ಮಂಗಳೂರಿನ ತೋಕೂರಿನಲ್ಲಿ ಹಳಿ ಕೆಲಸ. ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಸಹಿತ ಮಂಗಳೂರು ಸ್ಟೇಶನ್ ನಲ್ಲೂ ಪ್ರಯಾಣಿಕರ ಪರದಾಟ.
ಇದು ಬೆಂಗಳೂರಿಗೆ ರಾತ್ರಿ ತೆರಳುವ ರೈಲಿಗಾಗಿ ನಿಂತವರ ಗೋಳು. ಭಾನುವಾರ ರಾತ್ರಿಯಿಡೀ ಇಂಥದ್ದೇ ಅವಸ್ಥೆ.
ಕಣ್ಣೂರಿನಿಂದ ಮಂಗಳೂರಿಗೆ ಬಂದು ಹಾಗೂ ಕಾರವಾರದಿಂದ ಮಂಗಳೂರಿಗೆ ಬಂದು, ಬೆಂಗಳೂರಿಗೆ ತೆರಳುವ ರೈಲಿನ ಸ್ಥಿತಿ ಇದು. ಇಂಥದ್ದಕ್ಕೆ ಏನು ಕಾರಣ ಎಂಬುದಕ್ಕೆ ಖುದ್ದು ಅಧಿಕಾರಿಗಳಿಂದಲೂ ಸಮರ್ಪಕ ಉತ್ತರ ದೊರಕಲಿಲ್ಲ.
ಲಭ್ಯ ಮಾಹಿತಿಯಂತೆ ಕಣ್ಣೂರಿನಿಂದ ಬಂದ ಪ್ರಯಾಣಿಕರು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ರಾತ್ರಿ 7ರಿಂದ 12ವರೆಗೆ ರೈಲಿನಲ್ಲೇ ಕಾಲ ಕಳೆಯಬೇಕಾಯಿತು. ಮೊದಲೇ ಸೆಖೆ, ಅದರಲ್ಲೂ ಚಲಿಸದ ರೈಲು. ಪರಿಸ್ಥಿತಿ ಹೇಗಿದ್ದಿರಬಹುದು ಎಂಬುದನ್ನು ನೀವೇ ಊಹಿಸಿ.
ಇದಕ್ಕೆ ಕಾರಣ ಕಾರವಾರದಿಂದ ಬರುವ ಬೋಗಿಗಳು. ಈ ಬೋಗಿಗಳು ಬರುವವರೆಗೆ ಕಣ್ಣೂರಿನಿಂದ ಬರುವ ರೈಲು ಹಾಗೆಯೇ ಮಂಗಳೂರಲ್ಲಿ ಠಿಕಾಣಿ ಹೂಡಬೇಕು.
ವಿವಿಧ ಕಾರ್ಯಕ್ರಮಗಳಿಗೆ ಮಂಗಳೂರಿಗೆ ಆಗಮಿಸಿದ ಮಹಿಳೆಯರು, ಮಕ್ಕಳು, ವೃದ್ಧರ ಸಹಿತ ಪ್ರಯಾಣಿಕರು ರೈಲು ವಿಳಂಬದಿಂದ ತೊಂದರೆ ಅನುಭವಿಸಿದ್ದು, ಸೋಮವಾರ ಬೆಂಗಳೂರಿನಲ್ಲಿ ಕಚೇರಿಗೆ ತೆರಳುವವರೂ ಸಮಸ್ಯೆಗೊಳಗಾದರು.
ಹಾಗೂ ಹೀಗೂ ಕಾರವಾರದಿಂದ ರೈಲು ಬಂತು. ಅದು ಜೋಡಣೆಯಾಗಲು ಮತ್ತೆ ಅರ್ಧ ಗಂಟೆ ತಗಲಿತು. ಡುಗುಡುಗು ಎಂದು ರೈಲು ಹೊರಟು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲು ನಿಲ್ದಾಣ ತಲುಪುವಾಗ 1.30 ರಾತ್ರಿಯಾಗಿತ್ತು…!
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)