ಪಾಕಶಾಲೆಯೇ ವೈದ್ಯಶಾಲೆ

ಬಾಯಿರುಚಿಗಷ್ಟೇ ಅಲ್ಲ, ಹುಣಸೇಹಣ್ಣಿನ ಸ್ಥಾನ

ಹುಣಸೆ ಹಣ್ಣನ್ನು ನೆನೆದರೇ ಬಾಯಲ್ಲಿ ನೀರೂರುತ್ತದೆ. ಇದು ಬಹಳಷ್ಟು ಮಂದಿಗೆ ಪ್ರಿಯವಾದುದು ಹಾಗು ಅಡುಗೆಯಲ್ಲಿ ಉಪ್ಪಿನಷ್ಟೇ ಪ್ರಾಮುಖ್ಯವಾದುದು.ಹಾಗೆಯೇ ತನ್ನ ಔಷಧೀಯ ಗುಣಗಳಿಂದ ಹುಣಸೆಹಣ್ಣು ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಬಹಳಷ್ಟು ವ್ಯಾಧಿಗಳನ್ನು ಶಮನಗೊಳಿಸುವುದರ  ಮೂಲಕ ಮಹತ್ತರ ಸ್ಥಾನವನ್ನು ಪಡೆದಿದೆ.

  • ಡಾ. ಎ.ಜಿ.ರವಿಶಂಕರ್
  • bantwalnews.com ಅಂಕಣ – ಪಾಕಶಾಲೆ ವೈದ್ಯಶಾಲೆ

ಹುಣಸೆ ಹಣ್ಣು ಬಾಯಿಗೆ ರುಚಿಕಾರಕವು ಮತ್ತು ಜೀರ್ಣ ಶಕ್ತಿ ವರ್ಧಕವು ಆಗಿದೆ. ಅರುಚಿ ಹಾಗು ಅಜೀರ್ಣವಿದ್ದಾಗ ಒಂದು ಚಮಚದಷ್ಟು ಹುಣಸೆ ಹಣ್ಣನ್ನು ಹಾಗೆಯೇ ಅಥವಾ 30 ಮಿ.ಲೀ ನಷ್ಟು ರಸವನ್ನು  ದಿನಕ್ಕೆರಡು ಬಾರಿ ಸೇವಿಸಬೇಕು.

ಗರ್ಭಿಣಿಯರಲ್ಲಿ ಹಾಗು ಇತರರಲ್ಲಿ ವಾಕರಿಕೆ ಅಥವಾ ವಾಂತಿಯ ಲಕ್ಷಣವಿದ್ದಾಗ ಸ್ವಲ್ಪ ಹುಣಸೆ ಹಣ್ಣನ್ನು ಹಾಗೆಯೇ ಬಾಯಿಗೆ ಹಾಕಬಹುದು ಅಥವಾ ರಸತೆಗೆದು ಸಕ್ಕರೆಯೊಂದಿಗೆ ಕುಡಿದರೆ ವಾಂತಿ ಮತ್ತು ವಾಕರಿಕೆಯು  ನಿವಾರಣೆಯಾಗುತ್ತದೆ.

3 ರಿಂದ 5 ಗ್ರಾಂ ನಷ್ಟು ಹುಣಸೆ ಹಣ್ಣನ್ನು ಸ್ವಲ್ಪ  ಬೆಲ್ಲದೊಂದಿಗೆ ಸೇವಿಸಿದರೆ ಮಲ ಬದ್ಧತೆ ನಿವಾರಣೆಯಾಗಿ ಸರಿಯಾಗಿ ಮಲಶೋಧನೆಯಾಗುತ್ತದೆ.

ಹುಣಸೆ ಹಣ್ಣನ್ನು ನೀರಿನಲ್ಲಿ ಹಿಚುಕಿ ಸ್ವಲ್ಪ ಸಮಯದ ನಂತರ ಆ ನೀರನ್ನು ಸ್ವಲ್ಪ ಬಿಸಿ ಮಾಡಿ  ಗಂಟಲು ಮುಕ್ಕಳಿಸಿದರೆ ಕಂಠ ಶುದ್ಧಿಯಾಗಿ ಗಂಟಲಿನ ಕಿರಿ ಕಿರಿ ಕಡಿಮೆಯಾಗಿ ಉತ್ತಮ ಸ್ವರ ಹೊರಡಲು ಸಹಕಾರಿಯಾಗುತ್ತದೆ.

ಹುಣಸೆ ಹಣ್ಣು ಹಿಚುಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿ ಹಾಗು ನಾಲಿಗೆಯಲ್ಲಿನ ಹುಣ್ಣುಗಳು ವಾಸಿಯಾಗುತ್ತವೆ.

ಹುಣಸೆ ಹಣ್ಣಿನ ನೀರನ್ನು ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ಸ್ನಾನ ಮಾಡಿದರೆ ತಲೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ ಮತ್ತು ಕೂದಲು ನೀಳವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಪಿತ್ತ ಅಥವಾ ದೇಹದ ಉಷ್ಣತೆಯಿಂದಾಗಿ ತಲೆಸುತ್ತುವಿಕೆ ಹಾಗು ಆಯಾಸವಿದ್ದಲ್ಲಿ ಹುಣಸೆ ಹಣ್ಣಿನ ರಸವನ್ನು ಬೆಲ್ಲ ಅಥವಾ ಸಕ್ಕರೆ ಸೇರಿಸಿ ಪಾನಕ ಮಾಡಿ ಕುಡಿಯಬೇಕು

ಮಧ್ಯ ಪಾನಿಗಳಲ್ಲಿ ಅಮಲು ಹೆಚ್ಚಾಗಿ ವಾಂತಿ ಹಾಗು ತಲೆ ಸುತ್ತುವಿಕೆ ಇದ್ದಲ್ಲಿ 50 ಮಿ.ಲೀ ನಷ್ಟು ಹುಣಸೆ ಹಣ್ಣಿನ ರಸವನ್ನು ಕುಡಿಸಬೇಕು.

ಹುಣಸೆ ಹಣ್ಣಿಗೆ ½ ಚಮಚದಷ್ಟು ಅರಸಿನ ಪುಡಿ ಸೇರಿಸಿ, ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖವು ಸ್ವಚ್ಚವಾಗಿ ಕಾಂತಿಯನ್ನು ಹೆಚ್ಚಿಸುತ್ತದೆ.

ಶರೀರೆದಲ್ಲಿ ಅಧಿಕ  ಕೊಬ್ಬಿನ  (cholesterol ) ಅಂಶ ಇದ್ದಲ್ಲಿ ಪ್ರತಿನಿತ್ಯ 40 ಮಿಲಿ ಯಷ್ಟು ಹುಣಸೆ ಹಣ್ಣಿನ ರಸವನ್ನು ಬೆಳಗ್ಗೆ ಆಹಾರದ ಮೊದಲು ಸೇವಿಸಬೇಕು. ಇದರಿಂದ ಶರೀರದ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಸುಟ್ಟ ಗಾಯದ ಮೇಲೆ ತಕ್ಷಣ ಹುಣಸೆ ಹಣ್ಣನ್ನು ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ ಮತ್ತು ಗಾಯವು ಬೇಗನೆ ವಾಸಿಯಾಗುತ್ತದೆ.

ಪ್ರತಿನಿತ್ಯ ಹುಣಸೆ ಹಣ್ಣಿನ ರಸದ ಸೇವನೆಯು ಮೂಲವ್ಯಾಧಿಯನ್ನು ಗುಣಪಡಿಸುತ್ತದೆ.

ಹುಣಸೆ ಹಣ್ಣಿನ ರಸವು ಕಾಮಾಲೆ ರೋಗದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.

ಕೀಟ ಅಥವಾ ಹುಳಗಳು ಕಚ್ಚಿದರೆ ಹುಣಸೆ ಹಣ್ಣನ್ನು ಗಾಯದ  ಮೇಲೆ ಲೇಪಿಸಿದರೆ ಉರಿ, ನೋವು ಹಾಗು ಊತ ಕಡಿಮೆಯಾಗುತ್ತದೆ.

ಹುಣಸೆ ಹಣ್ಣು ಮಧುಮೇಹದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಾಧಾರಣವಾಗಿ ಇದನ್ನು ನೇರಳೆ ಬೀಜದ ಜೊತೆ ಉಪಯೋಗಿಸುತ್ತಾರೆ.

ಹೊಟ್ಟೆಯ ಕ್ರಿಮಿ ಬಾಧೆಯಲ್ಲಿ ಕೂಡ ಹುಣಸೆ ಹಣ್ಣಿನ ರಸವನ್ನು ಸ್ವಲ್ಪ ಹಿಂಗು ಮತ್ತು ಉಪ್ಪು ಸೇರಿಸಿ ಕುಡಿಯಬೇಕು.

ಕಾಲು ಉಳುಕಿ ನೋವು ಹಾಗು ಊತ ಇದ್ದರೆ ಹುಣಸೆ ಬೀಜವನ್ನು ಜಜ್ಜಿ ಲೇಪಿಸಬೇಕು ಅಥವಾ ಬಿಸಿ ಮಾಡಿ ಶೇಕ ಕೊಡಬೇಕು.

ಹುಣಸೆ ಹಣ್ಣಿನಲ್ಲಿ ಖನಿಜಾಂಶಗಳು,ಕ್ಯಾಲ್ಸಿಯಂ,ವಿಟಮಿನ್ ಎ,ಸಿ, ಕೆ.ಇ ಇತ್ಯಾದಿಗಳು ಯಥೇಷ್ಟವಾಗಿ ಇರುವುದರಿಂದ ಶರೀರದ ಮೂಳೆಯ ದೃಢತೆಗೆ, ಜೀರ್ಣಕ್ರಿಯೆಗೆ ಹಾಗು ದೇಹದ ಧಾತು ಪೋಷಣೆಗೆ ಅತ್ಯಂತ ಉಪಯುಕ್ತವಾಗಿದೆ.

(ವೈದ್ಯರ ನಂಬ್ರ : 9448260242)

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.