ಜಿಲ್ಲಾ ಸುದ್ದಿ

ಮಂಗಲಭೂಮಿಯಲ್ಲಿ ಗೋಲೋಕ ಸೃಷ್ಟಿ: ಮಹಾಮಂಗಲಕ್ಕೆ ವಿಧ್ಯುಕ್ತ ಚಾಲನೆ

ಹದಿಮೂರು ಸಾವಿರ ಕಿಲೋಮೀಟರ್ ಪರಿಕ್ರಮ ಕೈಗೊಂಡ ಮಂಗಲಗೋಯಾತ್ರೆ ಮಂಗಳೂರಿಗೆ ಆಗಮಿಸಿದೆ. ಪಡುವಣ ದಿಕ್ಕಿನಲ್ಲಿ ಸೂರ್ಯ ಕಡಲಿಗೆ ಮುತ್ತಿಕ್ಕುವ ಗೋಧೂಳಿ ಲಗ್ನದಲ್ಲಿ ಸಾಲಂಕೃತ ದಶರಥಗಳು, ಹಸಿರುಕಾಣಿಕೆ ಹೊತ್ತ ನೂರಾರು ವಾಹನಗಳು ಮತ್ತು ಸಹಸ್ರಾರು ಗೋಪ್ರೇಮಿಗಳು ಮಂಗಲಭೂಮಿ ಪ್ರವೇಶಿಸಿದರು.


ಮಹಿಳೆಯರು ಪೂರ್ಣಕುಂಭದೊಂದಿಗೆ ಗೋಮಾತೆಯ ಭವ್ಯ ರಥವನ್ನು ಬರಮಾಡಿಕೊಂಡರು. ವೈದಿಕರ ವೇದಘೋಷ, ಕೊಂಬು- ವಾದ್ಯಗಳ ನಿನಾದ, ಸಾಂಸ್ಕøತಿಕ ವೈಭವಗಳು ಕಣ್ಮನ ಸೂರೆಗೊಂಡವು. ನಾಡಿನ ಪರಮಪೂಜ್ಯ ಮಠಾಧೀಶರ ಸಮ್ಮುಖದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಜ್ಯೋತಿ ಪ್ರಜ್ವಲನ ನಡೆಸಿ, ಗೋದೀಪೋತ್ಸವ ನೆರವೇರಿಸಿದರು. ಈ ಅಪೂರ್ವ ಸಮಾರಂಭದೊಂದಿಗೆ ಮೂರು ದಿನಗಳ ಮಹಾಮಂಗಲ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ದೊರಕಿತು.

29ರ ಮಹಾತ್ರಿವೇಣಿಗೆ ಭವ್ಯ ವೇದಿಕೆ ಸಜ್ಜಾಗುತ್ತಿದ್ದು, ದೇಶದ ಮೂಲೆ ಮೂಲೆಗಳಿಂತ ಸಂತರಸಾಗರ ಮಂಗಲಭೂಮಿಯತ್ತ ಹರಿದಿದೆ. ಔರಂಗಾಬಾದ್‍ನಿಂದ ಆಗಮಿಸಿರುವ 100ಕ್ಕೂ ಹೆಚ್ಚು ಸಂತರು ಹಾಗೂ ತ್ರಯಂಬಕೇಶ್ವರದಿಂದ ಆಗಮಿಸಿರುವ 80ಕ್ಕೂ ಹೆಚ್ಚು ಸಂತರು ಹಂಪಿ ಹಾಗೂ ಕೊಲ್ಲಾಪುರದಲ್ಲಿ ತಂಗಿದ್ದು, ಶನಿವಾರ ಸಂಜೆ ಮಂಗಲಭೂಮಿಗೆ ಆಗಮಿಸುವರು.

ಮಹಾಮಂಗಲ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರದಿಂದೇ ಆರಂಭವಾಗಿದ್ದು, ಗೋಸೂಕ್ತ ಹವನ, ಕಾಮಧೇನು ಯಾಗ, ಕಲ್ಪೋಕ್ತ ಗೋಪಾಲಕೃಷ್ಣ ಪೂಜೆ, 1008 ಗೋಸೂಕ್ತ ಪಾರಾಯಣ, ಗೋ ತುಲಾಭಾರ ಸೇವೆಗಳು ಆರಂಭವಾಗಿವೆ.

ಶ್ರೀರಾಮಚಂದ್ರಾಪುರ ಮಠದ ಗೋಶಾಲೆಯಿಂದ 30 ಗೋತಳಿಗಳ ಹಸುಗಳು ಮಂಗಲಭೂಮಿಗೆ ಆಗಮಿಸಿವೆ. ಅಮೃತ್ ಮಹಲ್, ಮಲೆನಾಡು ಗಿಡ್ಡ, ಬರಗೂರು,, ಓಂಗೋಲ್, ಸಾಹಿವಾಲ್, ಥಾರ್‍ಪರ್‍ಕರ್, ಗೀರ್ ಮತ್ತಿತರ ಗೋತಳಿಗಳು ಗಮನ ಸೆಳೆಯುತ್ತಿವೆ. ಬಜಕೂಡ್ಲು, ವೇಣೂರು, ಕಿನ್ನಿಗೋಳಿ ಯಳತ್ತೂರಿನ ಶಕ್ತಿದರ್ಶನ ಯೋಗಾಶ್ರಮದಿಂದಲೂ ಗೋವುಗಳು ಆಗಮಿಸಿವೆ.

ಶನಿವಾರ ಮಹಾಮಂಗಲ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅಂತರರಾಷ್ಟ್ರೀಯ ಗೋ ವಿಚಾರ ಸಂಕಿರಣ, ಗೋ ವಿಶ್ವಕೋಶ ಪ್ರದರ್ಶಿನಿ ಉದ್ಘಾಟನೆ ನಡೆಯಲಿವೆ. ಮುಖ್ಯ ವೇದಿಕೆಗೆ ಪರ್ಯಾಯವಾಗಿ ಕಲಾರಾಮ ವೇದಿಕೆಯಲ್ಲಿ ದಿನವಿಡೀ ಗೋವಿಗೆ ಸಂಬಂಧಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಳಿಗ್ಗೆ 9ಕ್ಕೆ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ ಭಟ್ ಉದ್ಘಾಟಿಸುವರು. ಶ್ರೀ ರಾಘವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭಾರತೀಯ ಗೋತಳಿಗಳು, ಭಾರತೀಯ ಗೋತಳಿಗಳು ಗ್ರಾಮೀಣಾಭಿವೃದ್ಧಿಗೆ ಪೂರಕ, ಪಂಚಗವ್ಯ ಮತ್ತು ಪೇಟೆಂಟ್, ಗೋವು ಆಧಾರಿತ ಸಾವಯವ ಕೃಷಿ, ಅಧಿಕ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ಪಂಚಗವ್ಯದ ಪಾತ್ರ ವಿಷಯಗಳ ಬಗ್ಗೆ ಡಾ.ಕೆ.ಪಿರಮೇಶ್, ಸುನೀಲ್ ನಾನ್‍ಸಿಂಗ್, ಡಾ.ನಾರಾಯಣ ರೆಡ್ಡಿ, ಡಾ.ವವೇಲ್ ಅವರು ವಿಷಯ ಮಂಡಿಸುವರು.
ಮಧ್ಯಾಹ್ನ ಪ್ರಮುಖವಾಗಿ ಲಂಡನ್‍ನಿಂದ ಆಗಮಿಸುವ ಡಾ.ಅಲೆಕ್ಸ್ ಹಾಂಕಿ ಅವರು ಹಾಲು, ಮೊಸರು, ತುಪ್ಪದ ವೈಶಿಷ್ಠ್ಯಗಳ ಬಗ್ಗೆ ಮಾತನಾಡುವರು. ಎ2 ಹಾಲು ಹಾಗೂ ಭಾರತೀಯ ಗೋವುಗಳ ಹಾಲಿನ ಪೋಷಕಾಂಶಗಳು ವಿಷಯದ ಬಗ್ಗೆ ಡಾ.ಸದಾನ ಪಂಚಗವ್ಯ ಮತ್ತು ಆಯುರ್ವೇಧದ ಬಗ್ಗೆ ಹೈದ್ರಾಬಾದ್‍ನ ಡಾ.ಜಯಕೃಷ್ಣ ಮಾತನಾಡುವರು. ಬಳಿಕ ಸಂವಾದ, ಅನುಭವ ವಿನಿಮಯ ನಡೆಯಲಿದ್ದು, ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ರವಿಶಂಕರ ಪೆರುವಜೆ ವಿಷಯತಜ್ಞರಾಗಿರುತ್ತಾರೆ.

ಬೆಳಿಗ್ಗೆ 8ಕ್ಕೆ ಕಲಾರಾಮ ಸಾಂಸ್ಕøತಿಕ ವೇದಿಕೆಯನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಸಂಜೆ 6.30ರಿಂದ ಗೋಕಿಂಕರ ಕಲಾಸೇವೆ ನಡೆಯಲಿದ್ದು, ಭರತಾಂಜಲಿ ತಂಡದವರು ಪುಣ್ಯಕೋಟಿ ನೃತ್ಯರೂಪಕ ಪ್ರದರ್ಶಿಸುವರು. ಬಳಿಕ ಕೊರ್ಗಿ ಶ್ರೀ ಶಂಕರನಾರಾಯಣ ಉಪಾಧ್ಯ ತಂಡದಿಂದ ಮಹಾನ್ ಗೋಭಕ್ತ ಮಂಗಲಪಾಂಡೆ ನಾಟಕ ಪ್ರದರ್ಶನ, ಗುಜರಾತಿ ಸಮಾಜದಿಂದ ಗಾರ್ಭಾ ನೃತ್ಯ ಪ್ರದರ್ಶನ ನಡೆಯಲಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ