ಧರ್ಮದ ಚೌಕಟ್ಟಿನಲ್ಲಿ ಯುವಶಕ್ತಿ ಮತ್ತು ಸಂಪತ್ತಿನ ಸದ್ಬಳಕೆ ಇಂದು ಅಗತ್ಯವಾಗಿದೆ. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ನಡೆ, ನುಡಿ, ಭಾಷೆ, ಸಂಸ್ಕೃತಿ ಉಳಿಸುವ ಕಾರ್ಯ ಇಂದು ಯುವಜನರಿಂದ ಆಗಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಭಾನುವಾರ ಬೆಳಗ್ಗೆ ಶ್ರೀ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ ಅಂಗವಾಗಿ ತುಳುವೆರೆ ತುಲಿಪು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ತುಳು ಭಾಷೆಯ ಉಳಿವಿಗೆ ಈ ಮಂಥನ ನಡೆಯುತ್ತಿದೆ. ತುಳುವಿಗೆ ಲಿಪಿ ಇದೆ, ಇದನ್ನು ಉಳಿಸುವ ಕೆಲಸವಾಗಬೇಕು. ಇಂದು ತಂತ್ರಜ್ಞಾನ ಮುಂದುವರಿದಿದೆ ಹಾಗೆಯೇ ತತ್ವಜ್ಞಾನವೂ ಅದರಲ್ಲಿ ಅಡಕವಾಗಬೇಕು. ತುಳು ಭಾಷೆಗೆ ಆಧ್ಯಾತ್ಮದ ಶಕ್ತಿ ಇದೆ. ಭಾಷೆಯ ಗಟ್ಟಿತನ ಳಿಸುವ ಕಾರ್ಯ ಆಗಬೇಕು. ಯುವಕ, ಯುವತಿಯರು ಹಣದ ಹಿಂದೆ ಹೋಗದೆ ಬದುಕಿನ ಅಮೂಲ್ಯ ಘಟ್ಟವಾದ ಯೌವನವನ್ನು ಸಂಸ್ಕೃತಿ, ಸಂಸ್ಕಾರ, ಭಾಷೆಯ ಬೆಳವಣಿಗೆಗೆ ಮೀಸಲಿಡಬೇಕು. ಹಿರಿಯರು ಅದಕ್ಕೆ ಪ್ರೇರೇಪಣೆ ನೀಡಬೇಕು ಎಂದರು.
ಹಣ ಚಲನಶೀಲವಾಗಿರಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ತಂದ ಅಪನಗದೀಕರಣ ಪ್ರಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಸಂಪತ್ತು ಮತ್ತು ಯೌವನ ನಮ್ಮ ಬದುಕಿನ ಅತಿಥಿಗಳು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದರು.
ನೀರಿಂಗಿಸುವ ಕೆಲಸ ನಡೆಯಲಿ
ಎತ್ತಿನಹೊಳೆ ವಿಚಾರ ಪ್ರಸ್ತಾಪಿಸಿದ ಶ್ರೀಗಳು, ಜನರ ಮನಸ್ಸಿನಲ್ಲಿ ಇರುವ ಗೊಂದಲ ನಿವಾರಣೆ ಆಗಬೇಕು. ನೀರಿಂಗಿಸುವ ಕೆಲಸವಾದರೆ ಯಾವ ಜಿಲ್ಲೆಯಲ್ಲೂ ನೀರಿಗೆ ಬರ ಬಾರದು. ಈಗ ಯೋಜನೆ ಜಾರಿಗೊಳಿಸುವ ಮುನ್ನ ಹದಿನೈದು ವರ್ಷಗಳ ಹಿಂದೆ ಇದ್ದ ಮಳೆ ಇದೆಯೇ ಎಂಬ ಸರ್ವೆ ಮತ್ತೆ ನಡೆಯಬೇಕು ಎಂದರು. ಜನಪದೀಯ ಕ್ರೀಡೆ ಕಂಬಳ ತುಳು ಸಂಸ್ಕೃತಿಯ ಭಾಗ ಇದಕ್ಕೆ ನಮ್ಮ ಬೆಂಬಲ ಇದೆ ಎಂದು ಸ್ವಾಮೀಜಿ ಘೋಷಿಸಿದರು.
ಮುಖ್ಯ ಅತಿಥಿಗಳಾಗಿದ್ದ ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಮಾತನಾಡಿ, ಜಾನಪದ ಸಂಸ್ಕೃತಿ ಉಳಿವು ಮನೆಯಿಂದಲೇ ಆಗಬೇಕು. ಮಾತೃಭಾಷೆಯಲ್ಲೇ ಮಕ್ಕಳೊಂದಿಗೆ ಮಾತನಾಡುವ ಮೂಲಕ ಇದನ್ನು ಸಾಧಿಸಬಹುದು ಎಂದು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಒಡಿಯೂರಿನ ಚಟುವಟಿಕೆಗಳು ಮಿನಿ ಸರಕಾರದ ಕೆಲಸಗಳಂತೆ. ಜನರ ಇಚ್ಛೆಯನರಿತು ಕೆಲಸ ಮಾಡಲಾಗುತ್ತಿದೆ. ಕಂಬಳಕ್ಕೆ ಸರಕಾರದ ವಿರೋಧ ಇಲ್ಲ ಎಂದು ಹೇಳಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾಧ್ವೀ ಶ್ರೀ ಮಾತಾನಂದಮಯೀ, ಒಡಿಯೂರ್‍ದ ತುಳು ಕೂಟದ ಅಧ್ಯಕ್ಷ ಮಲಾರು ಜಯರಾಮರೈ ಉಪಸ್ಥಿತರಿದ್ದರು.
ಒಡಿಯೂರ್‍ದ ತುಳು ಕೂಟದ ಪ್ರಧಾನ ಸಂಚಾಲಕ ಡಾ| ವಸಂತಕುಮಾರ್ ಪೆರ್ಲ ಪ್ರಸ್ತಾವನೆಗೈದರು. ಸಂಚಾಲಕ ಟಿ.ತಾರಾನಾಥಕೊಟ್ಟಾರಿ ಸ್ವಾಗತಿಸಿದರು. ದೇವೀಪ್ರಸಾದ್ ಶೆಟ್ಟಿ ಬೆಜ್ಜಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಲೋಹಿತ್ ಭಂಡಾರಿ ವಂದಿಸಿದರು.
ಮಧ್ಯಾಹ್ನ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರಿಂದ ಪರತಿ ಮಂಗಣೆ ತುಳು ನಾಟಕ ನಡೆಯಿತು.