ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ. 5 ರಂದು “ತುಳುವೆರೆ ತುಲಿಪು” ಮತ್ತು ಫೆ.6 ರಂದು ಶ್ರೀ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆಯು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದಕ್ಕೆ ಸಿದ್ಧತೆಗಳು ಸಾಗಿವೆ.
ಫೆ. 5 ರಂದು ನಡೆಯುವ “ತುಳುವೆರೆ ತುಲಿಪು” ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಾನಕಿ ಎಂ ಬ್ರಹ್ಮಾವರ ಭಾಗವಹಿಸಲಿದ್ದಾರೆ.
ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸ ಡಾ. ವಿಶ್ವನಾಥ ಬದಿಕಾನ ಅವರು ತುಳುತ್ತ ಒರಿಪು ಬೊಕ್ಕ ಜವನೆರ್ ವಿಷಯದಲ್ಲಿ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಟಿ.ಎ.ಎನ್ ಖಂಡಿಗೆ ಅವರು ತುಳು ಸಂಸ್ಕೃತಿ ಬೊಕ್ಕ ಜವನೆರ್ ವಿಷಯದಲ್ಲಿ ಹಾಗೂ ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ ನಿಕೇತನ ಅವರು ಆಧುನಿಕ ಶಿಕ್ಷಣ ಬೊಕ್ಕ ಜವನೆರ್ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರಿಂದ ಪರತಿ ಮಂಗಣೆ ತುಳು ನಾಟಕ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಾನಪದ ವಿದ್ವಾಂಸ ವೈ.ಎನ್ ಶೆಟ್ಟಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ತುಳು ರಂಗಭೂಮಿಯ ವಿ.ಜಿ ಪಾಲ್, ಸಾಹಿತಿ ಶಕುಂತಳಾ ಭಟ್ ಹಳೆಯಂಗಡಿ, ದರ್ಶನ ಪಾತ್ರಿ ಕಲಾವಿದ ಮುತ್ತಪ್ಪ ಮೂಲ್ಯ ಬಂಟ್ವಾಳ, ಕೃಷಿ ಹೈನುಗಾರಿಕೆಯ ನೀರ್ಪಾಡಿ ಕಿಟ್ಟಣ್ಣ ರೈ ಅವರನ್ನು ಸನ್ಮಾನಿಸಲಾಗುವುದು. ಸಂಜೆ ಭರತನಾಟ್ಯ ನಡೆಯಲಿದೆ.
ಫೆ. 6 ರಂದು ನಡೆಯುವ “ಶ್ರೀ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ” 2017 ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ದತ್ತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಲಿದ್ದಾರೆ. ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತಿಯಿರಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ, ರಾಮನಗರ ಜಿಲ್ಲಾ ನ್ಯಾಯಾಧೀಶ ಗೋಪಾಲಕೃಷ್ಣ ರೈ, ಡಾ. ಸಿ.ಕೆ ಬಲ್ಲಾಳ್, ಯು.ಎ.ಇ ಬಂಟರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕುಸುಮಾಧರ ಡಿ ಶೆಟ್ಟಿ ಚೆಲ್ಲಡ್ಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ, ಪ್ರಭಾಕರ ಶೆಟ್ಟಿ ಉಡುಪಿ, ದಾಮೋದರ ಎಸ್ ಶೆಟ್ಟಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಸಚಿವರನ್ನೇ ಮಾಯ ಮಾಡಿದ ಮಾಂತ್ರಿಕ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ಜಾದೂ ಪ್ರದರ್ಶನ, ಸಂಜೆ ೭ ಗಂಟೆಗೆ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ ಮಿತ್ತನಡ್ಕಕ್ಕೆ ಹೋಗಿ ಕನ್ಯಾನ ಪೇಟೆ ಸವಾರಿ, ನಂತರ ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ಬಳಿಕ ಶ್ರೀ ಸಂಸ್ಥಾನಕ್ಕೆ ಹಿಂತಿರುಗಲಿದೆ. ರಾತ್ರಿ 9 ಗಂಟೆಗೆ ಕೂಡ್ಲು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯಿಂದ ಭಜನೆ ಹಾಗೂ ಸಂಜೆ 7 ಗಂಟೆಗೆ ಮಿತ್ತನಡ್ಕ ಮಲರಾಯಿ ದೈವಸ್ಥಾನದ ಬಳಿ ವಿಶೇಷ ಆಕರ್ಷಣೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ .