ಮಕ್ಕಳ ಮಾತು

ಅಮ್ಮ ಸಟ್ಟುಗ ಬಿಸಿಮಾಡಿ ಇಟ್ಟದ್ದು..

 ಬೋರ್ಡ್ ನಲ್ಲಿ ಉತ್ತರ ಬರೆಯಲೆಂದು ಶಿಕ್ಷಕಿ ಚಾಕ್ ಕೊಟ್ಟಾಗ, ಸಪ್ಪೆ ಮೋರೆ ಹಾಕಿಕೊಂಡೇ ಅದನ್ನು ತೆಗೆದುಕೊಂಡ ಹುಡುಗ ಬೋರ್ಡ್ ಮೇಲೆ ಬರೆಯುತ್ತಲೇ ಕಣ್ಣಂಚಿನಿಂದ ನೀರು ಹರಿಯತೊಡಗಿತು. ಶಿಕ್ಷಕಿಗೂ ಯಾಕೋ ಮನಸ್ಸು ತಡೆಯಲಿಲ್ಲ. ಹುಡುಗನನ್ನು ಹತ್ತಿರ ಕರೆದು ಕೇಳಿದರು, ಯಾಕೆ ಕೂಗ್ತಾ ಇದ್ದೀ..ಎಂದಾಗ ಅವನ ಅಳು ಹೆಚ್ಚಾಯ್ತು..

 

ಮೌನೇಶ ವಿಶ್ವಕರ್ಮ

www.bantwalnews.com

ಅಂಕಣ: ಮಕ್ಕಳ ಮಾತು

ಬಂಟ್ವಾಳ ತಾಲೂಕಿನ ಶಾಲೆಯದು. ಅವನೊಬ್ಬ ತುಂಟ ಹುಡುಗ, ಅವನ ವರ್ತನೆಗಳೇ ಹಾಗಿತ್ತು. ಶಾಲೆಯ ಶಿಸ್ತನ್ನೂ ಆತ ಪಾಲಿಸುತ್ತಿರಲಿಲ್ಲ. ಅವನಪಾಡಿಗೆ ಅವನಿರುತ್ತಿದ್ದ. ಎಲ್ಲಾ ಮಕ್ಕಳೂ ಅವನನ್ನು ದೂರವಿಡುತ್ತಿದ್ದರು. ಶಾಲೆಯ ಬಹುತೇಕ ಶಿಕ್ಷಕರ ಬಾಯಲ್ಲಿ ಆ ಹುಡುಗ ಪೋಕ್ರಿ ಹುಡುಗ ಎಂಬ ಹೆಸರು ಪಡೆದಿದ್ದ. ಕಲಿಕೆಯಲ್ಲೂ ಹಿಂದುಳಿದಿದ್ದ, ಅವನ ಅಕ್ಷರವೂ ಚೆನ್ನಾಗಿರಲಿಲ್ಲ. ಶಾಲೆಯೊಳಗಿನ ವಿವಿಧ ಚಟುವಟಿಕೆಗಳ ಅವಧಿಯಲ್ಲಿ ಬಹುತೇಕ ಶಿಕ್ಷಕರು, ವಿದ್ಯಾರ್ಥಿಗಳು ಅವನನ್ನು ಕಡೆಗಣಿಸುತ್ತಿದ್ದರಿಂದ ಅವನಲ್ಲಿ ಅನಾಥ ಪ್ರಜ್ಞೆ ಆವರಿಸಿತ್ತು.

ಆ ದಿನ ತರಗತಿಗೆ ಸಮಾಜ ಪಾಠಕ್ಕೆಂದು ಬಂದ ಶಿಕ್ಷಕಿಯೊಬ್ಬರು, ಆ ಹುಡುಗನನ್ನು ಗಮನಿಸಿದರು. ಯಾವತ್ತೂ ಲವಲವಿಕೆಯಿಂದ ತುಂಟತನಗಳನ್ನು ತೋರಿಸುತ್ತಿದ್ದ ಆ ಹುಡುಗನನ್ನು ಕಂಡು ಶಿಕ್ಷಕಿಗೆ ಅಚ್ಚರಿಯಾಯಿತು. ಯಾವುದೋ ಒಂದು ಸುಲಭದ ಪ್ರಶ್ನೆ ಕೇಳಿ ಆ ಹುಡುಗನನ್ನು ಬೋರ್ಡ್ ಬಳಿಗೆ ಕರೆದರು. ಉತ್ತರ ಗೊತ್ತಿಲ್ಲದಿದ್ದರೂ ಒಮ್ಮಿಂದೊಮ್ಮೆಲೇ ಓಡಿ ಬರುತ್ತಿದ್ದ ಆ ಹುಡುಗ ಅಂದು ನಿಧಾನಕ್ಕೆ ಬಂದುದೂ ಶಿಕ್ಷಕಿಯ ಗಮನಕ್ಕೆ ಬಂತು.

ಕೇಳಿದ ಪ್ರಶ್ನೆಗೆ ಬೋರ್ಡ್‌ನಲ್ಲಿ ಉತ್ತರ ಬರೆಯಲೆಂದು ಶಿಕ್ಷಕಿ ಚಾಕ್ ಕೊಟ್ಟಾಗ, ಸಪ್ಪೆ ಮೋರೆ ಹಾಕಿಕೊಂಡೇ ಅದನ್ನು ತೆಗೆದುಕೊಂಡ ಹುಡುಗ ಬೋರ್ಡ್ ಮೇಲೆ ಬರೆಯುತ್ತಲೇ ಕಣ್ಣಂಚಿನಿಂದ ನೀರು ಹರಿಯತೊಡಗಿತು. ಶಿಕ್ಷಕಿಗೂ ಯಾಕೋ ಮನಸ್ಸು ತಡೆಯಲಿಲ್ಲ. ಹುಡುಗನನ್ನು ಹತ್ತಿರ ಕರೆದು ಕೇಳಿದರು, ಯಾಕೆ ಕೂಗ್ತಾ ಇದ್ದೀ..?

ಆಗ ಅವನ ಅಳು ಹೆಚ್ಚಾಯ್ತು.. ಹಾಗೆ ಅಳುತ್ತಲೇ ಅಂಗಿಯ ತೋಳನ್ನು ಸರಿಸಿ ಬಲಗೈಯ ರಟ್ಟೆಯನ್ನು ತೋರಿಸಿದ. ಆಗ ಅಲ್ಲಿ ಕಂಡದ್ದು ಸುಟ್ಟುಹೋಗಿ ಕರಕಲಾದ ಚರ್ಮ.. ಟೀಚರ್ ಗೆ ಒಮ್ಮೆಲೇ ಆಘಾತ.. ತುಂಟ ಹುಡುಗನೆಂದು ಯಾವತ್ತೂ ಅವನನ್ನು ದೂರವಿಡುತ್ತಿದ್ದ ಆ ಶಿಕ್ಷಕಿಗೂ ಆವತ್ತು ಕರುಣೆ ಉಕ್ಕಿಬಂತು. ಏನಾದದ್ದು..? ಎಂದು ಕೇಳಿದಾಗ ಆ ಹುಡುಗ ಹೇಳಿದ್ದು ಇಷ್ಟು.. ಅಮ್ಮ ಕರೆದಾಗ ನಾನು ಹೋಗಲಿಲ್ಲ ಅಂತ ಅಮ್ಮ ಸಟ್ಟುಗ ಬಿಸಿ ಮಾಡಿ ಇಟ್ಟದ್ದು ಎನ್ನುತ್ತಲೇ ಜೋರಾಗಿ ಅತ್ತ. ಅವನ ತರಗತಿಯಲ್ಲಿದ್ದ ೫೨ ವಿದ್ಯಾರ್ಥಿಗಳ ಕಣ್ಣಲ್ಲೂ ಆ ಘಟನೆ ನೀರು ಬರಿಸಿತು. ಆ ಬಳಿಕ ಶಿಕ್ಷಕಿ ಅವನಿಗೆ ಸಮಾಧಾನಪಡಿಸಿದರು.. ಆ ದಿನ ಆ ಶಿಕ್ಷಕಿಗೂ ಪಾಠ ಮಾಡುವ ಮನಸ್ಸಾಗಲಿಲ್ಲವಾದರೆ, ತರಗತಿಯ ಮಕ್ಕಳಿಗೂ ಶಾಖ್ ನೀಡಿತ್ತು ಆ ಘಟನೆ.

ಮಕ್ಕಳು ಮಾತ್ರ ಮಾತಾಡುವುದಲ್ಲ. ಈ ಬಗ್ಗೆ ದೊಡ್ಡವರೂ ಮಾತಾಡಬೇಕಾಗಿದೆ. ಪ್ರೈಮರಿ ಶಾಲೆಯಲ್ಲಿ ಕಲಿಯುವ ಮಗ ಹೇಳಿದ ಮಾತು ಕೇಳುವುದಿಲ್ಲ ಎನ್ನುವ ಕಾರಣಕ್ಕೆ ತಾಯಿಯೇ ದೈಹಿಕ ಹಿಂಸೆ ನೀಡುವುದು ಎಷ್ಟು ಸರಿ..?

ಈ ಘಟನೆಯಲ್ಲಿ ಆ ಹುಡುಗನ ತಾಯಿ ನಡೆದುಕೊಂಡ ವರ್ತನೆಯನ್ನು ಗಮನಿಸಿದರೆ, ಆ ಹುಡುಗ ಅಷ್ಟು ತುಂಟನಾಗಲೂ ಆ ಮನೆಯ ಸನ್ನಿವೇಶಗಳೇ ಕಾರಣವಾಗಿರಬಹುದು ಎಂದೆನ್ನಿಸುತ್ತದೆ.

ಮನೆಯೊಳಗೆ ನಡೆಯುವ ಕೆಲ ಘಟನೆಗಳು ಮಕ್ಕಳಲ್ಲಿ ಉಂಟುಮಾಡುವ ಅನಾಥಪ್ರಜ್ಞೆ ಅವರಲ್ಲಿ ಉಂಟುಮಾಡುವ ಸಂವೇಗಗಳು ಮಕ್ಕಳ ಇಂತಹಾ ಮನಸ್ಥಿತಿಗೆ ಕಾರಣವಂತೆ. ಬ್ರಿಡ್ಜಸ್ ಎಂಬ ಮಾನಸಿಕ ತಜ್ಞರು ಹೇಳುವಂತೆ, ಇಂತಹಾ ಘಟನೆಗಳು ಅಹಿತಕರ ಸಂವೇಗಗಳ ಹುಟ್ಟುವಿಕೆಗೆ ಕಾರಣವಾಗುತ್ತದೆಯಂತೆ. ಮಕ್ಕಳಲ್ಲಿ ಭಯ,ಚಿಂತೆ, ಉದ್ವಿಗ್ನತೆ, ಕೋಪ ಮೊದಲಾದ ಅಹಿಸಂವೇಗಗಳು ಜೊತೆಯಾಗಿ ಮಕ್ಕಳು ತುಂಟತನಗಳನ್ನೇ ಬೆಳೆಸಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಮಾನಸಿಕವಾಗಿ ಪ್ರತ್ಯೇಕಿಸಲ್ಪಡುತ್ತಾರೆ. ಅವರ ವರ್ತನೆಗಳಿಗೆ ಸಮಾನಮನಸ್ಕರು ಸಿಕ್ಕಾಗ ಮಕ್ಕಳು ದಾರಿತಪ್ಪುವ ಸಾಧ್ಯತೆಯೇ ಹೆಚ್ಚು ಎಂದರೆ ತಪ್ಪಾಗಲಾರದು. ಮೇಲಿನ ಘಟನೆಯಲ್ಲಿ ಆ ಹುಡುಗನೊಂದಿಗೆ ಅಮ್ಮ ನಡೆದುಕೊಂಡ ಬಗೆಯೂ ಮಗುವನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸುತ್ತದೆ. ಇಂತಹಾ ಘಟನೆಗಳು ಅವರಲ್ಲಿ ಸೇಡು,ದ್ವೇಷದ ಭಾವನೆಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಮಾತ್ರವಲ್ಲದೆ ಮಕ್ಕಳು ಖುಷಿಯನ್ನು ಕಂಡುಕೊಳ್ಳಲು ತಪ್ಪುದಾರಿಯನ್ನು ಹಿಡಿಯುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇಂತಹಾ ಸಂದರ್ಭದಲ್ಲಿ ಮಕ್ಕಳನ್ನು ಅವರ ಅರಿವಿಗೆ ಬಾರದ ರೀತಿಯಲ್ಲಿ ತಮ್ಮವರನ್ನಾಗಿ ಮಾಡಿಕೊಳ್ಳಬೇಕು, ಮನೆಮಕ್ಕಳು ಮನೆಮಂದಿಯನ್ನು ಪ್ರೀತಿಸದೇ ಇದ್ದರೆ ಇನ್ನಾರನ್ನು ಪ್ರೀತಿಸಿಯಾರು..? ಅದಕ್ಕೆ ಪೂರಕವಾದ ವಾತಾವರಣವನ್ನು ಮನೆಗಳಲ್ಲಿ ಉಂಟುಮಾಡುವ ಹೊಣೆಗಾರಿಕೆ ನಮ್ಮ-ನಿಮ್ಮ ಮೇಲಿದೆ ಅಲ್ವಾ..?

Pls write your comments to bantwalnews@gmail.com

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma

Recent Posts