ಜಿಲ್ಲಾ ಸುದ್ದಿ

ಪ್ರತಿಭಟನೆ ನಡುವೆ ಸೌತಡ್ಕದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಉದ್ಘಾಟಿಸಿದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖಾ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ., ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಶುಭ ಹಾರೈಸಿದರು.

www.bantwalnews.com report

ಜಾಹೀರಾತು

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ, ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಉಪಸ್ಥಿತರಿದ್ದರು. ನೂತನ ಭೋಜನ ಶಾಲೆ, ನೂತನ ಅತಿಥಿಗೃಹ, ಭದ್ರತಾ ಕೊಠಡಿ, ಬಯಲುರಂಗಮಂದಿರ, ಪ್ರಸಾದ ವಿತರಣಾ ಕೊಠಡಿ ಮುಂತಾದ ಕ್ಷೇತ್ರದ ಅಭಿವೃದ್ಧಿ ಕಾರ್‍ಯಗಳ ಉದ್ಘಾಟನೆ ಮಾಡಲಾಯಿತು.

ಆಡಳಿತಾಧಿಕಾರಿ ತಾರಕೇಸರಿ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಶಬರಾಯ ವಂದಿಸಿದರು. ಹರ್ಷಿತ್ ಪಡ್ರೆ ಕಾರ್‍ಯಕ್ರಮ ನಿರೂಪಿಸಿದರು. ಪಟ್ಟೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳವರ ನೇತೃತ್ವದಲ್ಲಿ ಬೆಳಿಗ್ಗೆ ಅಷ್ಟೋತ್ತರ ಶತನಾಳಿಕೇರ ಮಹಾಗಣಪತಿ ಹೋಮ ಮತ್ತು ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಊರ,ಪರವೂರ ಭಕ್ತ ಮಹಾಜನರ ಸಹಕಾರದೊಂದಿಗೆ ಮೂಡಪ್ಪ ಸೇವೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶಿಶುಮಂದಿರ ಹಾಗೂ ಶಾಲಾ ಮಕ್ಕಳಿಂದ ಚಿಣ್ಣರ ಚಿಲಿಪಿಳಿ, ಸಂಜೆ ಬಾಲಕಲಾವಿದ ಮಾ.ಪ್ರಣವ್ ಹೆಚ್ ಇಂಜಾಡಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದಾಸರ ಪದಗಳು, ಬಳಿಕ ಯಕ್ಷಗಾನ ವೈಭವ, ಅಂತರ್‌ರಾಷ್ಟ್ರೀಯ ಖ್ಯಾತಿಯ ಅಶೋಕ್ ಪೊಳಲಿ ಇವರಿಂದ ಕೋಳಿನೃತ್ಯ ಹಾಗೂ ವಿವಿಧ ವಿನೋದಾವಳಿಗಳು ನಡೆಯಿತು. ಬಳಿಕ ಲಕುಮಿ ತಂಡದ ಕುಸಲ್ದ ಕಲಾವಿದರಿಂದನಂಕ್ ಮಾತೆರ್‍ಲಾ ಬೋಡುತುಳು ಹಾಸ್ಯನಾಟಕ ನಡೆಯಿತು.

ಇದೇ ವೇಳೆ ಸಭಾ ಕಾರ್‍ಯಕ್ರಮದಲ್ಲಿ ಅನ್ಯಧರ್ಮೀಯ ಉಪಸ್ಥಿತಿಗೆ ಸ್ಥಳೀಯ ಹಿಂದು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು.

ಪ್ರೊಟೋಕಾಲ್ ಪ್ರಕಾರ ಎಲ್ಲರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆನ್ನುವ ನಿಯಮವನ್ನು  ಧಾರ್ಮಿಕ ದತ್ತಿ ಇಲಾಖಾಧಿಕಾರಿಗಳು ಪಾಲಿಸಿದ್ದರು. ಇಲ್ಲಿ ಗೊಂದಲವಿರುವ ಮಾಹಿತಿಯನ್ನು ತಿಳಿದು ಬಂಟ್ವಾಳ ಡಿವೈಎಸ್‌ಪಿ ಸೋಮವಾರದಂದು ಸ್ವತಃ ಆಗಮಿಸಿ ಸಂಘಟನೆಗಳ ಮುಖಂಡರಲ್ಲಿ ಮಾತುಕತೆ ನಡೆಸಿದ್ದರಲ್ಲದೆ ಸರಕಾರದ ಕಾರ್ಯಕ್ರಮದಲ್ಲಿ ಇಂತಹ ತಗಾದೆಗಳನ್ನು ಎತ್ತುವುದು ಸರಿಯಲ್ಲ ಎಂದು ಮನವೊಲಿಸಿ ತೆರಳಿದ್ದರು.

ಅಭಿವೃದ್ದಿ ಕಾರ್ಯಕ್ರಮಗಳು ಉದ್ಘಾಟನೆ ನಡೆದು ಸಭೆ ಆರಂಭವಾಗುತ್ತಿದ್ದಂತೆ ವೇದಿಕೆಯಲ್ಲಿದ್ದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಭಟ್‌ರವರು ದತ್ತಿ ಇಲಾಖೆಯ ನಿಯಮಗಳ ಪ್ರಕಾರ ನಡೆಯುತ್ತಿಲ್ಲವಾದುದ್ದರಿಂದ ನಾನು ಸಭೆ ಬಹಿಷ್ಕರಿಸುವುದಾಗಿ ಹೇಳಿ  ತಾ.ಪಂ.ಸದಸ್ಯ ಲಕ್ಷ್ಮೀ ನಾರಾಯಣ ಟಿ.ಎಂ. ಜೊತೆಗೆ ವೇದಿಕೆಯಿಂದ ನಿರ್ಗಮಿಸಿ ಭಜನೆಯಲ್ಲಿ ಪಾಲ್ಗೊಂಡರು. ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಉಪಸ್ಥಿತಿಗೆ ವಿರೋಧ ಸೂಚಿಸಿ ವೇದಿಕೆ ಮುಂಭಾಗದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಗಳ ನೂರಕ್ಕೂ ಹೆಚ್ಚು ಮಂದಿ ಭಜನೆ ಆರಂಭಿಸಿದರು. ಈ ವೇಳೆ ಭಜನಾ ನಿರತರೊಂದಿಗೆ ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್.,ರವರು ಮನವೊಲಿಕೆ ಯತ್ನ ನಡೆಸಿದರು. ಆದರೆ ಇದಕ್ಕೆ ಭಜನಾ ನಿರತರು ಒಪ್ಪದೇ ಇದ್ದ ಹಿನ್ನೆಲೆಯಲ್ಲಿ ವೇದಿಕೆಯಲ್ಲಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ.ರವರು ಭಜನಾ ನಿರತರೊಂದಿಗೆ ಮಾತುಕತೆ ನಡೆಸಿದರು.  ಈ ವೇಳೆ ಭಜನಾ ನಿರತರ ಪರವಾಗಿ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಗೌಡ, ಬೆಳ್ತಂಗಡಿ ತಾಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ನವೀನ್ ನೆರಿಯ ಮಾತನಾಡಿ, ಸರಕಾರದ ಕಾರ್‍ಯಕ್ರಮವಾಗಿದ್ದಲ್ಲಿ ಕರ್ನಾಟಕ ಸರಕಾರದ ಹೆಸರು ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವೆಂದು ಮಾತ್ರ ಹೆಸರು ಹಾಕಿ ಸಭೆ ನಡೆಸಿದ್ದಲ್ಲಿ ನಮ್ಮ ಅಭ್ಯಂತರವಿರಲಿಲ್ಲ. ಇದೇ ವೇದಿಕೆಯಲ್ಲಿ ಸಭೆ ನಡೆಸುವುದಾದಲೀ ವೇದಿಕೆಯಲ್ಲಿ ಹಾಕಲಾಗಿರುವ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಬದಲಿಸಿ ಕಾರ್‍ಯಕ್ರಮ ನಡೆಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳು ಒಪ್ಪದಿದ್ದಾಗ ಭಜನೆ ಮತ್ತೆ ಮುಂದುವರಿಯಿತು. ಈ ಹೊತ್ತಿಗೆ ಪೊಲೀಸರು ಕಾರ್‍ಯಕ್ರಮ ವಿರೋಧಿಸಿ ಭಜನೆ ಮಾಡುತ್ತಿದ್ದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸ್ಥಳದಿಂದ ತೆರವುಗೊಳಿಸಿದರು. ಬಳಿಕ ಸಭಾ ಕಾರ್‍ಯಕ್ರಮ ಮುಂದುವರಿಯಿತು.

ಭಜನಾ ನಿರತರಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ತುಕ್ರಪ್ಪ ಶೆಟ್ಟಿ ನೂಜೆ, ನಾರಾಯಣ ಪಿ., ರುಕ್ಮಯ ಮಡಿವಾಳ, ರವಿ ಇಳಂತಿಲ, ಹಿಂದೂ ಜಾಗರಣ ವೇದಿಕೆ ಸಂಚಾಲಕ ರವಿಪ್ರಸಾದ್ ಶೆಟ್ಟಿ ಬಲ್ಯ, ರಾಘವ ಭಂಡಾರಿ, ಬಜರಂಗದಳದ ಸಹಸಂಚಾಲಕರಾದ ದಿನೇಶ್ ಚಾರ್ಮಾಡಿ, ಗಣೇಶ್ ಕಳೆಂಜ, ರಮೇಶ್ ಧರ್ಮಸ್ಥಳ, ಸಂತೋಷ್ ಉಜಿರೆ, ರತೀಶ್ ಗೌಡ ಶಿಬಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಉಪ್ಪಡ್ಕ ಸೇರಿದಂತೆ ನೂರಾರು ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಠಾಣೆ ಎಸ್‌ಐ ಮಾಧವ ಕೂಡ್ಲು, ಪೂಂಜಾಲಕಟ್ಟೆ ಎಸ್‌ಐ ಚಂದ್ರಶೇಖರ, ವೇಣೂರು ಎಸ್‌ಐ ಲೋಲಾಕ್ಷರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕೈಗೊಂಡಿದ್ದರು. 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.