bantwalnews.com report
ನಮ್ಮ ಹಳ್ಳಿ ರೋಟರಿ ಜಿಲ್ಲಾ ಯೋಜನೆಯಡಿ ಬಂಟ್ವಾಳ ತಾಲೂಕಿನ ಅರಳ ಗ್ರಾಮ ವನ್ನು ದತ್ತು ಪಡೆದುಕೊಂಡು ಆ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವ ಮೂಲಕ ಬಂಟ್ವಾಳ ರೋಟರಿ ಕ್ಲಬ್ ಐತಿಹಾಸಿಕ ದಾಖಲೆಯನ್ನು ಮಾಡಿದೆ ಎಂದು ರೋಟರಿ ಜಿಲ್ಲೆ 3181 ಗವರ್ನರ್ ಡಾ. ಆರ್.ಎಸ್.ನಾಗಾರ್ಜುನ ಹೇಳಿದ್ದಾರೆ.
ಭಾನುವಾರ ಬಂಟ್ವಾಳ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ಅರಳ ಗ್ರಾಮದಲ್ಲಿ ಅನುಷ್ಠಾನಗೊಂಡ ವಿವಿಧ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಂಜೆ ಬಂಟ್ವಾಳ ರೋಟರಿ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದತ್ತು ಪಡೆದ ಅರಳ ಗ್ರಾಮದಲ್ಲಿ ಬಂಟ್ವಾಳ ರೋಟರಿ ಸಂಸ್ಥೆಯು ಸ್ಥಳೀಯ ಪಂಚಾಯತ್‌ನ್ನು ವಿಶ್ವಾಸಕ್ಕೆ ಪಡೆದುಕೊಂಡು ಸುಮಾರು 5 ಲಕ್ಷ ರೂ.ಗೂ ಹೆಚ್ಚು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಬಳಿ ಕುಡಿಯುವ ನೀರಿನ ಟ್ಯಾಂಕ್. ಶಾಲೆಗೆ ಸುಸಜ್ಜಿತ ಶೌಚಾಲಯ. ಗ್ರಾಪಂ ಅಪೇಕ್ಷೆಯಂತೆ ಮೂಲರಪಟ್ನ, ಆಝಾದ್ ನಗರ, ಕಂಡದೊಟ್ಟು, ಎರ್ಮಾಳುಪದವಿನಲ್ಲಿ ಪ್ರಯಾಣಿಕರ ತಂಗುದಾಣ. ಹತ್ತು ಕಡೆಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ ಎಂದ ಅವರು, ಬಂಟ್ವಾಳ ರೋಟರಿ ಶಿಕ್ಷಣ ಮತ್ತು ಆರೋಗ್ಯ ಸೇವೆ, ರೋಟರಿ ದತ್ತಿನಿಧಿಗೆ ಬಂಟ್ವಾಳ ಕ್ಲಬ್ ಸದಸ್ಯರಿಂದ ಈಗಾಗಲೇ ೧೨ ಸಾವಿರ ರೂ. ಪಾವತಿಸಿದ್ದು, ೨೦ ಸಾವಿರ ಡಾಲರ್ ಪಾವತಿಸುವ ಗುರಿ ಹೊಂದಿದೆ. ಒಟ್ಟಾರೆಯಾಗಿ ಬಂಟ್ವಾಳ ರೋಟರಿ ಕ್ಲಬ್ ೩೧೮೧ ರೋಟರಿ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ ಎಂದು ಅಭಿನಂದಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ ಅವರು ಮಾತನಾಡಿ, ತನ್ನ ಮುಂದಿನ ಐದು ತಿಂಗಳ ಅವಧಿಯಲ್ಲಿ ಈಗಾಗಲೇ ಹಾಕಿಕೊಂಡಿರುವ ಜನಪರ ಕೆಲಸಗಳನ್ನು ರೋಟರಿ ಸರ್ವ ಸದಸ್ಯರ ಸಹಕಾರದೊಂದಿಗೆ ಪೂರೈಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಬಂಟ್ವಾಳ ರೋಟರಿ ಕ್ಲಬ್ ಒಟ್ಟು ಏಳು ಇಂಟರ್‍ಯಾಕ್ಟ್ ಕ್ಲಬ್‌ಗಳನ್ನು ಪ್ರಯೋಜಿಸಿದೆ. ತಾಲೂಕಿನ ೧೨ ಕಡೆಗಳಲ್ಲಿ ಮಧುಮೇಹ ತಪಾಸಣೆ ನಡೆಸಿ ೬೦೦ ಮಂದಿಗೆ ವೈದ್ಯಕೀಯ ಸಲಹೆ, ೨೧ ಶಾಲೆಗಳ ೬ ಸಾವಿರ ವಿದ್ಯಾರ್ಥಿಗಳನ್ನು ಕೆಎಂಸಿ ವೈದ್ಯರಿಂದ ಉಚಿತವಾಗಿ ಮಧುಮೇಹ ತಪಾಸಣೆ ನಡೆಸಲಾಗಿದೆ. ಸಮಾಜದ ಅತ್ಯಂತ ಹಿಂದುಳಿದ, ಆರ್ಥಿಕ ದುಸ್ಥಿತಿಯಲ್ಲಿದ್ದ ಕೆಲವು ಮಂದಿಯನ್ನು ಗುರುತಿಸಿ ಸಹಾಯವನ್ನು ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭ ಸಹಾಯಕ ಗವರ್ನರ್ ಸಂತೋಷ್ ಕುಮಾರ್ ಶೆಟ್ಟಿ, ಬಂಟ್ವಾಳ ರೋಟರಿ ಕಾರ್ಯದರ್ಶಿ ಮಹಮ್ಮದ್ ವಳವೂರು, ಮಂಜುನಾಥ ಆಚಾರ್ಯ, ಮುಸ್ತಫಾ ಗೋಳ್ತಮಜಲು ಉಪಸ್ಥಿತರಿದ್ದರು.