಿಡುವಂತೆ ಕೇಳಿಕೊಂಡನೆಂದೂ ಪ್ರತಿಯಾಗಿ ಸ್ವಾಮಿಗಳ ಸುಪರ್ದಿಗೆ ೪೦೦ ಮುಡಿ ಗದ್ದೆಯನ್ನು ಪುಂಡಿಬೈಲು ಅನ್ನುವಲ್ಲಿ ಬಿಟ್ಟು ಕೊಟ್ಟನೆಂದೂ ಪ್ರತೀತಿ. ಇದಕ್ಕೆ ಸಾಕ್ಷಿ ಎನ್ನುವಂತೆ, ಇಲ್ಲೇ ಸಮೀಪದಲ್ಲಿ ಸೋದೆ ಮಠಕ್ಕೆ ಸಂಬಂಧಿತ ಚೆನ್ನ ಕೇಶವ ಮಠವಿದೆ. ಹೀಗೆ ನದಿಗೆ ದಂಡವನ್ನು ಇಟ್ಟ ಜಾಗ ದಂಡ ತೀರ್ಥವೆಂದಾಯಿತು.

ದಿನಾಂಕ ೬.೦೨.೨೦೧೭ ರಂದು ಇಲ್ಲಿ ಜಾತ್ರಾ ಸಂಭ್ರಮಕ್ಕೆ ನಾಂದಿ. ಬೆಳಿಗ್ಗೆ ಗಂಟೆ ೭ಕ್ಕೆ ಪ್ರಾರ್ಥನೆ, ಪುಣ್ಯಾಹವಾಚನ; ೯ರಿಂದ ಗಣಹೋಮ, ಪ್ರತಿಷ್ಠಾ ಕಲಶ, ಕಲಶಾಭಿಷೇಕ, ಏಕಾದಶ ರುದ್ರ; ಮಧ್ಯಾಹ್ನ ಹನ್ನೆರಡಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ; ಸಂಜೆ ಗಂಟೆ 6ರಿಂದ ಸಾಸ್ಕೃತಿಕ ಕಾರ್ಯಕ್ರಮ; ರಾತ್ರಿ ಗಂಟೆ 7.30 ಕ್ಕೆ ರಂಗಪೂಜೆ; ಗಂಟೆ9 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ; ಕಲ್ಲುರ್ಟಿ ವ್ಯಾಘ್ರ ಚಾಮುಂಡಿ ದೈವಗಳಿಗೆ ನೇಮೋತ್ಸವ; ದಿನಾಂಕ ೭.೦೨.೨೦೧೭ನೇ ಮಂಗಳವಾರ ಮಂತ್ರಾಕ್ಷತೆಯೊಂದಿಗೆ ಮಂಗಳ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts