ಎಷ್ಟು ಬಾರಿ ನಾನು ಸ್ಮಶಾನದ ವಿಚಾರಕ್ಕೆ ಸಂಬಂಧಿಸಿ ನಿಮ್ಮಿಂದ ವಿವರ ಕೇಳೋದು? ನನಗಂತೂ ಗ್ರಾಮಸ್ಥರ ಬಳಿ ಉತ್ತರಿಸಿ ಸಾಕಾಗಿದೆ. ನೀವು ಸಮಸ್ಯೆ ಬಗೆಹರಿಸ್ತೀರಾ, ಅಥವಾ ನಾನು ರಾಜೀನಾಮೆ ಕೊಡ್ಲಾ
www.bantwalnews.com report
ಹೀಗೆ ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ರೈ ತಾಲೂಕು ಪಂಚಾಯಿತಿ ಸಭೆಯಲ್ಲಿ ಪ್ರಶ್ನಿಸಿದಾಗ ಇಡೀ ಸಭೆ ಒಮ್ಮೆ ಗಪ್ ಚುಪ್. ಆದರೆ ಬಂಟ್ವಾಳ ತಹಶೀಲ್ದಾರ್ ಇದಕ್ಕೆ ಕ್ಯಾರೆನ್ನಲಿಲ್ಲ.
ಮಾತು ಕೊಡಲು ಕಂದಾಯ ಇಲಾಖೆಗೆ ಸಾಧ್ಯವಿಲ್ಲ. ಹೀಗಂದರು ತಹಶೀಲ್ದಾರ್ ಪುರಂದರ ಹೆಗ್ಡೆ.
ಇದು ಪ್ರತಿಭಾ ಅವರ ಕೋಪ ಮತ್ತಷ್ಟು ಹೆಚ್ಚುವಂತೆ ಮಾಡಿತು.
ಪುಣಚ ಸ್ಮಶಾನ ಜಾಗಕ್ಕೆ ಸಂಬಂಧಿಸಿ ಅಳತೆ ಮಾಡುವ ವಿಚಾರದಲ್ಲಿ ಇನ್ನೂ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರತಿ ಬಾರಿ ಸಭೆಯಲ್ಲಿ ಪ್ರಸ್ತಾಪಿಸಿದರೂ ಮುಂದಿನ ಸಭೆಗೆ ಮುಂದೂಡಲ್ಪಡುತ್ತದೆ. ಕಳೆದ ಗ್ರಾಪಂ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಆದರೆ ಏನೂ ಕೆಲಸ ಆಗಿಲ್ಲ, ಸರ್ವೇ ಕಾರ್ಯ ನಿಧಾನ ಮಾಡಲು ಏನು ಕಾರಣ ಎಂಬುದು ಅವರ ಪ್ರಶ್ನೆಯಾಗಿತ್ತು.
ಈ ಸಂದರ್ಭ ಉತ್ತರಿಸಿದ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ, ಮಾತು ಕೊಡಲು ಕಂದಾಯ ಇಲಾಖೆಗೆ ಸಾಧ್ಯವಿಲ್ಲ ಎಂದು ಉತ್ತರಿಸಿದ್ದು, ಪ್ರತಿಭಾ ಅವರನ್ನು ಕೆರಳಿಸಿತು. ಹೀಗಾದರೆ ಮೀಟಿಂಗ್ ಮಾಡುವುದಕ್ಕೆ ಅರ್ಥವಿದೆಯೇ, ಹಾರಿಕೆಯ ಉತ್ತರವನ್ನು ಜನಪ್ರತಿನಿಧಿಗಳಿಗೆ ನೀಡಿದರೆ ನಾವು ಹೇಗೆ ಉತ್ತರಿಸಬೇಕು, ಮುಂದಿನ ಗ್ರಾಪಂ ಸಭೆಯೊಳಗೆ ಕೆಲಸ ಮಾಡಿ, ಆಗದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಆಕ್ರೋಶಭರಿತರಾಗಿ ನುಡಿದರು.
ಈ ವೇಳೆ ತಹಶೀಲ್ದಾರ್ ಮತ್ತು ಗ್ರಾಪಂ ಅಧ್ಯಕ್ಷೆ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ಹೀಗೆ ಜನಪ್ರತಿನಿಧಿಯೊಬ್ಬರ ಬಳಿ ಉತ್ತರಿಸುವಾಗ ಯಾರೂ ಪ್ರತಿಭಾ ಅವರನ್ನು ಬೆಂಬಲಿಸಿ ಮಾತನಾಡಲಿಲ್ಲ. ಕೊನೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮುಹಮ್ಮದ್ ಮಾತನಾಡಿ, ಈ ವಿಷಯ ಗಂಭೀರವಾಗಿದ್ದು ಕೂಡಲೇ ಇದನ್ನು ಬಗೆಹರಿಸಿ ಎಂದು ಹೇಳಿದರು.
ಇದು ಶುಕ್ರವಾರ ನಡೆದ ಬಂಟ್ವಾಳ ತಾಲೂಕು ಪಂಚಾಯಿತಿ ಸಭೆಯ ದೃಶ್ಯ.
ಉಳಿದಂತೆ ಎಲ್ಲವೂ ಸಾಮಾನ್ಯವಾಗಿಯೇ ಸಭೆ ನಡೆಯಿತು. ಎಂದಿನಂತೆ ಅಧಿಕಾರಿಗಳನ್ನು ಜನಪ್ರತಿನಿಧಿಗಳು ಪ್ರಶ್ನಿಸಿದರೆ, ಅಧಿಕಾರಿಗಳು ಅಷ್ಟೇ ಸ್ಪಷ್ಟವಾಗಿ ಉತ್ತರಿಸಿದರು. ಮೆಸ್ಕಾಂ ಅಧಿಕಾರಿಗಳು ಮಾತ್ರ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ವಿದ್ಯುತ್ ಮೀಟರ್ ರೀಡಿಂಗ್ ಸಮಸ್ಯೆ ಬಗ್ಗೆ ಅಧಿಕಾರಿಗಳನ್ನು ಸಭೆಯಲ್ಲಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಅದ್ಯಾಕೆ ಮೀಟರ್ ರೀಡಿಂಗ್ ಒಂದೊಂದು ರೀತಿ ಇರುತ್ತದೆ ಎಂದು ಪ್ರಶ್ನಿಸಿದರು. ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, 8 ಸಾವಿರ ರೂ ಬಿಲ್ ಬಾಕಿ ಇದ್ದವರಿಗೆ ಫೋನ್ ಮೂಲಕ ತಿಳಿಸಲಾಗುತ್ತಿದೆ, 500 ರೂ ಬಾಕಿ ಇದ್ದರೆ ಡಿಸ್ ಕನೆಕ್ಟ್ ಮಾಡಲಾಗುತ್ತಿದೆ ಎಂದು ದೂರಿದರು. ಬಿಲ್ ಪಾವತಿ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದು ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಅವರನ್ನು ಕೆರಳಿಸಿತು. ನಾವು ಅನಗತ್ಯವಾಗಿ ಆರೋಪ ಮಾಡುವುದಿಲ್ಲ ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಗುತ್ತಿಗೆ ವಹಿಸಿಕೊಂಡವರಿಂದ ಈ ಸಮಸ್ಯೆ ಉಂಟಾಗುತ್ತಿದ್ದು, ಅವರಿಗೆ ಈ ವಿಚಾರವನ್ನು ತಿಳಿಸುವುದು ಎಂದು ತೀರ್ಮಾನಿಸಲಾಯಿತು. ಮೆಸ್ಕಾಂ ಇಲಾಖೆ ಗೊಂದಲದ ಗೂಡಾಗಿದ್ದು, ಕೆಲ ಲೈನ್ ಮ್ಯಾನ್ ಗಳ ಕಂಟ್ರೋಲ್ ಅಧಿಕಾರಿಗಳಿಗೇ ಇರುವುದಿಲ್ಲ ಎಂದು ಮಹಮ್ಮದ್ ಆರೋಪಿಸಿದರು.
ನನ್ನ ಕ್ಷೇತ್ರ ವ್ಯಾಪ್ತಿಯ ನೆಟ್ಲಮುಡ್ನೂರಿನಲ್ಲಿ ವಿಎಗಳನ್ನು ಆಗಾಗ್ಗೆ ಬದಲಾಯಿಸಲಾಗುತ್ತಿದೆ. ಹೀಗೆ ಮಾಡಬೇಡಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದಾಗ, ನಾವೇನು ಮಾಡೋದು, ಅವರನ್ನು ಬದಲಾಯಿಸದಿದ್ದರೆ ನನ್ನನ್ನು ಬದಲಾಯಿಸಬೇಕಾಗುತ್ತದೆ ಎಂದು ತಹಶೀಲ್ದಾರ್ ಉತ್ತರಿಸಿದರು.
ಬಂಟ್ವಾಳ, ಮಂಗಳೂರು ತಾಲೂಕು ಬರಪೀಡಿತ
ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ಕುರಿತು ಅಧ್ಯಯನಕ್ಕೆ ಉಸ್ತುವಾರಿ ಸಚಿವ ರಮಾನಾಥ ರೈ ಮಟ್ಟದ ಸಭೆ ಕರೆಯಲಾಗುವುದು ಎಂದು ಇಒ ಸಿಪ್ರಿಯನ್ ಮಿರಾಂಡ ಹೇಳಿದರು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಜಿಪಂ ಸದಸ್ಯ ರವೀಂದ್ರ ಕಂಬಳಿ, ತಾಪಂ ಸದಸ್ಯರಾದ ಉಸ್ಮಾನ್ ಕರೋಪಾಡಿ, ಮಲ್ಲಿಕಾ ಶೆಟ್ಟಿ, ಯಶವಂತ ಪೂಜಾರಿ, ಗಣೇಶ ಸುವರ್ಣ, ಹೈದರ್ ಕೈರಂಗಳ, ಗೀತಾ ಚಂದ್ರಶೇಖರ್, ಕುಮಾರ ಭಟ್ ಬದಿಕೋಡಿ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.