ಕಚೇರಿ ಕೆಲಸಗಳಲ್ಲಿ ಕ್ರೀಯಾಶೀಲತೆ, ಬುದ್ಧಿವಂತಿಕೆ ಮತ್ತು ಆಧುನಿಕ ತಂತ್ರಾಂಶಗಳ ಅಳವಡಿಕೆ ಅನಿವಾರ್‍ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಸಹಾಯಕ ನಿರ್ದೇಶಕ ಎಂ. ಪಾಲ್ ಸ್ವಾಮಿ ಹೇಳಿದರು.
www.bantwalnews.com report
ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಡೆವಲಪ್ಪಿಂಗ್ ಎಡ್ವಾನ್ಸ್‌ಡ್ ಸ್ಕಿಲ್ಸ್ ಪಾರ್ ಎಡ್‌ಮಿನಿಸ್ಟ್ರೇಟಿವ್ ಸ್ಟಾಫ್ ಎಂಬ ವಿಷಯದ ಕುರಿತು ನಡೆದ ಯು.ಜಿ.ಸಿ ಪ್ರಾಯೋಜಿತ ಒಂದು ದಿನದ ವಿ.ವಿ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಲೆಕ್ಕ್ಕಾ ಧಿಕಾರಿಯಾದ ಗಣೇಶ್ ನಾಯಕ್ ಮಾತನಾಡಿ ಆಧುನಿಕ ತಂತ್ರಜ್ಞಾನದ ಬೆಳವಣಿಗೆಗಳನ್ನು ತಿಳಿದುಕೊಂಡು ಕೆಲಸ ನಿರ್ವಹಿಸಬೇಕು ಎಂದರು.
ಇನ್ನೋರ್ವ ಅತಿಥಿ ಖಾಸಗಿ ಮತ್ತು ಅನುದಾನಿತ ಕಾಲೇಜುಗಳ ಆಡಳಿತಾತ್ಮಕ ಸಂಘದ ಅಧ್ಯಕ್ಷ ವಿಕ್ಟೋರಿಯನ್ ಫೆರ್ನಾಂಡಿಸ್ ಮಾತನಾಡಿ ಕಚೇರಿ ಎನ್ನುವುದು ದೇಹದ ಹೃದಯವಿದ್ದಂತೆ. ಹೃದಯ ಸರಿ ಇದ್ದರೆ ದೇಹ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಕಚೇರಿ ಕಾರ್ಯನಿರ್ವಹಣೆ ಸುಲಲಿತವಾದಾಗ ಸಂಸ್ಥೆಯು ಗಟ್ಟಿಯಾಗಿ ನಿಲ್ಲಲು ಸಾಧ್ಯ ಎಂದರು.
ಆಧ್ಯಕ್ಷತೆ ವಹಿಸಿದ್ದ ಬಂಟ್ವಾಳದ ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಮಾತನಾಡಿ ಇಂತಹ ಕಾರ್ಯಾಗಾರಗಳು ಆಡಳಿತಾತ್ಮಕ ಸಿಬ್ಬಂದಿಗಳಿಗೆ ಹೆಚ್ಚು ಪರಿಣಾಮಕಾರಿಯಾದುದು. ಇದಕ್ಕೆ ಆಡಳಿತ ಮಂಡಳಿಯು ನಿರಂತರ ಸಹಕಾರವನ್ನು ನೀಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್‌ರವರು ಅತಿಥಿಗಳನ್ನು ಪರಿಚಯಿಸಿ, ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಗಾರದ ಸಂಯೋಜಕರಾದ ರಾಧೇಶ್ ಕುಮಾರ್‌ರವರು ವಂದಿಸಿದರು. ಕಚೇರಿ ಸಹಾಯಕರಾದ ರೂಪಾ ಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಗತಿ ಮತ್ತು ಗಾಯನ ಪ್ರಭು ಪ್ರಾರ್ಥಿಸಿದರು.