ಕಂಬಳದ ಜೊತೆ ಕೃಷಿ ಬದುಕು ಕಟ್ಟಿಕೊಳ್ಳುವ ಕೆಲಸವಾಗುತ್ತಿದೆ. ನಮ್ಮ ಸಂಸ್ಕೃತಿಯ ಜೀವನಾಡಿ ಆಗಿರು ಕಂಬಬಳವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವಂತೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಜಾನಪದ ಕ್ರೀಡೆಯನ್ನು ಯಾವತ್ತು ಬಿಟ್ಟುಕೊಡುವುದಿಲ್ಲ ಎಂದು ಮೂಡುಬಿದಿರೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳು ರಂಗಮಿ ಕಲಾವಿದರು ಒಟ್ಟಾಗಿ ಕೂಗಿದ ಘೋಷಣೆ ಇದು.
ರಾಜಕಾರಣಿಗಳು, ಕಲಾವಿದರು, ಸರ್ವಧರ್ಮದ ಮುಖಂಡರು, ಕಂಬಳದ ಕೋಣಗಳು, ಕಂಬಳ ಕೋಣಗಳ ಯಜಮಾನರೊಂದಿಗೆ ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಕಂಬಳ ಸಮಿತಿ ವತಿಯಿಂದ ನಡೆದ ಈ ಹಕ್ಕೊತ್ತಾಯ ಮೆರವಣಿಗೆಯಲ್ಲಿ ಸಂಸದ ನಳಿನ್ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಬಿಜೆಪಿ ಜಗದೀಶ ಅಧಿಕಾರಿ, ಕನ್ಯಾನ ಬಾಳೆಕೋಡಿಯ ಶಶಿಕಾಂತ ಮಣಿ ಸ್ವಾಮೀಜಿ, ಜೆಡಿಎಸ್ ಮುಖಂಡರಾದ ಅಶ್ವಿನ್ ಪಿರೇರಾ, ದಿವಾಕರ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಹಿತ ರಾಜಕೀಯ ಮುಖಂಡರು ಪಾಲ್ಗೊಂಡರು.
ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಹಕ್ಕೊತ್ತಾಯ ಜಾಥಾದಲ್ಲಿ ’ತುಳುನಾಡು ನಮ್ಮ ನೆಲ, ಕಂಬಳ ನಮ್ಮ ಬೆಂಬಲ. ಕಂಬಳ ಉಳಿಸಿ ಎಂಬ ಘೋಷಣೆ ಕೂಗಿದರು.
ಜಾನಪದ ಕ್ರೀಡೆ ಕಂಬಳಕ್ಕೆ ಆಧ್ಯಾತ್ಮಿಕ ಸ್ಪರ್ಶವಿದೆ. ಅದರಲ್ಲಿ ಅಹಿಂಸೆಯಿಲ್ಲ. ಅದನ್ನು ವಿರೋಧಿಸುವವರು ನೋಡುವ ನೋಟದಲ್ಲಿ ಪರಿವರ್ತನೆ ಮಾಡಿಕೊಂಡರೆ ಉತ್ತಮ, ನಾಡಿನ ಜನತೆ ಕಂಬಳವನ್ನು ಬೆಂಬಲಿಸಿದೆ. ನ್ಯಾಯಾಲಯವೂ ಕಂಬಳವನ್ನು ಬೆಂಬಲಿಸಿ ತೀರ್ಪು ನೀಡುವ ದೃಢ ವಿಶ್ವಾಸವಿದೆ ಎಂದು ಬಾಳೆಕೋಡಿ ಶಶಿಕಾಂತ ಮಣಿ ಸ್ವಾಮೀಜಿ ಹೇಳಿದರು.
ಜಾನಪದ ಕ್ರೀಡೆಯಾದ ಕಂಬಳವನ್ನು ಬಿಟ್ಟುಕೊಡಲಾಗದು. ಕಂಬಳ ಬೇಕೇ ಬೇಕು. ಸರ್ಕಾರ ಅಧ್ಯಾದೇಶ ಹೊರಡಿಸಿ ಕಂಬಳ ಬೆಂಬಲಿಸಬೇಕು ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಆಗ್ರಹಿಸಿದರು.
ಕಂಬಳವನ್ನು ವಿರೋಧಿಸಿ ಪ್ರಾಣಿ ದಯಾ ಸಂಘಟನೆಯವರು (ಪೇಟಾ) ತುಳುವರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಇನ್ನೊಂದೆಡೆ ಮಾಧ್ಯಮದ ಸಹಕಾರದಿಂದ ಕಂಬಳ ಕೇಂದ್ರ ಸರ್ಕಾರದ ಅಂಗಳದಲ್ಲೂ ಸುದ್ದಿಯಾಗಿದೆ. ಅನಗತ್ಯವಾಗಿ ವಿವಾದ ಮಾಡುತ್ತಿರುವ ಪೇಟಾದವರು ಇನ್ನು ದ.ಕ ಜಿಲ್ಲೆಗೆ ಬಂದರೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ತುಳು ಚಿತ್ರರಂಗ, ರಂಗಭೂಮಿ ಕಂಬಳವನ್ನು ಬೆಂಬಲಸಿ ಬೀದಿಗಿಳಿಯಲೂ ಸಿದ್ಧ ಎಂದು ಕಲಾವಿದ ದೇವಿದಾಸ್ ಕಾಪಿಕಾಡ್ ಹೇಳಿದರು.
ತುಳುನಾಡಿನ ಪಂಚಶಕ್ತಿಗಳಲ್ಲಿ ಒಂದಾಗಿರುವ ಕಂಬಳ ಅಳಿದರೆ ಕರಾವಳಿಯ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ನವೀನ್ ಡಿ.ಪಡೀಲ್ ಹೇಳಿದರು. ತಮ್ಮ ಹೋರಾಟದ ಮೂಲಕ ಜಲ್ಲಿಕಟ್ಟು ಉಳಿಸಿಕೊಂಡ ತಮಿಳರ ಹೋರಾಟ ತುಳುವರಿಗೆ ಸ್ಫೂರ್ತಿಯಾಗಬೇಕು ಎಂದು ಭೋಜರಾಜ್ ವಾಮಂಜೂರು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆ. ಗುಣಪಾಲ ಕಡಂಬ ಕಂಬಳವೊಂದು ದೈವಿಕ ಆಚರಣೆಯೂ ಹೌದು. ಎರಡೂವರೆ ವರ್ಷಗಳ ಕಾನೂನಿನ ಹೋರಾಟದಲ್ಲಿ ಜಯದ ನಿರೀಕ್ಷೆ ಇದೆ. ದೊರೆಸ್ವಾಮಿಯಂತಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಕಂಬಳ ಜೂಜು, ಹಿಂಸೆ, ಎನ್ನುವ ಮಾತುಗಳನ್ನಾಡಿದ್ದಾರೆ. ಅವರನ್ನು ಕಂಬಳಕ್ಕೆ ಆಹ್ವಾನಿಸಿ ಮನವರಿಕೆ ಮಾಡುವ ಅಗತ್ಯವಿದೆ ಎಂದರು.
ಬೃಹತ್ ಜಾಥಾ
ಮೂಡುಬಿದಿರೆ ಸ್ವರಾಜ್ ಮೈದಾನದಿಂದ – ಜೋಡಿಕೆರೆ ಗದ್ದೆಯವರೆಗೆ ಪ್ರತಿಭಟನೆ ನಡೆಯಿತು. 150ಕ್ಕೂ ಅಧಿಕ ಜೋಡಿ ಕೋಣಗಳು, 10 ಸಾವಿರದಷ್ಟು ಜನರು ಹಕ್ಕೋತ್ತಾಯದಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಅನೇಕ ಸಂಘಟನೆಗಳು, ಚಿತ್ರನಟರು, ರಾಜಕಾರಣಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸಾಥ್ ನೀಡಿದರು.
ಹೋರಾಟದ ಕಿಚ್ಚು:
ರಾಜ್ಯದ ಹಲವೆಡೆ ಕಂಬಳ ಪರ ಹೋರಾಟ ನಡೆಯುತ್ತಿದ್ದು, ಮೂಡುಬಿದಿರೆಯಲ್ಲಿನ ಹಕ್ಕೋತ್ತಾಯವು ಅದಕ್ಕೆ ಮತ್ತಷ್ಟು ಬಲ ನೀಡಿತು. ಕಂಬಳಪರ ಘೋಷಣೆ ಕೂರಿದರು. ಕಂಬಳದ ಉಳಿವಿಗಾಗಿ ಸುಗ್ರೀವಾಜ್ಞೆ ರೂಪಿಸಬೇಕೆಂದು ಆಗ್ರಹಿಸಿದರು. ಕಂಬಳ ಹಿಂಸೆ ಎಂದು ಆರೋಪಿಸುವ ‘ಪೆಟಾ’ ಸಂಸ್ಥೆಯನ್ನು ನಿಷೇಧಿಸಿ ಎನ್ನುವ ಭಿತ್ತಿಪತ್ರ ಕೂಡಾ ಗಮನ ಸೆಳೆಯಿತು.
ಕೋಣಗಳ ಮೆರವಣಿಗೆ:
ಸ್ವರಾಜ್ಯ ಮೈದಾನದಿಂದ ಆರಂಭವಾದ ಹಕ್ಕೊತ್ತಾಯ ಜಾಥಾಗೆ ಶಾಸಕ, ಮೂಡುಬಿದಿರೆ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಅಭಯಚಂದ್ರ ಜೈನ್ ತೆಂಗಿನಕಾಯಿ ನೆಲಕ್ಕೆ ಹೊಡೆದು ಚಾಲನೆ ನೀಡಿದರು. ಕರಾವಳಿಯ ವಿವಿಧ ಕಂಬಳ ಸಮಿತಿಗಳ ಗಣ್ಯರು, ಕಂಬಳಾಭಿಮಾನಿಗಳ ಜತೆಗೂಡಿ ಎಲ್ಲೆಡೆಗಳಿಂದ ಶೃಂಗರಿಸಿಕೊಂಡು ಬಂದಿದ್ದ ನೂರೈವತ್ತಕ್ಕೂ ಅಧಿಕ ಜತೆ ಕೋಣಗಳು ಹಕ್ಕೊತ್ತಾಯಕ್ಕಾಗಿ ರಸ್ತೆಯಲ್ಲಿ ಹೆಜ್ಜೆ ಹಾಕಿದವು. ಜತೆಯಲ್ಲಿ ಹಳದಿ,ಕೆಂಪು, ನೀಲಿ ಹೀಗೆ ಮುಂಡಾಸು ಸುತ್ತಿಕೊಂಡ ಮಾಲೀಕರು, ಸಮವಸ್ತ್ರ ಧರಿಸಿದ್ದ ಓಟಗಾರರು, ಪರಿಚಾರಕರು, ಕಂಬಳ ಉಳಿಸಿಕೊಡಿ ಇತ್ಯಾದಿ ಪೋಸ್ಟರ್‌ಗಳನ್ನು ಹಿಡಿದವರು, ಚೆಂಡೆ, ಕೊಂಬು, ನಾಸಿಕ್ ಬ್ಯಾಂಡ್, ಸಂಗೀತ, ವಾದ್ಯ, ಘೋಷಗಳೊಂದಿಗೆ ರಿಂಗ್ ರೋಡ್ ರಸ್ತೆಯಾಗಿ ಕಡಲಕೆರೆ ನಿಸರ್ಗಧಾಮದ ಕಂಬಳದ ಸ್ಥಳಕ್ಕೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಸಾಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವಿನಯ ಕುಮಾರ್ ಸೊರಕೆ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಕೆ.ಭುವನಾಭಿರಾಮ ಉಡುಪ, ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್, ಸುದರ್ಶನ ಎಂ,ಜಿಲ್ಲಾ ವಕ್ತಾರ ಕೆ.ಕೃಷ್ಣರಾಜ ಹೆಗ್ಡೆ. ವಿಹಿಂಪದ ಜಗದೀಶ ಶೇಣವ, ಜೆಡಿಎಸ್. ಕ್ಷೇತ್ರಾಧ್ಯಕ್ಷ ಅಶ್ವಿನ್ ಜೆ.ಪಿರೇರಾ, ತೋಡಾರು ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಡಲಕೆರೆಯ ನಿಸರ್ಗಧಾಮದಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ವಾಮಂಜೂರು ನವೀನ್‌ಚಂದ್ರ ಆಳ್ವ, ಕರಿಂಜೆ ವಿನೂ ವಿಶ್ವನಾಥ ಶೆಟ್ಟಿ, ಬಂಟರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ಸುಧಾಕರ ಹೇರಂಜೆ, ಕಾರ್ಯದರ್ಶಿ ಅಶೋಕ್ ಮಾಡ, ಶಶಿಧರ ಮಡಮಕ್ಕಿ, ಕದ್ರಿ ನವನೀತ ಶೆಟ್ಟಿ, ಕಲಾವಿದ ಅರ್ಜುನ್ ಕಾಪಿಕಾಡ್, ಸತೀಶ್ಚಂದ್ರ ಸಾಲ್ಯಾನ್, ಶಶಿಧರ ಮಡಮಕ್ಕಿ, ಪಿ.ಆರ್.ಶೆಟ್ಟಿ, ಉಡುಪಿ ಜಿ.ಪಂ. ಸದಸ್ಯ ಉದಯ ಎಸ್.ಕೋಟ್ಯಾನ್, ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ. ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು ಮತ್ತಿತರರು ಪಾಲ್ಗೊಂಡಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)