ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಫೆ.೬ರಂದು ಬೆಳಗ್ಗೆ ೯.೪೫ರಿಂದ ಪಠ್ಯೇತರ ಕಲಿಕೆ, ಅವಕಾಶ ಮತ್ತು ಸವಾಲುಗಳು ವಿಷಯದ ಬಗ್ಗೆ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯುವುದು.
ಸಚಿವ ಬಿ.ರಮಾನಾಥ ರೈ ವಿಚಾರಸಂಕಿರಣ ಉದ್ಘಾಟಿಸುವರು. ಹಂಪಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಆಶಯ ಭಾಷಣ ಮಾಡಲಿರುವರು ಎಂದು ಕಾಲೇಜು ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ ಭಟ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ವಿಚಾರಸಂಕಿರಣದಲ್ಲಿ ಮಂಗಳೂರು ವಿವಿಯ ಡಾ.ಪಿ.ಎಲ್. ಧರ್ಮ, ಉಜಿರೆ ಎಸ್.ಡಿ.ಎಂ.ನ ಡಾ.ಜಯಕುಮಾರ ಶೆಟ್ಟಿ, ಮಂಗಳೂರು ಸರಕಾರಿ ಕಾಲೇಜಿನ ಡಾ.ಕುಮಾರಸ್ವಾಮಿ ಎಚ್. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು. ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ, ಹಾಗೂ ಉದ್ಯೋಗ ಮಾರುಕಟ್ಟೆಗಳಿಗೆ ಅನುಗುಣವಾಗಿಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ ಹಾಗೂ ಸಂಶೋಧನೆಯಲ್ಲಿ ರೂಪುಗೊಳ್ಳಬೇಕಾದ ಹೊಸ ಮಾರ್ಗೋಪಾಯಗಳ ಬಗ್ಗೆ ಈ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಹಾಗೂ ಚರ್ಚೆ ನಡೆಯಲಿದೆ ಎಂದು ಭಟ್ ಹೇಳಿದರು.
ಈ ಸಂದರ್ಭ ಕಾರ್ಯಕ್ರಮ ಸಂಯೋಜಕಿ ಪ್ರೊ. ವೇದಶ್ರೀ ನಿಡ್ಯ, ಸಂಘಟನಾ ಸಮಿತಿ ಸದಸ್ಯ ಪ್ರೊ.ಹೈದರ್ ಆಲಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸದಾಶಿವ ಬಂಗೇರ, ಗ್ರಾಂಥಾಲಯಾಧಿಕಾರಿ ಪುಟ್ಟೇಗೌಡ ಹಾಜರಿದ್ದರು.