ಕಂಬಳ ಉಳಿಸಲು ಪಕ್ಷಬೇಧ ಮರೆತು ಹೋರಾಡುವ ಕಾಲ ಬಂದಿದೆ. 28ರಂದು ಮೂಡುಬಿದಿರೆಯಲ್ಲಿ ನಡೆಯುವ ಪ್ರತಿಭಟನೆಗೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ಸಂತರು, ಚಿತ್ರನಟರು, ರಾಜಕಾರಣಿಗಳು ಹಾಗೂ ವಿವಿಧ ಸಾಮಾಜಿಕ ನೇತಾರರನ್ನು ಒಗ್ಗೂಡಿಸಿ ಕಂಬಳ ಉಳಿಸುವ ವಿಚಾರದಲ್ಲಿ ಕೇಂದ್ರ ರಾಜ್ಯದ ಗಮನ ಸೆಳೆಯಲಾಗುವುದು.
ಇದು ಮಂಗಳೂರಿನ ಬಿಎಂಎಸ್ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ನಡೆದ ಕಂಬಳ ಉಳಿಸುವ ಕುರಿತು ನಡೆದ ಸಮಾಲೋಚನಾ ಸಭೆಯ ಸಾರಾಂಶ.
ಪಿಲಿಕುಳ ಹಾಗೂ ಮೂಡುಬಿದಿರೆ ಕಂಬಳಕ್ಕೆ ಸರ್ಕಾರವೇ ಅನುದಾನವನ್ನು ಬಿಡುಗಡೆ ಮಾಡಿತ್ತು. ಜ.೩೦ರಂದು ಕಂಬಳದ ಕುರಿತು ತೀರ್ಪು ಹೊರಬೀಳುವ ನಿರೀಕ್ಷೆ ಇದೆ. ಆ ಬಳಿಕ ಮುಂದಿನ ಹಂತದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ಚಲನಚಿತ್ರ ನಟರು ಹಾಗೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಕಂಬಳ ಸಮಿತಿಯಿಂದಲೇ ಮಂಗಳೂರಿನಲ್ಲಿ ಬೃಹತ್ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ನಳಿನ್ ಹೇಳಿದರು.
ಮುಂಬಯಿ ಹಾಗೂ ಬೆಂಗಳೂರಿನಲ್ಲಿ ಕಂಬಳ ಅಭಿಮಾನಿಗಳಿದ್ದಾರೆ. ಅಲ್ಲಿಯೂ ಮಾಜಿ ಸಚಿವ ನಾಗರಾಜ ಶೆಟ್ಟಿ ಅವರ ನೇತೃತ್ವದಲ್ಲಿ ಸಮಾವೇಶಗಳನ್ನು ನಡೆಸಲಾಗುವುದು ಎಂದರು. ಕೇಂದ್ರದ ಪ್ರಾಣಿ ಹಿಂಸೆ ತಡೆ ಕಾಯಿದೆ ಪಟ್ಟಿಯಿಂದ ಕಂಬಳದ ಕೋಣವನ್ನು ಹೊರಗಿಡಲಾಗಿದೆ. ಅದರ ವಿರುದ್ಧವೇ ಪೇಟಾ ಸಂಘಟನೆ ಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡಿ ಕಂಬಳಕ್ಕೆ ಅವಕಾಶ ಮಾಡಿಕೊಡುವಂತೆ ಸಚಿವರನ್ನು ಕೋರಲಾಗುವುದು ಎಂದರು.
ಹೈಕೋರ್ಟ್ ವಕೀಲ ಪವನ್ ಕುಮಾರ್ ಶೆಟ್ಟಿ ಮಾತನಾಡಿ, ಕಂಬಳವನ್ನು ನಿಷೇಧಿಸಲು ಜಲ್ಲಿಕಟ್ಟು ಕಾರಣ. ಜಲ್ಲಿಕಟ್ಟುವಿನ ಹಾನಿ ಕಂಬಳಕ್ಕೆ ತಟ್ಟಿದೆ. 2015 ರಲ್ಲಿ ಹೈಕೋರ್ಟ್ ಸೂಚನೆಯ ಮೇರೆಗೆ ಉಸ್ತುವಾರಿ ಸಮಿತಿಯ ಸುಪರ್ದಿಯಲ್ಲಿ ಕಂಬಳವನ್ನು
ನಡೆಸಲಾಗಿದೆ ಎಂದರು.
ಕನ್ಯಾನ ಬಾಳೆಕೋಡಿ ಆಶ್ರಮದ ಶ್ರೀಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ, ಕಂಬಳದಲ್ಲಿ ಕೋಣಕ್ಕೆ ಗೌರವ ನೀಡಲಾಗುತ್ತದೆ. ಹಾಗಾಗಿ ಕಂಬಳಕ್ಕೆ ಆಧಾತ್ಮಿಕದ ಸ್ಪರ್ಶ ಇದೆ. ಕಂಬಳ ಗದ್ದೆಗೆ ಪೂಜೆ ಮಾಡುತ್ತಾರೆ. ಕಂಬಳದ ಕೋಣಗಳಿಗೆ ಮಾಲೀಶ್ ಮಾಡುತ್ತಾರೆ. ನೀಡುವ ಏಟು ಅದು ಪ್ರೀತಿಯಿಂದ ಹೊರತು ಹಿಂಸೆ ಅಲ್ಲ ಎಂದರು.ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಮಾತನಾಡಿ, ಪೇಟಾ ಸಂಘಟನೆ
ಹಾಗೂ ಕಂಬಳ ನಿಷೇಧ ವಿರುದ್ಧ ಹೋರಾಟ ನಡೆಸಲು ವಿಹಿಂಪ ಮತ್ತು ಬಜರಂಗದಳ ಸಿದ್ಧವಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಮಾತನಾಡಿ, ಪೇಟಾ ಸಂಘಟನೆ ಪ್ರಾಣಿ ರಕ್ಷಣೆಗೆ ಹುಟ್ಟಿದ್ದಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಭೂತಾರಾಧನೆಗೂ ಹೊಡೆತ ಸಿಗಬಹುದು ಎಂದರು.ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅಭಿಪ್ರಾಯ ವ್ಯಕ್ತಪಡಿಸಿದರು.ಕಂಬಳ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ಜೀವಂಧರ ಬಲ್ಲಾಳ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಅಶೋಕ್ ಕುಮಾರ್ ರೈ, ತುಳು ಚಿತ್ರ ನಟರಾದ ವಿಜಯ ಕುಮಾರ್ ಕೊಡಿಯಾಲಬೈಲ್, ನವೀನ್ ಡಿ ಪಡೀಲ್, ಸುಂದರ ರೈ ಮಂದಾರ ಇದ್ದರು.