ಮಂಗಳೂರು ಅರಣ್ಯ ವೃತ್ತ ವ್ಯಾಪ್ತಿಯ 3 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಉಚಿತ ಎಲ್ ಪಿ ಜಿ ಸಂಪರ್ಕ ದೊರಕಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದಲ್ಲಿ ಶುಕ್ರವಾರ ಸಂಜೆ ಬಂಟ್ವಾಳ ವಲಯದ ಸುಮಾರು 600 ಫಲಾನುಭವಿಗಳಿಗೆ ಉಚಿತ ಕಿಟ್ ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆ ಜನರ ಪರವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇನ್ನೂ 300 ಹೆಚ್ಚು ಸಂಪರ್ಕ ನೀಡಲು ಸೂಚನೆ ನೀಡಲಾಗಿದೆ ಎಂದರು.
ಕಾಡಿನ ಮೇಲೆ ಒತ್ತಡ ಕಡಿಮೆ ಮಾಡಲು ಹಾಗೂ ಮಹಿಳೆಯರ ಆರೋಗ್ಯ, ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಸೀಮೆ ಎಣ್ಣೆ ಮುಕ್ತ, ಗ್ಯಾಸ್ ಯುಕ್ತ ಜಿಲ್ಲೆಯಾಗಿಸಲು ಅರಣ್ಯ ಇಲಾಖೆ ಕಾಡಿನಂಚಿನಲ್ಲಿ ವಾಸಿಸುವ ಪ.ಜಾ, ಪಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ಈ ಸೌಲಭ್ಯ ವಿತರಿಸುತ್ತಿದೆ. ಇದರ ಸಂಪೂರ್ಣ ಖರ್ಚು ಅರಣ್ಯ ಇಲಾಖೆಗೆ ಸೇರಿದೆ ಎಂದು ರೈ ಹೇಳಿದರು. ಅರಣ್ಯ ಉಳಿಸಲು ಜನರು ಸಹಾಯ ಮಾಡಬೇಕು, ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಿಸಬೇಡಿ. ವನ್ಯಜೀವಿಗಳಿಗೂ ಬದುಕಲು ಅವಕಾಶ ನೀಡಿ, ಅರಣ್ಯ ಇಲಾಖೆ ವಿವಿಧ ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತದೆ ಎಂದು ರೈ ಹೇಳಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯರಾದ ಮಂಜುಳಾ ಮಾವೆ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮೊಹಮ್ಮದ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಒ ಸಿಪ್ರಿಯನ್ ಮಿರಾಂಡಾ ಉಪಸ್ಥಿತರಿದ್ದರು.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ ಬಿಜೂರ್ ಪ್ರಾಸ್ತಾವಿಕ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಕೆ.ಟಿ.ಹನುಮಂತಪ್ಪ ಸ್ವಾಗತಿಸಿದರು, ಆರ್ ಎಫ್ ಒ ಸುರೇಶ್ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.