ಚಿಯಾಂ ಚಿಯಾಂ ಎಂದು ಉಲಿಯುವ ಹಕ್ಕಿಗಳಿಗೂ ನಮ್ಮಂತೆ ಹಸಿವು ಬಾಯಾರಿಕೆ ಇದೆಯಲ್ವಾ?
ಅನಿತಾ ನರೇಶ್ ಮಂಚಿ
ಅಂಕಣ: ಅನಿಕತೆ
ಏನ್ರೀ ಕನಕಾಂಗಿ, ಮೂರು ದಿನಕ್ಕೆ ಹೊರ್ಗಡೆ ಹೋಗ್ತಾ ಇದ್ದೀವಿ, ಮನೆ ಕಡೆ ಸ್ವಲ್ಪ ಜೋಪಾನ ಅಂದೋರು ಬರುವಾಗ ವಾರವೇ ಕಳೆದಿದೆಯಲ್ಲಾ, ದೊಡ್ಡ ಟೂರ್ ಆಯ್ತು ಅಂತ ಅನ್ಸುತ್ತೆ ನಿಮ್ದು
ಹುಂ. ಹೌದು ಸರೋಜಮ್ಮಾ, ನಾವು ಪ್ಲಾನ್ ಮಾಡಿದ ಜಾಗಕ್ಕಿಂತ ಬೇರೆ ಕಡೆ ಹೋಗ್ಬೇಕಾಯ್ತು. ರಂಗನತಿಟ್ಟಿಗೆ ಹೋಗ್ಬೇಕು ಅನ್ನೋದು ಬಹುದಿನದ ಆಸೆಯಾಗಿತ್ತು. ಅಲ್ಲಿಗೂ ಹೋಗಿ ಬಂದೆವು. ಮಕ್ಕಳಿಗೆ ತುಂಬಾ ಕುಷಿಯಾಯ್ತು. ಅಲ್ಲಿನ ಹಕ್ಕಿಗಳನ್ನೆಲ್ಲಾ ನೋಡಿ. ಆದರೆ ನಿಮ್ಗೆ ಸ್ವಲ್ಪ ತೊಂದ್ರೆ ಕೊಟ್ಟೆವು ಅಲ್ವಾ. ಗಿಡಗಳಿಗೆ ನೀರು ಕೂಡಾ ಹಾಕಿದ್ದೀರಾ ನೀವು ತುಂಬಾ ಥ್ಯಾಂಕ್ಸ್ ಕಣ್ರೀ, ನಿಮ್ಮುಪಕಾರ ಯಾವತ್ತೂ ಮರೆಯೋದಿಲ್ಲ
ಅಯ್ಯೋ ಹಾಗೆಲ್ಲಾ ಹೇಳ್ಬೇಡಿ, ನಾವು ಹೊರಗಡೆ ಹೋದಾಗ ನೀವೂ ನಮ್ಮ ಮನೆಯ ಅರೈಕೆ ಉಪಚಾರ ಎಲ್ಲಾ ಮಾಡ್ಬೇಕಾಗುತ್ತೆ, ಆವಾಗ ಇದೆಲ್ಲಾ ಬಡ್ಡಿ ಸಮೇತ ವಸೂಲಿ ಆಗುತ್ತೆ. ನೀವು ಬಂದ್ಮೇಲೆ ಕೇಳ್ಬೇಕು ಅಂತಲೇ ಇದ್ದ ಸುದ್ದಿ ಒಂದಿದೆ ನೋಡಿ. ಅದೇನದು ನೀವು ಹೂ ಗಿಡಗಳ ನಡುವೆ ಒಂದು ಕಡೆ ಪ್ಲಾಸ್ಟಿಕ್ ಟಬ್ಬಿನಲ್ಲಿ ಸುಮ್ನೇ ನೀರು ತುಂಬಿಸಿಟ್ಟಿದ್ದೀರಿ. ಗಿಡಗಳಿಗೆ ಹಾಕಲು ಸುಲಭ ಆಗ್ಲೀ ಅಂತಾನಾ? ಆದ್ರೆ ಅದ್ರಲ್ಲಿ ಹೆಚ್ಚು ನೀರು ಕೂಡಾ ಹಿಡಿಸೋಲ್ಲ ಅಲ್ವಾ..
ಓಹ್.. ಅದಾ.. ಅದಕ್ಕೆ ’ಹಕ್ಕಿ ಅರವಟ್ಟಿಗೆ’ ಅಂತ ಹೆಸ್ರಿಟ್ಟಿದ್ದೀನಿ ನೋಡಿ. ಹಕ್ಕಿಗಳಿಗೆ ನೀರು ಕುಡಿಯಲೆಂದೇ ಇಟ್ಟಿರೋ ಟಬ್ ಅದು. ಪಾಪ ಅವಕ್ಕೆ ಮಳೆಗಾಲ ಮುಗಿದೊಡನೇ ಎಲ್ಲಾ ಕಡೆ ನೀರು ಸಿಗೋದಿಲ್ಲ ಕುಡಿಯೋದಿಕ್ಕೆ. ಕೆಲವಂತೂ ನೀರಿಲ್ಲದೇ ಸತ್ತೇ ಹೋಗುತ್ತವಂತೆ. ಅಲ್ಲದೇ ಅವಕ್ಕೆ ಮೈಯ ಉಷ್ಣತೆಯನ್ನು ಕಡಿಮೆ ಮಾಡ್ಕೋಳ್ಳೋದಕ್ಕೆ ಸ್ನಾನ ಕೂಡಾ ಉಪಕಾರಿ. ಆಗಾಗ ನೀರಲ್ಲಿ ಸ್ನಾನ ಮಾಡ್ತಾ ಇರುತ್ತವೆ. ಅದನ್ನು ನೋಡಿ ಪುಟಾಣಿ ಟಬ್ಬಿಗೆ ನೀರು ತುಂಬಿಸಿ ಇಟ್ಟಿದ್ದು. ನೀವೇನಾದ್ರೂ ಗಮನಿಸಿದಿರಾ ಹಕ್ಕಿಗಳನ್ನು..?
ಓಹೋ.. ಈ ವಿಷ್ಯ ನಂಗೆ ಗೊತ್ತಿರಲಿಲ್ಲ. ಆದ್ರೆ ನಾನು ಅದ್ಯಾವುದೋ ಕಾರಣಕ್ಕಾಗಿ ಇಟ್ಟಿರಬಹುದು ಆ ಟಬ್ ಅಂತ ಗೊತ್ತಿಲ್ಲದಿದ್ರೂ ದಿನಾ ನೀರು ತುಂಬಿಸಿ ಬಿಡ್ತಾ ಇದ್ದೆ, ಈಗ ನೀವು ಹೇಳುವಾಗ ನೆನಪಾಯ್ತು.ನಿಮ್ಮಂಗಳದಲ್ಲಿ ಹಕ್ಕಿಗಳ ಕೂಗು ಆಗಾಗ ಕೇಳಿಸ್ತಾ ಇತ್ತು, ಆ ಟಬ್ಬಿನ ನೀರು ಕೂಡಾ ಮರುದಿನ ನೋಡುವಾಗ ಅರ್ಧ ಆಗಿರ್ತಾ ಇತ್ತು. ಏನಾಗಿರಬಹುದು ಎಂಬ ಕುತೂಹಲವಿದ್ದರೂ ಇದು ಹಕ್ಕಿಗಳ ಕರಾಮತ್ತು ಅಂತ ಗೊತ್ತೇ ಇರ್ಲಿಲ್ಲ ನೋಡಿ
ಹುಂ.. ಬರೀ ಕುತೂಹಲ ಮಾತ್ರ ಅಲ್ಲ ಸರೋಜಮ್ಮ, ಅವುಗಳನ್ನು ನೋಡ್ತಾ ಇದ್ರೆ ನಿಮಗೆ ಹೊತ್ತು ಹೋಗಿದ್ದು ಗೊತ್ತಾಗಲ್ಲ. ಈಗಂತೂ ಮಕ್ಕಳಿಗೂ ಇದು ಆಟ ಆಗಿದೆ. ನಿಮ್ಗೆ ಇನ್ನೊಂದು ವಿಷ್ಯ ಗೊತ್ತಾ?ನಾನು ಈಗ ಹಕ್ಕಿಗಳ ಕೂಗಿನಲ್ಲೇ ಯಾವ ಹಕ್ಕಿ ಅಂತ ಹೇಳಬಲ್ಲೆ. ಎಲ್ಲಾ ಹಕ್ಕಿಗಳದ್ದಲ್ಲದಿದ್ದರೂ ನಮ್ಮನೆಗೆ ನೀರು ಕುಡಿಯಲು ಬರುವ ಹಕ್ಕಿಗಳ ಸ್ವರದ ಪರಿಚಯ ಇದೆ ನಂಗೀಗ.. ಮಕ್ಕಳೂ ಕೆಲವನ್ನು ಗುರುತಿಟ್ಟುಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ
ಆಹಾ.. ಎಷ್ಟು ಸುಲಭವಾಗಿ ಮಕ್ಕಳಿಗೆ ಪರಿಸರ ಪ್ರೇಮ ತುಂಬ್ತಾ ಇದ್ದೀರಿ. ನಿಜಕ್ಕೂ ಸಂತಸ ಆಗ್ತಾ ಇದೆ. ನಮ್ಮದು ಕಾಂಕ್ರೀಟು ಕಾಡು, ಇಲ್ಲೇನಿದೆ ಅಂತೆಲ್ಲಾ ಕೈ ಚೆಲ್ಲೋ ಬದಲು ನಮಗೆ ಸಾಧ್ಯವಾದಷ್ಟು ಪರಿಸರಕ್ಕೆ ಅಂಟಿಕೊಳ್ಳುವ ಪ್ರಯತ್ನ ಮಾಡೋದು ಕುಷಿ ಅಲ್ವಾ.. ಇದರಿಂದ ಮನುಷ್ಯ ಮತ್ತು ಉಳಿದ ಪ್ರಾಣಿ ಪಕ್ಷಿಗಳ ಒಡನಾಟವೂ ಬೆಳೆಯಬಹುದು. ನಮ್ಮ ಸ್ವಾರ್ಥ ಕೊಂಚವಾದರೂ ಕಡಿಮೆಯಾಗಿ ನಮ್ಮಂತೆ ಪರರು ಅನ್ನುವ ಭಾವನೆ ಮೂಡಬಹುದೇನೋ ಅಲ್ವಾ ಕನಕಾಂಗಿ
ಹುಂ.. ಸರೋಜಮ್ಮಾ.. ಇದಿಷ್ಟನ್ನು ಮಾಡೋಕೆ ನಮ್ಗೇನೂ ತುಂಬಾ ಜಾಗ ಕೂಡಾ ಬೇಡ ಅಲ್ವಾ.. ದಿನಾ ನೀರು ಬದಲಾಯಿಸಿಡುವಂತಹ ಒಂದು ಪುಟ್ಟ ವ್ಯವಸ್ಥೆ ಇದ್ದರಷ್ಟೇ ಸಾಕು
ಹೌದು .. ಎಷ್ಟು ಸುಲಭ ಮತ್ತು ಚೇತೋಹಾರಿ ಅನುಭವ ಕೊಡುವಂತಹ ಸಂಗತಿ..ನಾನೀಗಲೇ ಹೊರಟೆ ಟಬ್ ತರಲು..
ಶ್ರಮವಿಲ್ಲದೇ ನಿಮ್ಮ ಮನೆಯಂಗಳದಲ್ಲಿ ಬಾನಾಡಿಗಳ ಕಲರವ ಕೇಳುವ ಆಸೆಯಿದ್ದಲ್ಲಿ ನೀವೂ ಬನ್ನಿ.