ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಸೋಮವಾರ ಬೆಳಿಗ್ಗೆ ಕಾರನ್ನು ಅಡ್ಡಗಟ್ಟಿ ಪಿಸ್ತೂಲು, ತಲವಾರು ತೋರಿಸಿ ಬೆದರಿಸಿ ಐದು ಲಕ್ಷ ರೂ ಹಾಡ ಹಗಲೇ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿ ಎರಡು ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.
www.bantwalnews.com report
ಸುಳ್ಯ ಮತ್ತು ಬೆಳ್ಳಾರೆ ಎಸ್‌ಐ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿದೆ. ಜಿಲ್ಲಾ ಅಪರಾಧ ಪತ್ತೆ ದಳವೂ ತನಿಖೆ ನಡೆಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಾಡಹಗಲೇ ನಡೆದ ಈ ಕೃತ್ಯವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಅವರು ಹೇಳಿದರು.
ಗುತ್ತಿಗಾರಿನಲ್ಲಿ ಅಡಕೆ ವ್ಯಾಪಾರ ನಡೆಸುತ್ತಿರುವ ಬೆಳ್ಳಾರೆ ಉಮಿಕ್ಕಳದ ಅಬ್ದುಲ್ ಖಾದರ್ ಅವರ ಕಾರನ್ನು ತಡೆದು ಅಪರಿಚಿತರ ತಂಡ ದರೋಡೆ ಮಾಡಿತ್ತು. ಅವರು ತಮ್ಮ ಕೆಲಸದವರಾದ ಶಫೀಕ್, ಯಾಸಿರ್ ಮತ್ತು ಬಸವರಾಜ್ ಅವರನ್ನು ಕರೆದುಕೊಂಡು ತಮ್ಮ ಕಾರಿನಲ್ಲಿ ಬೆಳಿಗ್ಗೆ ಬೆಳ್ಳಾರೆಯಿಂದ ಹೊರಟು ಐವರ್ನಾಡು ಕೆಳಗಿನ ಪೇಟೆಯ ಬಳಿ ತಲುಪಿದಾಗ ಇವರ ಕಾರಿನ ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರು ಓವರ್‌ಟೇಕ್ ಮಾಡಿ ಅಡ್ಡಲಾಗಿ ನಿಲ್ಲಿಸಿ ಕಾರಿನಿಂದ ನಾಲ್ಕು ಮಂದಿ ಇಳಿದು ಕಾರನ್ನು ಸುತ್ತುವರಿದರು. ಮೂರು ಮಂದಿ ಪಿಸ್ತೂಲ್ ಮತ್ತು ಓರ್ವ ಚೂರಿಯನ್ನು ಹಿಡಿದು ಬೆದರಿಸಿ ಓರ್ವ ಬಲಾತ್ಕಾರದಿಂದ ಕಾರಿನ ಕೀಯನ್ನು ಕಿತ್ತುಕೊಂಡು ಕಾರನ್ನು ಲಾಕ್ ಮಾಡಿದ್ದು, ಮತ್ತೋರ್ವ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶಫೀಕ್‌ನ ಕೈಯಿಂದ ಹಣವಿದ್ದ ಬ್ಯಾಗನ್ನು ಬಲಾತ್ಕಾರವಾಗಿ ಕಸಿದುಕೊಂಡಿದ್ದಾನೆ. ಐದು ಲಕ್ಷ ರೂ ನಗದು, ಬ್ಯಾಂಕ್ ಚೆಕ್ ಪುಸ್ತಕಗಳು, ಅಂಗಡಿಯ ಕೀ, ಸೇಲ್ ಪುಸ್ತಕ, ಸ್ಟಾಕ್ ಪುಸ್ತಕ ಹಾಗು ಇತರ ದಾಖಲಾತಿಗಳು ಹಾಗು ಮೂರು ಮೊಬೈಲ್ ಪೋನ್‌ಗಳನ್ನು ಕಸಿದುಕೊಳ್ಳಲಾಗಿದೆ ಎಂದು ಅಬ್ದುಲ್ ಖಾದರ್ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ. ದರೋಡೆಕೋರರ ತಂಡದಲ್ಲಿ ಕಾರಿನ ಚಾಲಕ ಸಹತ ಐದು ಮಂದಿ ಇದ್ದರು. ಇವರಲ್ಲಿ ನಾಲ್ಕು ಮಂದಿ ಮಾತ್ರ ಕಾರಿನಿಂದ ಇಳಿದಿದ್ದರು. ಮೂವರು ಪಿಸ್ತೂಲ್ ಮತ್ತು ಓರ್ವ ಚೂರಿ ಹಿಡಿದು ಕಾರಿನ ನಾಲ್ಕು ಬಾಗಿಲನ್ನು ಸುತ್ತುವರಿದು ಬೆದರಿಸಿ ದರೋಡೆ ಮಾಡಿದ್ದಾರೆ. ಎಲ್ಲರೂ ಮೂವತ್ತರ ಕೆಳಗಿನ ಪ್ರಾಯದವರಾಗಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಟೀ ಶರ್ಟ್ ಧರಿಸಿದ್ದು, ವೇಗವಾಗಿ ಬಂದು ಓವರ್‌ಟೇಕ್ ಮಾಡಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ದರೋಡೆ ನಡೆಸಿ ಪರಾರಿಯಾದರು. ಇದೊಂದು ಪೂರ್ವಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದು, ಖಾದರ್ ಚಲನವಲನ ಗೊತ್ತಿದ್ದವರು ಕೃತ್ಯ ನಡೆಸಿರಬೇಕು ಎಂದು ಹೇಳಿದ್ದಾರೆ.