ಮುಖ್ಯಮಂತ್ರಿ ಸಿದ್ಧರಾಮಯ್ಯ ಹೋಗದೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಜನಾರ್ದನ ಪೂಜಾರಿ ಕಟುವಾಗಿ ಟೀಕಿಸಿದ್ದಾರೆ.
ಸೋಮವಾರ ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ಮುಖಂಡ ಎಸ್.ಎಂ.ಕೃಷ್ಣರಂಥ ಹಿರಿಯ ಮುತ್ಸದ್ದಿ ರಾಜಕಾರಣಿ ಪಕ್ಷ ತೊರೆಯುವ ನಿರ್ಣಯ ಪ್ರಕಟಿಸುವ ಸಂದರ್ಭ ಹೇಳಿರುವ ಮಾತುಗಳು ಸತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಎಸ್.ಎಂ.ಕೃಷ್ಣ ಅವರೇ ಮುಖ್ಯಮಂತ್ರಿ ದುರಹಂಕಾರಕ್ಕೆ ಕಡಿವಾಣ ಹಾಕಲು ನಾವು ಎಲ್ಲರೂ ಒಟ್ಟಾಗಿ ನಿಲ್ಲುವ. ಪಕ್ಷದ ಬಗ್ಗೆ ಈಗಾಗಲೇ ಅಸಾಮಾಧಾನ ಹೊರ ಹಾಕಿರುವ ಸಿ.ಕೆ.ಜಾಫರ್ ಷರೀಫ್, ಪ್ರಕಾಶ್ ಹುಕ್ಕೇರಿ ಹಾಗೂ ಇದೇ ಹಾದಿಯಲ್ಲಿರುವ ಇತರ ನಾಯಕರಿಗೆ ಕೂಡ ಇದೇ ಮಾತನ್ನು ಹೇಳಲು ಬಯಸುತ್ತೇನೆ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ . ಬೇರೆ ಪಕ್ಷಕ್ಕೆ ಹೋಗಬೇಡಿ. ವಿರೋಧ ಪಕ್ಷಗಳು ರಾಜಕೀಯವಾಗಿ ನಿಮ್ಮನ್ನು ಮುಗಿಸಲು ಕಾಯುತ್ತಿವೆ. ಅವರಿಗೆ ನೀವು ದೊಡ್ಡ ಆಸ್ತಿಯಾಗುತ್ತೀರಿ. ಆದರೆ ನಿಮ್ಮ ಭವಿಷ್ಯದ ರಾಜಕಾರಣಕ್ಕೆ ಅವರೇ ಮುಳ್ಳಾಗುತ್ತಾರೆ ಎಂದು ಹೇಳಿದ ಪೂಜಾರಿ, ಬಿಜೆಪಿಯವರಿಗೆ ಕೃಷ್ಣ ಮೇಲೆ ಪ್ರೀತಿ ಇದ್ದರೆ ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಲಿ ಎಂದು ಸಲಹೆ ನೀಡಿದರು. ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೊ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.