ಮಂಗಳೂರಷ್ಟೇ ಅಲ್ಲ, ಬಂಟ್ವಾಳಕ್ಕೆ ಒದಗಿಸುವ ಕುಡಿಯುವ ನೀರೂ ಮಲಿನವಾಗುವ ಸಾಧ್ಯತೆ, ಕೊಳಚೆ ನೇತ್ರಾವತಿಗೆ ಸೇರುವ ಆತಂಕ, ಲೇಔಟ್ ಗೆ ಜಾಗ ಬಳಕೆಯಾದ್ದೆಷ್ಟು ಎಂಬ ವಿಚಾರದಲ್ಲಿ ತನಿಖೆ ಹೀಗೆ ಮಂಗಳವಾರ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ವೈವಿಧ್ಯ ವಿಚಾರಗಳ ಚರ್ಚೆ ಇತ್ತು.
ಏನೆಲ್ಲ ವಿಚಾರ ಚರ್ಚೆಗೆ ಬಂತು ನೋಡಿ.
www.bantwalnews.com report
ವಿಷಯ 1: ಲೇಔಟ್ ನಿರ್ಮಾಣ ಸಂದರ್ಭ ಜಾಗ ಬಳಕೆ
ಬಿ.ಮೂಡ ಗ್ರಾಮದಲ್ಲಿರುವ ಮಫತ್ ಲಾಲ್ ಲೇಔಟ್ ನಿರ್ಮಾಣ ಸಂದರ್ಭ 1.28 ಎಕ್ರೆ ಜಾಗ ಬಳಕೆ ಕುರಿತು ಕೊಟ್ಟ ನಕ್ಷೆ ಸರಿ ಇಲ್ಲ. ಈ ಕುರಿತು ದೂರು ನೀಡಲಾಗಿದ್ದರೂ ಅಲ್ಲೇ ರಸ್ತೆ ನಿರ್ಮಾಣ ಆಗಿದೆ ಎಂದು ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮತ್ತೋರ್ವ ಸದಸ್ಯ ಮಹಮ್ಮದ್ ಶರೀಫ್ ಅವರಿಂದ ತೀವ್ರ ಪ್ರತಿರೋಧ ಬಂತು. ರಸ್ತೆ ನಿರ್ಮಾಣ ವಿಚಾರಕ್ಕೆ ಯಾಕೆ ಅಡ್ಡಿ ಎಂದು ಪ್ರಶ್ನಿಸಿದಾಗ ಮಾತಿನ ಚಕಮಕಿ. ಬಹಳ ಹೊತ್ತಿನ ಬಳಿಕ ಪುರಸಭೆ ಮುಖ್ಯಾಧಿಕಾರಿ ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿಷಯ 2: ಬಿಲ್ ಪಾವತಿ
ವಾರ್ಡ್ ಒಂದರಿಂದ 7 ರ ವರೆಗೆ ಚರಂಡಿ ದುರಸ್ಥಿ ಮತ್ತು ಹೂಳೆತ್ತುವ ಕಾಮಗಾರಿಗೆ 2014-15 ನೆ ಸಾಲಿನ ಗುತ್ತಿಗೆ ದಾರನಿಗೆ ಪಾವತಿಗೆ ಬಾಕಿ ಇರುವ 5 ಲಕ್ಷ ರೂ.ವನ್ನು ನೀಡಲು ಸಭೆ ನಿರ್ಧರಿಸಿತು. ಟೆಂಡರ್ ಆಗಿ ನಡೆದ ಕಾಮಗಾರಿಯ ಬಿಲ್ ಪಾವತಿಸಲು ಕಾರ್ಯಸೂಚಿಯಲ್ಲಿ ಉಲ್ಲೇಖಿಸಿರುವುದನ್ನು ಸದಸ್ಯರಾದ ಪ್ರವೀಣ್ ಬಿ., ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಮುನೀಶ್ ಅಲಿ, ಗಂಗಾಧರ್ ಆಕ್ಷೇ, ಪ ವ್ಯಕ್ತಪಡಿಸಿದರು. 4, 6, 7ನೆ ವಾರ್ಡ್‌ನಲ್ಲಿ ಆ ಸಂದರ್ಭದಲ್ಲಿ ಹೂಳೆತ್ತುವ ಕಾಮಗಾರಿ ನಡೆದಿಲ್ಲ ಎಂದು ಈ ಭಾಗದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯ ಮೊನೀಶ್ ಆಲಿ, ದೇವದಾಸ ಶೆಟ್ಟಿ ಮಾತನಾಡಿ ನಮ್ಮ ವಾರ್ಡಲ್ಲಿ ಕೆಲಸವೇ ಆಗಿಲ್ಲ, ಬಿಲ್ ಎಲ್ಲಿಂದ ಎಂದು ಪ್ರಶ್ನಿಸಿದರೆ, ಗೋವಿಂದ ಪ್ರಭು ನಮ್ಮ ವಾರ್ಡಲ್ಲಿ ಮೂರು ವರ್ಷಗಳಿಂದ ಕಾಮಗಾರಿ ನಡೆದಿಲ್ಲ ಎಂದರು.
ವಿಷಯ 3: ಮಂಗಳೂರು, ಬಂಟ್ವಾಳಕ್ಕೆ ಮಲಿನ ನೇತ್ರಾವತಿ ನೀರು
ನೇತ್ರಾವತಿ ನದಿ ನೀರಿಗೆ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೊಳಚೆ ನೀರು ಹರಿಯ ಬಿಡುವುದು ಹಾಗೂ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿದೆ. ಇದೇ ಕೊಳಕು ನೀರನ್ನು ಮಂಗಳೂರು ಮಹಾ ನಗರ ಪಾಲಿಕೆ, ಬಂಟ್ವಾಳ ಪುರವಾಸಿಗಳು ಕುಡಿಯಬೇಕಾಗಿದೆ. ಪರಿಣಾಮ ವಿವಿಧ ರೋಗಗಳಿಗೆ ತುತ್ತಾಗುವ ಆತಂಕ ಎದುರಾಗಿದೆ ಎಂದು ಸದಸ್ಯರಾದ ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಹೇಳಿದರು. ಕುಡಿಯುವ ಉದ್ದೇಶದಿಂದ ನೇತ್ರಾವತಿ ನದಿಯಲ್ಲಿ ಸಂಗ್ರಹವಾಗುವ ನೀರಿಗೆ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೊಳಚೆ ನೀರನ್ನು ಬಿಡಲಾಗುತ್ತಿದೆ . ಬಂಟ್ವಾಳದ ಬಡ್ಡಕಟ್ಟೆ, ಪಾಣೆಮಂಗಳೂರು ಸೇತುವೆಯಡಿ, ತಲಪಾಡಿ ಬಳಿ ನೇತ್ರಾವತಿ ನದಿಗೆ ಕೋಳಿ, ಮಾಂಸ, ಇನ್ನಿತರ ತ್ಯಾಜ್ಯ ವಸ್ತುವನ್ನು ಎಸೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಸತಿ ಸಮುಚ್ಚಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. . ವಸತಿ ಸಮುಚ್ಚಯ ಹಾಗೂ ಹೊಟೇಲ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ಅವರು ಉತ್ತರಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.
ವಿಷಯ 4: ಖಾತೆದಾರರ ಕದ ನಂಬ್ರ ರದ್ದು
ಪಾಣೆಮಂಗಳೂರಿನ ಹಳೆ ಸೇತುವೆಯ ಬಳಿ ಸರಕಾರಿ ಸ್ಥಳದಲ್ಲಿ ವಾಸ್ತವ್ಯವಿರುವ 14 ಖಾತೆದಾರರ ಕದ ನಂಬ್ರವನ್ನು ರದ್ದುಗೊಳಿಸುವ ನಿರ್ಣಯಕ್ಕೆ ಸಭೆ ಅಂಗೀಕರಿಸಿತು. ಮುಂದಿನ ದಿನಗಳಲ್ಲಿ ಈ ಮನೆಗಳನ್ನು ಅಲ್ಲಿಂದ ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಸ್ಯೆ ಚಂಚಲಾಕ್ಷಿ ಅವರ ಪ್ರಶ್ನೆಗೆ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಉತ್ತರಿಸಿದರು.
ಪುರಸಭಾ ವ್ಯಾಪ್ತಿಯನ್ನೊಳಗೊಂಡ ಮೆಲ್ಕಾರ್‌ನ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ದಿ. ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಬಂಟ್ವಾಳ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಸಲ್ಲಿಸಿರುವ ಮನವಿಯನ್ನು ಸಭೆ ಪರಿಗಣಿಸಿ ಸರ್ವಾನು ಮತದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಲಾಯಿತು. ಕಂಬಳ ಕ್ರೀಡೆಗೆ ಪುರಸಭೆ ಸರ್ವಾನುಮತದಿಂದ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿತು.
ಬಾರೆಕಾಡು ಪರಿಸರದಲ್ಲಿ ಆಶ್ರಯ ಮನೆ ಯೋಜನೆಯಡಿ ವಾಸ್ತವ್ಯವಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಸದಸ್ಯ ವಾಸು ಪೂಜಾರಿ ಆಗ್ರಹಿಸಿದರು.
ಬಂಟ್ವಾಳ ಬಯಲು ಶೌಚ ಮುಕ್ತ ನಗರ
ಬಂಟ್ವಾಳ ಪುರಸಭೆ ಈಗ ಬಯಲು ಶೌಚಮುಕ್ತ ನಗರ. ಹೀಗೆಂದು ಮಂಗಳವಾರ ಬಂಟ್ವಾಳ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಬಿ.ಮೋಹನ್, ಪ್ರವೀಣ್, ಚಂಚಲಾಕ್ಷಿ, ಸುಗುಣಾ ಕಿಣಿ, ಮೊನೀಷ್ ಆಲಿ, ಮಹಮ್ಮದ್ ಇಕ್ಬಾಲ್, ಭಾಸ್ಕರ ಟೈಲರ್, ಜೆಸಿಂತಾ, ವಸಂತಿ ಚಂದಪ್ಪ, ಜಗದೀಶ ಕುಂದರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಅಧಿಕಾರಿಗಳಾದ ಪುರಸಭಾ ಮುಖ್ಯಾಧಿಕಾರಿ ಕೆ.ಸುಧಾಕರ್, ಮತ್ತಡಿ, ಉಮಾವತಿ ವಿವಿಧ ಮಾಹಿತಿ ನೀಡಿದರು.