ಜಿಲ್ಲಾ ಸುದ್ದಿ

ಮಂಗಲ ಯಾತ್ರೆ ಮೂಲಕ ಗೋವನ್ನು ಕಾಪಾಡುವ ಸಂದೇಶ

ಏಳು ರಾಜ್ಯಗಳಲ್ಲಿ 82 ದಿನಗಳ ಕಾಲ ಸಂಚರಿಸಿದ ಮಂಗಲ ಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮ ಜ.27 ರಿಂದ 29ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ.

https://bantwalnews.com report

ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಮಂಗಳೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ದೇಶೀಯ ಗೋತಳಿಗಳ ಸಂರಕ್ಷಣೆಯ ದಿಶೆಯಲ್ಲಿ ಕೈಗೊಂಡ ಗೋ ಯಾತ್ರೆ 11 ಸಾವಿರ ಕಿ.ಮೀ. ಕ್ರಮಿಸಿದೆ. ಈ ಯಾತ್ರೆಯುದ್ಧಕ್ಕೂ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ರಾಜಕೀಯವಾಗಿ ಪಕ್ಷಭೇದ ಮರೆತು ಬೆಂಬಲ ವ್ಯಕ್ತವಾಗಿದೆ. ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕು. ಗೋವಂಶವನ್ನು ಉಳಿಸಬೇಕು. ಈ ಮಂಗಲ ಯಾತ್ರೆಯ ಮೂಲಕ ಸರ್ಕಾರಕ್ಕೆ, ಸಮಾಜಕ್ಕೆ ಗೋವನ್ನು ಕಾಪಾಡುವ ಸಂದೇಶ ಹೋಗಬೇಕು. ಗೋಮಾಂಸ ರಫ್ತು ನಿಷೇಧಿಸಬೇಕು. ಗೋವು ಕಟುಕರ ವಶವಾಗದೆ ರೈತರ ಬಳಿ ಇರಬೇಕು. ಗೋವನ್ನು ಮಾರಾಟ ಮಾಡಿದರೆ ಲಾಭ ಎಂದಾಗದೆ, ಗೋವನ್ನು ಸಾಕುವುದೇ ಲಾಭ ಎಂಬ ಭಾವನೆ ಜನತೆಯಲ್ಲಿ ಮೂಡಬೇಕು. ಎಲ್ಲ ರೋಗಗಳಿಗೆ ಗೋವಿನಲ್ಲಿ ಚಿಕಿತ್ಸೆ ಇದೆ ಎಂಬುದನ್ನು ಎಲ್ಲರೂ ತಿಳಿಯಬೇಕು. ಗೋ ಆರ್ಥಿಕತೆ ಲಾಭದಾಯಕ ಎಂಬುದರ ಅರಿವು ಮೂಡಿಸುವುದು ಈ ಯಾತ್ರೆಯ ಉದ್ದೇಶ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

27ರಂದು ಬೆಳಗ್ಗೆ 7.30 ಕ್ಕೆ ಕೂಳೂರಿನ ಮಂಗಲ ಭೂಮಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 4ಕ್ಕೆ ನಗರದ ಪಡೀಲಿನಿಂದ ಹಸಿರುಹೊರೆ ಕಾಣಿಕೆಯ ಶೋಭಾಯಾತ್ರೆ ನಡೆಯಲಿದೆ6.30 ಕ್ಕೆ ಮಂಗಲ ಗೋಯಾತ್ರೆಯ ಶೋಭಾಯಾತ್ರೆ ಕೂಳೂರು ಪ್ರವೇಶಿಸಲಿದೆ. ಬಳಿಕ ಗೋಯಾತ್ರಾ ಮಹಾಮಂಗಲದ ಉದ್ಘಾಟನೆ, ಗೋ ಜ್ಯೋತಿ ಪ್ರಜ್ವಲನ, ಗೋದೀಪೋತ್ಸವ ನಡೆಯಲಿದೆ .28 ರಂದು ಬೆಳಗ್ಗೆ 6.30 ಕ್ಕೆ ಗೋಸಂಕೀರ್ತನೆ ಸಹಿತ ಮಂಗಲ ಭೂಮಿ ಪ್ರದಕ್ಷಿಣೆ, 7.30 ರಿಂದ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮ, 8 ಗಂಟೆಗೆ ಕಲಾರಾಮ ಉದ್ಘಾಟನೆ, 8.15ಕ್ಕೆ ಗೋ ವಿಶ್ವಕೋಶ ಪ್ರದರ್ಶಿನಿ ಉದ್ಘಾಟನೆ ನಡೆಯುವುದು. 9ರಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು,ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಉದ್ಘಾಟಿಸುವರು. ಬಳಿಕ ಭಾರತೀಯ ಗೋತಳಿಗಳು, ಭಾರತೀಯ ಗೋತಳಿಗಳು ಗ್ರಾಮೀಣಾಭಿವೃದ್ಧಿಗೆ ಪೂರಕ, ಪಂಚಗವ್ಯ ಮತ್ತು ಪೇಟೆಂಟ್, ಗೋವು ಆಧಾರಿತ ಸಾವಯವ ಕೃಷಿ, ದೇಸೀ ಗೋವು ಆಧಾರಿತ ಕೃಷಿ, ಸಾವಯವ ಕೃಷಿ, ಅಧಿಕ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವಿಕೆಯಲ್ಲಿ ಪಂಚಗವ್ಯದ ಪಾತ್ರದ  ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆಯಾಗಲಿದೆ. ಬಳಿಕ ಗೋವು ಆಧಾರಿತ ಕೃಷಿಯ ಬಗ್ಗೆ ಅನುಭವ ವಿನಿಮಯ ನಡೆಯಲಿದೆ. ಮಧ್ಯಾಹ್ನ2.15 ರಿಂದ ಹಾಲು, ಮೊಸರು, ತುಪ್ಪದ ವೈಶಿಷ್ಟ್ಯಗಳ ಬಗ್ಗೆ ಲಂಡನ್‌ನ ಪ್ರೊ.ಅಲೆಕ್ಸ್ ಹಾಂಕಿ ಮಾತನಾಡುವರು. ಎ2 ಹಾಲು ಮತ್ತು ಭಾರತೀಯ ಗೋವುಗಳ ಹಾಲಿನ ಪೋಷಕಾಂಶಗಳು, ಪಂಚಗವ್ಯ ಮತ್ತು ಆಯುರ್ವೇದ, ಪಂಚಗವ್ಯ ಚಿಕಿತ್ಸೆ, ಪಂಚಗವ್ಯದಿಂದ ಆರೋಗ್ಯ ಮತ್ತು ಪೋಷಕಾಂಶದ ಬಗ್ಗೆ ಚರ್ಚೆ ನಡೆಯಲಿದೆ.

29ರಂದು ಬೆಳಗ್ಗೆ 10 ಗಂಟೆಗೆ 1500 ಕ್ಕೂ ಅಧಿಕ ಸಂತರ ಮಹಾ ತ್ರಿವೇಣಿ

ಸಂಗಮ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಉಪಸ್ಥಿತಿಯಲ್ಲಿ ನಡೆಯಲಿದೆ ಮೂರು ದಿನಗಳ ಕಾಲ ಅಪರೂಪದ 30 ಕ್ಕೂ ಅಧಿಕ ದೇಶೀಯ ಗೋತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಮಾರಾಟ, ಗೋವಿನ ಬಗ್ಗೆ ಸಮಗ್ರ ಮಾಹಿತಿ ನೀಡುವ ಗೋ ವಿಶ್ವಕೋಶ ದರ್ಶನ, ಗವ್ಯ ಪಾಕೋತ್ಸವ, ಗೋ ತುಲಾಭಾರ, ಗೋ ಸಂಬಂಧಿತ ವಿವಿಧ ಧಾರ್ಮಿಕ ಸೇವೆಗಳಿಗೆ ಅವಕಾಶ ಇದೆ ಎಂದು ಅವರು ಹೇಳಿದರು.

ಫೆಬ್ರವರಿಯಲ್ಲಿ ಬರಗೂರು ತಳಿಗಾಗಿ ಹೋರಾಟ

ಮಲೆಮಹದೇಶ್ವರ ಬೆಟ್ಟದಲ್ಲಿರುವ ಸುಮಾರು 1 ಲಕ್ಷದಷ್ಟು ಬರಗೂರು  ಗೋತಳಿಗಳಿಗೆ ಸಂಕಷ್ಟ ಎದುರಾಗಿದೆ. ಅಲ್ಲಿನ ಬೆಟ್ಟದ ಸುತ್ತ ಸರ್ಕಾರಬೇಲಿಯನ್ನು ಹಾಕಿರುವುದರಿಂದ ಬರಗೂರು ತಳಿಗಳು ಮೇವಿಗಾಗಿ ಪರದಾಡುವಂತಾಗಿದೆ. ಅಲ್ಲದೆ ಅಲ್ಲಿನ ಮೂಲನಿವಾಸಿಗಳಾದ 100 ಸೋಲಿಗರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ರಾಘವೇಶ್ವರ ಶ್ರೀ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೋಯಾತ್ರೆ ಮಹಾಮಂಗಲ ಸಮಿತಿ ಅಧ್ಯಕ್ಷ ವಿನಯ್ ಹೆಗ್ಡೆ, ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ