ಮಕ್ಕಳ ಮಾತು

ಊಟದ ವಿಚಾರದಲ್ಲಿ ಅಪ್ಪ-ಅಮ್ಮನ ಭಾರೀ ಜಗಳ..!

ನಾವು ನಮ್ಮ ಮಕ್ಕಳ ಬಗ್ಗೆ ಯೋಚಿಸಿದ್ದೇವಾ..? ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿದ್ದೇವಾ? ಮನೆಯೊಳಗೆ ದೊಡ್ಡವರು ಅವರಷ್ಟಕ್ಕೇ ತೆಗೆದುಕೊಳ್ಳುವ ನಿರ್ಧಾರಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಆತ್ಮಹತ್ಯೆಯವರೆಗೂ ಇದು ಮುಂದುವರಿಯುವ ಅಪಾಯವೂ ಇದೆ.. ದಯವಿಟ್ಟು ಹಾಗಾಗದಿರಲಿ. ಮಕ್ಕಳನ್ನು ಶಾಲೆಗೆ ಕಳುಹಿಸಿ-ಅವರ ಹೊಟ್ಟೆಬಟ್ಟೆಗೆ ಕಡಿಮೆಯಾಗದಂತೆ ನೋಡಿಕೊಂಡ ಮಾತ್ರಕ್ಕೆ ‘ದೊಡ್ಡವರ’ ಜವಬ್ದಾರಿ ಮುಗಿಯುವುದಿಲ್ಲ.

 

ಜಾಹೀರಾತು
  • ಮೌನೇಶ ವಿಶ್ವಕರ್ಮ

www.bantwalnews.com ಅಂಕಣ ಮಕ್ಕಳ ಮಾತು

ಹೌದು ಮಕ್ಕಳೆಂದರೆ ಹಾಗೆಯೇ ಇರುತ್ತಾರೆ,  ಅವರು ಬೆಳೆದ ವಾತಾವರಣಗಳು ಅವರ ಮನಸ್ಥಿತಿಯನ್ನು ಕಟ್ಟಿಕೊಡುತ್ತಲೇ ಅವರ ಭವಿಷ್ಯವನ್ನು ರೂಪುಗೊಳಿಸುತ್ತದೆ, ಹಾಗಾಗಿಯೇ ನಾವು ಮಕ್ಕಳ ಬಗ್ಗೆ ನಮ್ಮ ‘ದೊಡ್ಡತನ-ಸಣ್ಣತನ’ಗಳನ್ನು ಮೀರಿ ಆಲೋಚಿಸಬೇಕಾಗುತ್ತದೆ. ಅವರ ಆಶಯಗಳನ್ನು ಅರ್ಥಮಾಡಿಕೊಳ್ಳುವ ಜೊತೆಯಲ್ಲಿ ಮಕ್ಕಳ ಬದುಕು ಹಸನಾಗುವಿಕೆಗೆ  ನಮ್ಮೆಲ್ಲಾ ಸ್ವಾರ್ಥಗಳನ್ನು ಮರೆಯಬೇಕಾಗಿದೆ.

ಅದು  ಪ್ರತಿಷ್ಠಿತ ಶಾಲೆಗಳಲ್ಲೊಂದು, ಅಲ್ಲಿನ 8 ನೇ ತರಗತಿ ವಿದ್ಯಾರ್ಥಿ ಅರುಣ್ (ಹೆಸರು ಬದಲಾಯಿಸಲಾಗಿದೆ) ಕಲಿಕೆಯಲ್ಲಿ ಮುಂದಿದ್ದ.  ಜುಲೈ ತಿಂಗಳ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯ ಅಂಕಗಳನ್ನು ಪಡೆದಿದ್ದ ಅರುಣ್,  ಆ ಬಳಿಕದ ಕೆಲ ದಿನಗಳಲ್ಲಿ ತರಗತಿಯಲ್ಲಿ ಡಲ್ ಆಗಿಯೇ ಇರುತ್ತಿದ್ದ, ಆಗಸ್ಟ್ ತಿಂಗಳ ಪರೀಕ್ಷೆಯಲ್ಲಿ ತೀರಾ ಕಡಿಮೆ ಅಂಕ ಗಳಿಸಿದ್ದ. ಓರ್ವ ಪ್ರತಿಭಾವಂತ ವಿದ್ಯಾರ್ಥಿಯ ಅಂಕದಲ್ಲಿನ ಈ ವ್ಯತ್ಯಾಸ ತರಗತಿ ಶಿಕ್ಷಕಿಯನ್ನು  ಸಹಿತ ಸಹಪಾಠಿಗಳ ಅಚ್ಚರಿಗೆ ಕಾರಣವಾಗಿತ್ತು. ದಿನಗಳೆದಂತೆ ಅರುಣ್ ಸ್ವಭಾವದಲ್ಲೂ ಬದಲಾವಣೆ ಕಾಣುತ್ತಿತ್ತು. ತಡವಾಗಿ ಶಾಲೆಗೆ ಬರುವುದು, ತರಗತಿ ಅವಧಿಯಲ್ಲಿ ಚಿಂತಾಕ್ರಾಂತನಾಗಿ ಕುಳಿತುಕೊಳ್ಳುವುದು, ಆಟ-ಪಾಠದಲ್ಲಿ ತೊಡಗಿಸಿಕೊಳ್ಳದೇ ಇರುವುದು ಇತ್ಯಾದಿ.

ಜಾಹೀರಾತು

ಅದೊಂದು ದಿನ ಸೋಮವಾರ. ಬೆಳಗ್ಗೆ 9.15 ಕ್ಕೆ ತರಗತಿಗೆ ಬಂದಿದ್ದ ಅರುಣ್  ಆ ದಿನದ ಮೊದಲ  ಅವಧಿಗೆ ಹಾಜರಾಗಿದ್ದ, ಆದರೆ ಎರಡನೆಯ ಆಟದ ಅವಧಿಯ ಬಳಿಕ ದಿಡೀರ್ ನಾಪತ್ತೆಯಾಗಿದ್ದ, ಇದು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹಪಾಠಿಗಳ ಗಮನಕ್ಕೆ ಬರುವಾಗ  ಅಪರಾಹ್ನ 12.25 ಕಳೆದಿತ್ತು.  ಶಾಲಾ ಪರಿಸರದಲ್ಲಿ ಆತನಿಗಾಗಿ ಹುಡುಕಾಟ ನಡೆಸಲಾಯಿತು. ಕೊನೆಗೆ ಆತನ ಮನೆಗೆ ಫೋನಾಯಿಸಿ ಕೇಳಿದಾಗ ‘ಹೌದು ನನ್ನ ಮಗ ಮನೆಗೆ ಬಂದಿದ್ದಾನೆ’ ಅಂತ ಅವನ ತಾಯಿಯ ಉತ್ತರ ಸಿಕ್ಕಿತ್ತು. ಆ ಬಳಿಕ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿತ್ತು. ಇದರಿಂದ ಬೇಸತ್ತ ಶಾಲಾ ಮುಖ್ಯೋಪಾಧ್ಯಾಯರು ಅರುಣ್ ತಂದೆ-ತಾಯಿಯನ್ನು ಕರೆಸಿ ವಿಚಾರಿಸಿದರು. ಬಳಿಕ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದಾಗ ಅರುಣ್ ನ ವರ್ತನೆಗೆ ನಿಜವಾದ ಕಾರಣ ತಿಳಿದುಬಂತು.

ಕಾರಣವಿಷ್ಟೇ… ಅರುಣ್  ಮನೆಯಲ್ಲಿ ಅವನ ಅಪ್ಪ-ಅಮ್ಮ ನಲ್ಲಿ ಆಗಸ್ಟ್ ಬಳಿಕ ದಾಂಪತ್ಯ ವಿರಸ ಕಂಡುಬಂದಿತ್ತು. ಅದೊಂದು ದಿನ ರಾತ್ರಿ ಊಟದ ವಿಚಾರದಲ್ಲಿ ಅರುಣ್‌ನ ಅಪ್ಪ-ಅಮ್ಮನ ನಡುವೆ ಭಾರೀ ಜಗಳವೇ ನಡೆದಿತ್ತಂತೆ. ಯಾವತ್ತೂ ಅಮ್ಮನಿಗೆ ಹೊಡೆಯದ ಅಪ್ಪ ಕ್ಷುಲ್ಲಕ ವಿಚಾರಕ್ಕೆ ಅಮ್ಮನ ಕೆನ್ನೆಗೆ ಹೊಡೆದ ಘಟನೆಯೇ ಅರುಣ್ ಮೇಲೆ ಗಾಢಪರಿಣಾಮ ಬೀರಿತ್ತು ಎಂಬುದನ್ನು ಅರುಣ್ ಬಾಯಿಯಿಂದಲೇ ಬರುವಂತೆ ಮಾಡಿದ್ದರು ಮನೋವೈದ್ಯರು. ಯಾವಾಗ ಅಪ್ಪ ನನ್ನ ಅಮ್ಮನಿಗೆ ಹೊಡೆಯುತ್ತಾರೋ ಎಂಬ ಭಯದಿಂದ ಅರುಣ್ ಮಾನಸಿಕವಾಗಿ ನೊಂದುಕೊಂಡಿದ್ದ ಮತ್ತು ಅದೇ ಕಾರಣದಿಂದಲೇ ಮನೆಗೆ ಹೋಗುತ್ತಿದ್ದ ಎಂಬುದು ಈ ಘಟನೆಯ ಉಳಿದ ವಿವರಗಳು. ಬಳಿಕ ಅವನಿಗೆ ಚಿಕಿತ್ಸೆ ನೀಡಲಾಯಿತು. ಅವನ ಹೆತ್ತವರಿಗೆ ಬುದ್ದಿ ಹೇಳಿ ವರ್ತನೆಯನ್ನು ಸರಿಯಾಗಿಸುವಂತೆ ಸೂಚಿಸಲಾಯಿತು. ದಿನಗಳೆದಂತೆ ಅಪ್ಪ-ಅಮ್ಮನ ಮೇಲಿನ ವಿಶ್ವಾಸ ಮರುಕಳಿಸಿ ಅರುಣ್ ಮೊದಲಿನಷ್ಟೇ ಪ್ರತಿಭಾವಂತನಾದ.

ಅಬ್ಬಾ ಅರುಣ್ ಹುಶಾರಾದನಲ್ಲ್ಲಾ..ಎಂದು ನಾವು ಸಂತಸ ಪಡುವ ಹಂತಕ್ಕೆ ಈ ಘಟನೆ ಮುಗಿದು ಹೋಗುವುದಿಲ್ಲ.

ಜಾಹೀರಾತು

ಒಬ್ಬ ಪ್ರೌಢಶಾಲಾ ವಿದ್ಯಾರ್ಥಿ ಮನೆಯ ಘಟನೆಯೊಂದರಿಂದ ಇಂತಹಾ ಮಾನಸಿಕ ರೋಗಕ್ಕೆ ತುತ್ತಾದ ! ಎಂದರೆ ನೀವೇ ಯೋಚಿಸಿ. ಇಂತಹ ಅದೆಷ್ಟೋ ಘಟನೆಗಳು ನಮ್ಮ-ನಿಮ್ಮ ಮನೆಗಳಲ್ಲಿ ನಡೆಯುತ್ತಿಲ್ಲ. ಈ ಅವಧಿಯಲ್ಲಿ ನಾವು ನಮ್ಮ ಮಕ್ಕಳ ಬಗ್ಗೆ ಯೋಚಿಸಿದ್ದೇವಾ..? ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿದ್ದೇವಾ..?.. ಮನೆಯೊಳಗೆ ದೊಡ್ಡವರು ಅವರಷ್ಟಕ್ಕೇ ತೆಗೆದುಕೊಳ್ಳುವ ನಿರ್ಧಾರಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಆತ್ಮಹತ್ಯೆಯ ವರೆಗೂ ಇದು ಮುಂದುವರಿಯುವ ಅಪಾಯವೂ ಇದೆ.. ದಯವಿಟ್ಟು ಹಾಗಾಗದಿರಲಿ. ಮಕ್ಕಳನ್ನು ಶಾಲೆಗೆ ಕಳುಹಿಸಿ-ಅವರ ಹೊಟ್ಟೆಬಟ್ಟೆಗೆ ಕಡಿಮೆಯಾಗದಂತೆ ನೋಡಿಕೊಂಡ ಮಾತ್ರಕ್ಕೆ “ದೊಡ್ಡವರ” ಜವಬ್ದಾರಿ ಮುಗಿಯುವುದಿಲ್ಲ. ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅವರನ್ನು ಸದಾ ಸಂತಸಮಯರನ್ನಾಗಿಸುವ ಹೊಣೆಯೂ ನಮ್ಮ-ನಿಮ್ಮ ಮೇಲಿದೆ.. ನಿಜ ತಾನೇ..?

 

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಈ ಮೈಲ್ ಮಾಡಿ bantwalnews@gmail.com

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma