ಜಿಲ್ಲಾ ಸುದ್ದಿ

ಗೋಸಂಪತ್ತು ಉಳಿಸುವ ಸಂಕಲ್ಪಕ್ಕೆ ಬನ್ನಿ ಮಂಗಲಭೂಮಿಗೆ

  • ಗೋಭಕ್ತರ ಮಹಾತ್ರಿವೇಣಿಗೆ ವೇದಿಕೆ ಸಜ್ಜು
  • 1500 ಸಂತರು ಕುಳಿತುಕೊಳ್ಳಬಹುದಾದ ಮೂರು ಎಕರೆ ವಿಶಾಲ ಭವ್ಯ ವೇದಿಕೆ
  • ಆಕರ್ಷಕ ಗೋತಳಿಗಳ ಪ್ರದರ್ಶನ, ವಸ್ತುಪ್ರದರ್ಶನ, ಮಾಹಿತಿ
  • 1.25 ಲಕ್ಷ ಮಂದಿಗೆ ಭೋಜನ ವ್ಯವಸ್ಥೆ

ವರದಿ: ಉದಯಶಂಕರ ಭಟ್

https://bantwalnews.com

ಮಂಗಲ ಗೋಯಾತ್ರೆಯ ಮಹಾಮಂಗಲದ ಪ್ರಮುಖ ಆಕರ್ಷಣೆ ಎನಿಸಿದ ಅಮೂಲ್ಯ ಗೋವುಗಳ, ಸಹಸ್ಯಾಧಿಕ ಸಂತರ, ಶತಸಹಸ್ರಾಧಿಕ ಗೋಭಕ್ತರ ಮಹಾತ್ರಿವೇಣಿಗೆ ವೇದಿಕೆ ಸಜ್ಜಾಗಿದೆ.

ಮೂರು ಎಕರೆ ವಿಶಾಲದ ಭವ್ಯ ವೇದಿಕೆ ಬಹುಶಃ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಮಂಗಲಭೂಮಿಯಲ್ಲಿ ಸಿದ್ಧವಾಗಿದೆ. 1500 ಸಂತರು ಕುಳಿತುಕೊಳ್ಳಬಹುದಾದ ಭವ್ಯ ಮುಖ್ಯವೇದಿಕೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗಾಗಿ ಪ್ರತ್ಕೇಕ ವೇದಿಕೆ ಸಜ್ಜಾಗಿದೆ. ಎಲ್ಲ ಸಾವಿರ ಸಂತರಿಗೆ ಏಕರೂಪದ ಆಸನ ವ್ಯವಸ್ಥೆ ಇರುತ್ತದೆ. ಸುಮಾರು ಒಂದು ಲಕ್ಷ ಮಂದಿಗೆ ವಿಶಾಲ ಸಭಾಂಗಣದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು 30 ಎಕರೆ ಪ್ರದೇಶದಲ್ಲಿ ಭವ್ಯ ಸಭಾಂಗಣ ನಿರ್ಮಾಣವಾಗಿದೆ.

ಮಹಾತ್ರಿವೇಣಿಯಲ್ಲಿ ಪಾಲ್ಗೊಳ್ಳುವ ಸಂತರ ಪೈಕಿ ನೂರಾರು ಮಂದಿ ಈಗಾಗಲೇ ಮಂಗಲಭೂಮಿ ತಲುಪಿದ್ದು, ಉಳಿದ ಸಂತರು ಮುಂಜಾನೆ ವೇಳೆಗೆ ಆಗಮಿಸಲಿದ್ದಾರೆ. ನಗರ ಹಾಗೂ ನಗರ ಹೊರವಲಯದ ವಿವಿಧ ದೇವಾಲಯಗಳು, ಮಠ ಮಂದಿರಗಳು, ಮನೆಗಳು ಹಾಗೂ ಕಲ್ಯಾಣಮಂಟಪಗಳಲ್ಲಿ ಸಂತರ ವಸತಿ ಹಾಗೂ ನಿತ್ಯದ ಅನುಷ್ಠಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯಸಭಾ ಸದಸ್ಯ ಮತ್ತು ವಿರಾಟ್ ಹಿಂದುಸ್ಥಾನ್ ಸಂಗಮ್‍ನ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅತಿಥಿಗಳಾಗಿರುವರು. ಸುಮಾರು 20 ಮಂದಿ ಸಂತರು ಮಹಾತ್ರಿವೇಣಿಯನ್ನು ಉದ್ದೇಶಿಸಿ ಮಾತನಾಡುವರು.

ಧಾರ್ಮಿಕ ಕಾರ್ಯಕ್ರಮ

ಶುಕ್ರವಾರದಿಂದ ಆರಂಭವಾಗಿರುವ ಗೋ ಸಂಬಂಧಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಉತ್ಸಾಹದಿಂದ ಶನಿವಾರವೂ ಪಾಲ್ಗೊಂಡರು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಗೋಧರ್ಮಧಾಮ ಯಾಗಮಂಟಪದಲ್ಲಿ ಬೆಳಿಗ್ಗೆ 7ರಿಂದ ದಿನವಿಡೀ ಗೋಸೂಕ್ತ ಪಾರಾಯಣ, ಗೋವರ್ಧಕ ಕಲ್ಪೋಕ್ತ ಪೂಜೆ, ರುದ್ರಾಭಿಷೇಕ, ಕಾಮಧೇನು ಮಹಾಯಾಗ, ಗೋ ತುಲಾಭಾರ, ಸಪ್ತಹೋಮ ಪೂಜೆ, ಗೋರಕ್ಷೆ, ಗೋಚಂದನ ಸಮರ್ಪಣೆಯಂಥ ವಿಧಿವಿಧಾನಗಳು ನಡೆಯುತ್ತಿವೆ.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ 200ಕ್ಕೂ ಹೆಚ್ಚು ಪುರೋಹಿತರು ಯಾವುದೇ ಸಂಭಾವನೆ ಪಡೆಯದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಯಾಗಶಾಲೆಯಲ್ಲಿ ಗೋಪೂಜೆ, ಗೋಗ್ರಾಸದಂಥ ಸೇವೆಗಳಿಗೂ ಅವಕಾಶವಿದೆ. ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಪಟ್ಟದ ರಾಜನಂದಿ ಧವಳಗಿರಿ ಯಾಗಶಾಲೆಯ ಪ್ರಮುಖ ಆಕರ್ಷಣೆಯಾಗಿದೆ. ಆರೂವರಿ ಅಡಿ ಎತ್ತರದ ಈ ನಂದಿಗೆ ಇನ್ನೂ ಕೇವಲ ಮೂರೂವರೆ ವರ್ಷ. ಆಂಧ್ರಪ್ರದೇಶ ಮೂಲದ ಓಗೋಂಲ್ ತಳಿಯ ನಂದಿ ಇದಾಗಿದ್ದು, ಕಸಾಯಿಖಾನೆಗೆ ಹೋಗುತ್ತಿದ್ದ ಈ ನಂದಿಯನ್ನು ಭಟ್ಕಳ ಸಮೀಪ ರಕ್ಷಿಸಿ, ಗೋಕರ್ಣಕ್ಕೆ ನೀಡಿದ್ದರು.

ನಾಣ್ಯ, ಬಾಳೆಹಣ್ಣು, ಅಡಿಕೆ, ತರಕಾರಿ, ಹುಲ್ಲು, ಬಾಳೆಹಣ್ಣು ಮತ್ತಿತರ ಸುವಸ್ತುಗಳಿಂದ ಭಕ್ತಾದಿಗಳು ಗೋ ತುಲಾಭಾರ ಮಾಡಿಸುತ್ತಿದ್ದಾರೆ. ಇಡೀ ಯಜ್ಞಶಾಲೆಯಲ್ಲಿ ಒಂದು ತುಂಡು ಕೂಡಾ ಕಟ್ಟಿಗೆ ಬಳಸದೇ ಕೇವಲ ದೇಸಿ ಹಸುವಿನ ಸೆಗಣಿಯ ಬೆರಣಿಯಿಂದ ಹವನಗಳನ್ನು ನಡೆಸಲಾಗುತ್ತಿದೆ. ಸಪ್ತ ಗೋಮಾತಾ ಮಂದಿರದಲ್ಲಿ ಏಳು ವಿಶಿಷ್ಟ ತಳಿಯ ಹಸುಗಳಿಗೆ ವಿವಿಧ ಸೇವೆಗಳನ್ನು ನೆರವೇರಿಸಲಾಗುತ್ತಿದೆ. ವೇದಮೂರ್ತಿ ಕೇಶವ ಪ್ರಸಾದ್ ಭಟ್ ಕೂಟೇಲು ಅವರ ಮುಂದಾಳುತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಶ್ರೀಮಠದ ಧರ್ಮಕರ್ಮ ವಿಭಾಗದ ಕಾರ್ಯದರ್ಶಿ ರಾಮಕೃಷ್ಣ ವಿವರಿಸಿದರು.

ಆಕರ್ಷಿಸಿದ ಆಲೆಮನೆ

ಸಾಂಪ್ರದಾಯಿಕ ವಿಧಾನದ ಮೂಲಕ ಬೆಲ್ಲ ತಯಾರಿಸುವ ಆಲೆಮನೆ ಪ್ರಮುಖ ಆಕರ್ಷಣೆಯಾಗಿದೆ. ಸಾವಯವ ಕಬ್ಬಿನಿಂದ ಸ್ಥಳದಲ್ಲೇ ಬೆಲ್ಲ ತಯಾರಿಸಲಾಗುತ್ತಿದ್ದು, ಕಬ್ಬಿನ ಹಾಲು ತೆಗೆಯಲು ಸಾಂಪ್ರದಾಯಿಕ ಎತ್ತಿನ ಗಾಣವನ್ನು ಬಳಸಲಾಗುತ್ತಿದೆ. ಜಿ.ಎಸ್.ಭಟ್ ಅವರು ಈ ವಿಶಿಷ್ಟ ಆಲೆಮನೆ ವ್ಯವಸ್ಥೆಗೊಳಿಸಿದ್ದು, ಮಂಗಳೂರಿನ ಇತಿಹಾಸದಲ್ಲೇ ಇಂಥ ಅನುಭವ ವಿಶಿಷ್ಟವಾದದ್ದು. ಸಾವಯವ ಕಬ್ಬಿನ ರಸವನ್ನೂ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.

50ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಗವ್ಯೋತ್ಪನ್ನಗಳು ಮತ್ತು ಗೋಸಂಬಂಧಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಮೊಟ್ಟಮೊದಲ ಗೋ ಮ್ಯೂಸಿಯಂ ಕೂಡಾ ಜನರಿಗೆ ವಿಶಿಷ್ಟ ಅನುಭವ ನೀಡುತ್ತಿದೆ. ತ್ಯಾಜ್ಯ ಎಂದು ಪರಿಗಣಿಸುವ ಗೋಮಯದಿಂದ ವೈವಿಧ್ಯಮಯ ವಸ್ತುಗಳನ್ನು ಸಿದ್ಧಪಡಿಸಿ ಅದು ಕೂಡಾ ಪೂಜ್ಯ ಎಂಬ ಭಾವನೆ ಮೂಡಿಸುವ ಪ್ರಯತ್ನ ಇದಾಗಿದೆ. ಮೂಡಿಗೆರೆ ತಾಲೂಕು ದಾರವಳ್ಳಿಯ ಈ ಮ್ಯೂಸಿಯಂನಲ್ಲಿ ನೂರಾರು ವರ್ಷಗಳ ಗೋವು- ಮನುಷ್ಯನ ಅನುಬಂಧವನ್ನು ಬಿಂಬಿಸುವ ವಸ್ತುಗಳಿವೆ. ವಿಕಿರಣಹರ ಸಾಧನ, ಶೃಂಗಕಹಳೆಯಂಥ ವಿಶಿಷ್ಟ ವಸ್ತುಗಳು ಪ್ರದರ್ಶನಕ್ಕಿವೆ.

ದಾಸೋಹ ಶಾಲೆ

ಸುಮಾರು ಎರಡು ಲಕ್ಷ ಮಂದಿಗೆ ಉಣಬಡಿಸುವ ಸುಸಜ್ಜಿತ ಪಾಕಶಾಲೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ. ನಾಲ್ಕು ದಿನಗಳಿಂದ ಇಲ್ಲಿ ಅನ್ನದಾನ ನಡೆಯುತ್ತಿದ್ದು, ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ಬಡಿಸಲಾಗಿದೆ. ಸುಮಾರು 50 ಕ್ವಿಂಟಲ್ ಅಕ್ಕಿ ಖರ್ಚಾಗಿದೆ ಎಂದು ಭೋಜನಶಾಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಜಯಶ್ಯಾಮ ನೀರ್ಕಜೆ ಹಾಗೂ ಕೆ.ಟಿ.ವೆಂಕಟೇಶ್ವರ ವಿವರಿಸಿದರು.

ಭಾನುವಾರ ಸುಮಾರು 1.25 ಲಕ್ಷ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ ಹಾಗೂ ಸಿಹಿ ತಿನಸು ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಮಂದಿಗೆ ಅಚ್ಚುಕಟ್ಟಾಗಿ ಉಣಬಡಿಸಲು 680 ಕಾರ್ಯಕರ್ತರ ಪಡೆ ಸಿದ್ಧವಾಗಿದೆ. 120 ಕೌಂಟರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪಾಕಶಾಲೆಯಿಂದ ಆಹಾರ ಸಾಗಿಸಲು 400 ಮಂದಿಯ ಸೇನೆ ಸಜ್ಜಾಗಿದೆ.

ಸಾರ್ವಜನಿಕರ ಬೆಳಗಿನ ಉಪಾಹಾರಕ್ಕಾಗಿ ರಾಜ್ಯದ ವಿವಿಧೆಡೆಯಲ್ಲಿ ಮಹಿಳೆಯರು ತಯಾರಿಸಿಕೊಟ್ಟ ಸುಮಾರು 1.40 ಲಕ್ಷ ಚಪಾತಿ ಬಳಸಲಾಗುತ್ತಿದೆ. 210 ಮಂದಿ ಪಾತ್ರೆಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರದ ಮದನಪಲ್ಲಿ ರೈತರು 1.5 ಟನ್ ಎಲೆಕೋಸನ್ನು ಕಾಣಿಕೆಯಾಗಿ ನೀಡಿದ್ದು, 12.5 ಲಕ್ಷ ರೂಪಾಯಿ ಮೌಲ್ಯದ ಸುವಸ್ತುಗಳನ್ನು ದಾನಿಗಳು ಸಮರ್ಪಿಸಿದ್ದಾರೆ. ಅಡುಗೆಗೆ ಬೇಕಾದ ಅಡುಗೆ ಅನಿಲವನ್ನು ಶ್ರೀಕರ ಪ್ರಭು ಪ್ರಾಯೋಜಿಸಿದ್ದಾರೆ. ಸುಮಾರು 6 ಸಾವಿರ ಲೀಟರ್ ಹಾಲು ಹಾಗೂ ನಾಲ್ಕು ಸಾವಿರ ಲೀಟರ್ ಮೊಸರಿನಿಂದ ಮಜ್ಜಿಗೆ ತಯಾರಿಸಲಾಗಿದೆ.

ಶುಚಿತ್ವಕ್ಕೆ ಒತ್ತು

ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಪರಿಸರಕ್ಕೆ ಯಾವುದೇ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ನೈರ್ಮಲ್ಯಕ್ಕೆ ಗಮನ ಹರಿಸಲಾಗಿದೆ. ಬಳಸಿದ ಪ್ಲಾಸ್ಟಿಕ್ ಬಾಟಲಿ, ಕಸಕಡ್ಡಿಗಳನ್ನು ಹೆಕ್ಕುವ ಕಾರ್ಯದಲ್ಲಿ ನೂರಾರು ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಮೂರು ದಿನಗಳಲ್ಲಿ ಸುಮಾರು 36 ಸಾವಿರ ಲೀಟರ್ ಗಂಜಿಯ ತಿಳಿ ಉತ್ಪಾದನೆಯಾಗುತ್ತಿದ್ದು, ಇದನ್ನು ಸೂಕ್ತವಾಗಿ ನಿರ್ವಹಿಸಲು, ಭೂಮಿಯಲ್ಲಿ ದೊಡ್ಡ ಹೊಂಡಗಳನ್ನು ತೆಗೆದು ವಿಲೇವಾರಿ ಮಾಡಲಾಗುತ್ತದೆ. ಇದಕ್ಕಾಗಿಯೇ ಮೂರು ಜೆಸಿಬಿಗಳು ಕಾರ್ಯ ನಿರ್ವಹಿಸುತ್ತಿವೆ. ಊಟಕ್ಕೆ ಅಡಿಕೆ ಹಾಳೆಯ ತಟ್ಟೆ ಹಾಗೂ ಬಾಳೆ ಎಲೆ ಬಳಸುತ್ತಿರುವುದು ಶ್ರೀಮಠದ ಪರಿಸರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಗೋಸಂರಕ್ಷಣೆಯ ನಿಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಮುಕ್ತ ವಲಯ ನಿರ್ಮಿಸುವ ಅಮೃತಪಥ ಯೋಜನೆಯ ಅಂಗವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುತ್ತಿದೆ.

ಭವ್ಯ ಸಾಂಸ್ಕøತಿಕ ಕಾರ್ಯಕ್ರಮ

ಮಹಾಮಂಗಲದಲ್ಲಿ ನಿರಂತರ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಗೋ ಆಧರಿತ ಕಾರ್ಯಕ್ರಮಗಳ ಸವಿಯನ್ನು ಕಲಾರಾಮ ವೇದಿಕೆ ಮೂಲಕ ಉಣಬಡಿಸಲಾಗುತ್ತಿದೆ. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಶನಿವಾರ ಬೆಳಿಗ್ಗೆ ವೇದಿಕೆ ಉದ್ಘಾಟಿಸಿದರು. ಕಡತೋಕ ಶ್ರೀಪಾದ ಹೆಗಡೆ ಅವರಿಂದ ಭಜನ್, ವಿದ್ಯಾ ಕಾಂಚನ ಅವರಿಂದ ಭಕ್ತಿಗಾನ, ದಾವಣಗೆರೆಯ ಸಿದ್ದಪ್ಪ ಕಲಾತಂಡದಿಂದ ಭಜನೆ, ಸಿದ್ಧಾಪುರ ನಿವೇದಿತಾ ಮಹಿಳಾ ಮಂಡಳಿಯಿಂದ ಗೋಗೀತೆ, ಕುಮಟಾ ಭಜನಾ ತಂಡದಿಂದ ನೃತ್ಯ ಭಜನೆ, ಸುಗ್ಗಿಕುಣಿತ, ಹೊನ್ನಾವರದ ಜಿ.ಎನ್.ಹೆಗಡೆ ಅವರಿಂದ ಗೋಮಹಿಮೆ ಕುರಿತ ಹರಿಕಥೆ ನಡೆಯಿತು.

ಮಂಗಲಗೋಯಾತ್ರೆ ವಾಹನಗಳಿಗೆ ಮಾರ್ಗಸೂಚಿ

ಕಾಸರಗೋಡು, ಮಡಿಕೇರಿ, ಸುಳ್ಯ, ಪುತ್ತೂರು ಹಾಗೂ ವಿಟ್ಲ ಕಡೆಯಿಂದ ಮಹಾಮಂಗಲಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ನಂತೂರು, ಕದ್ರಿ, ಕೆಪಿಟಿ, ಪದವಿನಂಗಡಿ, ಬೋಂದೇಲು, ಕಾವೂರು ಮಾರ್ಗವಾಗಿ ಕೂಳೂರಿನ ಮಂಗಲಭೂಮಿಗೆ ಆಗಮಿಸಬೇಕು ಎಂದು ಕೋರಲಾಗಿದೆ.

ಉಚಿತ ಬಸ್

ಮಹಾಮಂಗಲ ಗೋಯಾತ್ರೆಗೆ ಆಗಮಿಸುವ ಗೋಭಕ್ತರಿಗಾಗಿ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘ ಉಚಿತ ಸಿಟಿ ಬಸ್ ವ್ಯವಸ್ಥೆ ಮಾಡಿದೆ. ನಗರದಲ್ಲಿ ಯಾವ ಕಡೆಯಿಂದಾದರೂ ಮಂಗಲಭೂಮಿಗೆ ಉಚಿತವಾಗಿ ಕರೆತರಲಾಗುವುದು ಎಂದು ಖಾಸಗಿ ಬಸ್ಸುಗಳ ಮಾಲೀಕರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ಗೋವುಗಳೇ ಸೆಲೆಬ್ರಿಟಿಗಳು

ಹೊಸನಗರ ಗೋಶಾಲೆಯಿಂದ ಆಗಮಿಸಿದ ಅಪರೂಪದ ಗೋತಳಿಗಳ ಪ್ರದರ್ಶನ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದೆ. ಮುಖ್ಯವಾಗಿ ಹಳ್ಳಿಕಾರ್, ಥಾರ್ಪಾರ್ಕರ್, ಓಂಗೋಲ್, ಗೀರ್, ಸಹಿವಾಲ್ ತಳಿಗಳ ಮುಂದೆ ಯುವಕ ಯುವತಿಯರು ನಿಂತು ಸೆಲ್ಫಿ ತೆಗೆಸಿಕೊಳ್ಳುತ್ತಿರುವ ದೃಶ್ಯ ಮಾಮೂಲಾಗಿತ್ತು.

ಪಂಚಗವ್ಯಕ್ಕೆ ಶ್ರೇಷ್ಠ ಎನಿಸಿದ ಕಪಿಲೆ, ಶ್ವೇತಕಪಿಲಾ, ಅಮೃತಮಹಲ್, ತೀರಾ ಪುಟ್ಟ ಹಸುವಾದ ಮಲೆನಾಡು ಗಿಡ್ಡ, ಕಾಸರಗೋಡು ತಳಿಗಳ ಹಸುಗಳೂ ಪ್ರದರ್ಶನಕ್ಕಿವೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts