ವಿಶೇಷ ವರದಿ

ಬಂಟ್ವಾಳ ಪೇಟೆ ರಸ್ತೆ ಸದ್ಯಕ್ಕಂತೂ ಅಗಲವಾಗೋಲ್ಲ

  • ವರ್ತಕರ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕ ಸರ್ವೇ
  • ಈಗ ನಡೆಯುತ್ತಿರುವ ಸರ್ವೇಗೆ ವರ್ತಕರ ಒಪ್ಪಿಗೆ ಇಲ್ಲ
  • ಮೂಲಸೌಕರ್ಯ ಕೊಟ್ಟು ಅಭಿವೃದ್ಧಿ ಮಾಡಲು ಒತ್ತಾಯ
  • ಬಂಟ್ವಾಳದಲ್ಲಿ ನಡೆದ ವರ್ತಕರ ಹಾಗೂ ನಾಗರಿಕರ ಸಭೆ

www.bantwalnews.com report

ಅಗಲ ಕಿರಿದಾದ ರಸ್ತೆಗಳು. ನಡೆದುಕೊಂಡು ಹೋಗುವಾಗ ಯಾವುದಾದರೂ ವಾಹನ ಹಿಂದಿನಿಂದ ಢಿಕ್ಕಿ ಹೊಡೆಯುತ್ತಾ ಎಂಬ ಹೆದರಿಕೆ. ಇವೆಲ್ಲದರ ನಡುವೆ ವಾಹನಗಳ ಸಂಚಾರ, ಅದರಲ್ಲೂ ಓವರ್ ಟೇಕ್….

ಇಪ್ಪತ್ತು ವರ್ಷಗಳ ಹಿಂದೆ ಈ ಸ್ಥಿತಿ ಇದ್ದಾಗ ಹೇಗೋ ಸುಧಾರಿಸಿಕೊಂಡು ಹೋಗಬಹುದಿತ್ತು. ಆದರೆ ಈಗ ವಾಹನಗಳು ಮಿತಿ ಮೀರಿವೆ. ಹೀಗಾಗಿ ಬಂಟ್ವಾಳ ಪೇಟೆ ಅಗಲಗೊಳ್ಳಬೇಕು ಎಂಬ ಮಾತುಗಳು ಇಂದು ನಿನ್ನೆಯದಲ್ಲ. ಬೈಪಾಸ್ ಇದೆಯಲ್ಲ, ಮತ್ಯಾಕೆ ರಸ್ತೆ ಅಗಲಗೊಳ್ಳುವುದು ಎಂಬ ಮಾತುಗಳೂ ಇದರ ಜೊತೆಗೇ ಕೇಳಿಬರುವುದು ಹಲವು ವರ್ಷಗಳಿಂದ ಇತ್ತು. ಕ್ರಮೇಣ ಈ ವಿಚಾರ ಹಾಗೆಯೇ ತಣ್ಣಗಿತ್ತು.

ಕಳೆದ ನವೆಂಬರ್ ನಲ್ಲಿ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಸುದ್ದಿಗೆ ಮರುಜೀವ ಬಂತು. ಇದಕ್ಕೆ ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್.

ನವೆಂಬರ್ ನಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳ ಮೀಟಿಂಗ್ ಮಾಡಿದ ಅವರು ಬಂಟ್ವಾಳ ಪೇಟೆ ರಸ್ತೆ ಅಗಲಕಿರಿದಾಗಿರುವುದನ್ನು ಗಮನಿಸಿ, ಅದನ್ನು ಅಗಲಗೊಳಿಸುವ ಕುರಿತು ಯೋಚಿಸಿದರು. ಈ ಕುರಿತು ಸರ್ವೇ ನಡೆಸಲೂ ಸೂಚಿಸಿದರು. ಅವರೊಂದಿಗೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಅವರೂ ಇದ್ದರು. ಇಡೀ ಪ್ರಕ್ರಿಯೆಯ ಕುರಿತು ಗಾರ್ಗಿ ಜೈನ್ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನೂ ಅವರು ಹೊರಡಿಸಿದರು.

ಅಂದು ನಡೆದ ಸಭೆಯಲ್ಲಿ ಕೈಕಂಬ ಬಸ್ ಬೇ ನಿರ್ಮಾಣ ಪ್ರಸ್ತಾಪವಿತ್ತು. ಯಾವಾಗ ಜಿಲ್ಲಾಧಿಕಾರಿ ಬಸ್ ಬೇ  ನಿರ್ಮಿಸಲು ಮೌಖಿಕವಾಗಿ ಸೂಚನೆ ಹೊರಡಿಸಿದರೋ ಕೂಡಲೇ ಕೆಲವರು ಅತ್ಯುತ್ಸಾಹದಿಂದ ಜೆಸಿಬಿ ತಂದು ಕೈಕಂಬ ರಸ್ತೆಯ ಎರಡೂ ಬದಿ ಹೊಂಡ ಮಾಡಿದರು. ಅದು ಲಾಭವಾಗುವುದರ ಬದಲು ಮತ್ತಷ್ಟು ಕಿರಿಕಿರಿ ಉಂಟುಮಾಡಿತು. ಬಳಿಕ ಪ್ರತಿಭಟನೆಗಳು ನಡೆದವು.

ಅದೇ ರೀತಿ ಬಂಟ್ವಾಳ ಪೇಟೆ ರಸ್ತೆ ಅಗಲಗೊಳಿಸುವ ಕುರಿತು ಮೀಟಿಂಗ್ ಗಳು ನಡೆದವು. ಆದರೆ ಇದರ ವ್ಯಾಲಿಡಿಟಿ ಬಗ್ಗೆ ವಿಪಕ್ಷ ಸದಸ್ಯರು ಸಂದೇಹ ವ್ಯಕ್ತಪಡಿಸಿದರು. ಇದು ನಡೆದೀತಾ ಎಂದು ಹಿರಿಯ ನಾಗರಿಕರು ಅನುಮಾನಪಟ್ಟರು. ಕೊನೆಗೂ ಬಂಟ್ವಾಳ ಪೇಟೆ ಅಗಲಗೊಳ್ಳಲು ಸಾಧ್ಯವೇ ಇಲ್ಲ ಎಂಬುದು ಖಚಿತವಾದದ್ದು ಕಳೆದ ತಿಂಗಳು.

ಕಳೆದ ತಿಂಗಳು ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯೊಂದು ವರ್ತಕರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ನಡೆದಿತ್ತು. ಬಂಟ್ವಾಳ ಪೇಟೆ ಸರ್ವೇ ಸರಿಯಾಗುತ್ತಿಲ್ಲ ಎಂಬ ಮಾತುಗಳು ಆಗಲೇ ಕೇಳಿಬಂದಿದ್ದವು. ಇದು ಏಕಪಕ್ಷೀಯವಾಗಿ ನಡೆದ ಸಭೆ ಎಂದು ವಿಪಕ್ಷ ಸದಸ್ಯರು ಬಳಿಕ ದೂರಿದರು. ಅವರೂ ಬಂಟ್ವಾಳ ಪೇಟೆ ಅಗಲೀಕರಣದ ಮೊದಲು ಇತರ ವಿಷಯಗಳನ್ನು ಬಗೆಹರಿಸಲು ಒತ್ತಾಯಿಸಿದರು.

ಹೀಗಾಗಿ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಶನಿವಾರ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ನೇತೃತ್ವದಲ್ಲಿ ಬಂಟ್ವಾಳ ಪುರಸಭಾ ಕಚೇರಿಯಲ್ಲಿ ವ್ಯಾಪಾರಿಗಳ, ಆಟೋ ಚಾಲಕರ ಸಹಿತ ಸಾರ್ವಜನಿಕರ, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಿತು. ಇಲ್ಲೂ ಮೂಲಸೌಕರ್ಯ ಒದಗಿಸಿ ಬಳಿಕವಷ್ಟೇ ಬಂಟ್ವಾಳ ಪೇಟೆ ಅಗಲಗೊಳಿಸುವ ಪ್ರಕ್ರಿಯೆಗೆ ಕೈಹಾಕಿ, ಇಲ್ಲವಾದರೆ ಸುಮ್ಮನಿರುವುದೇ ವಾಸಿ ಎಂಬರ್ಥದ ಮಾತುಗಳು ಕೇಳಿಬಂದವು.

ಅಲ್ಲಿಗೆ ಸುದೀರ್ಘ ಚರ್ಚೆ, ಮಾತಿನ ಚಕಮಕಿ, ಅಭಿಪ್ರಾಯ ಮಂಡನೆ ನಡೆದ ಬಳಿಕ ಸಾರ್ವಜನಿಕರಲ್ಲಿ ಒಮ್ಮತದ ಅಭಿಪ್ರಾಯ ಮೂಡಲೇ ಇಲ್ಲ. ಕೊನೆಗೆ ಅಧಿಕಾರಿಗಳೇ ಒಂದು ಸೂತ್ರವನ್ನು ಮಂಡಿಸಿದರು.

ಅದೇನೆಂದರೆ….

  • ಬಂಟ್ವಾಳ ಪೇಟೆಯಲ್ಲಿ ರಿಕ್ಷಾ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಗುರುತು
  • ಬೆಳಿಗ್ಗೆ ಗಂಟೆ 8 ರಿಂದ 10, ಸಂಜೆ ಗಂಟೆ 4 ರಿಂದ 7ರವರೆಗಿನ ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜಿಸುವುದು.
  • ಸ್ಥಳೀಯ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ರಸ್ತೆ ಇಕ್ಕೆಲಗಳ ವೈಜ್ಞಾನಿಕ ಸರ್ವೆ ನಡೆಸುವುದು
  • ಪುಟ್‌ಪಾತ್‌ನಲ್ಲಿ ವ್ಯಾಪಾರ ನಡೆಸದೆ ಇರುವುದು, ಇದರಿಂದ ರಸ್ತೆ ಅಗಲೀಕರಣ ಬೇಕೆ? ಬೇಡವೇ ಎಂದು ತಿಳಿದುಕೊಳ್ಳುವುದು,
  • ದೇವರಕಟ್ಟೆಯಲ್ಲಿ ಬಸ್ಸು ನಿಲುಗಡೆಗೆ ಅವಕಾಶ, ಬಡ್ಡಕಟ್ಟೆ ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವುದು.

 ಸಭೆಯಲ್ಲಿ ಕೈಗೊಂಡ ಈ ತೀರ್ಮಾನಗಳನ್ನು ಜಿಲ್ಲಾಧಿಕಾರಿ ಜಗದೀಶ್ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಹಾಯಕ ಆಯುಕ್ತ ರೇಣುಕ ಪ್ರಸಾದ್ ನಿರ್ಣಯ ಪ್ರಕಟಿಸಿದರು.

ಏನೆಲ್ಲ ವಾದ, ವಿವಾದ?

  • ರಸ್ತೆ ಅಗಲೀಕರಣ ಬೇಕು ಎನ್ನುವ ವಾದವನ್ನು ಕೆಲವರು ಮಂಡಿಸಿದರೆ ಸದ್ಯಕ್ಕೆ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಬೇಡ ಎನ್ನುವ ವಾದವನ್ನು ಕೆಲವರು ಮಂಡಿಸಿದರು.
  • ಬಂಟ್ವಾಳ ಪೇಟೆ ಉಳಿಯಬೇಕೆಂಬ ದೃಷ್ಟಿಯಿಂದ ಈಗಾಗಲೇ ಕೋಟ್ಯಾಂತರ ರುಪಾಯಿ ವ್ಯಯಿಸಿ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಬಂಟ್ವಾಳ ಪೇಟೆಯಲ್ಲಿ 9 ಮೀಟರ್‌ಗೆ ಅಗಲೀಕರಣ ಮಾಡಿದರೆ ಭಾಗಶಃ ಅಂಗಡಿಗಳು ನಾಶವಾಗಲಿದೆ ಇದರಿಂದಾಗಿ ಬಡ ವ್ಯಾಪಾರಿಗಳು ತೊಂದರೆ ಅನುಭವಿಸಲಿದ್ದಾರೆ. ಅಂಗಡಿದಾರರು ಪುಟ್‌ಪಾತ್‌ಗಳಲ್ಲಿ ವಸ್ತುಗಳನ್ನಿಟ್ಟು ವ್ಯಾಪಾರ ಮಾಡುವುದನ್ನು ನಿಲ್ಲಿಸಿದರೆ ಹಾಗೂ ತಮ್ಮ ವಾಹನಗಳನ್ನು ತಮ್ಮ ಅಂಗಡಿಗಳ ಮುಂದೆ ಇಡದೆ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಕೈಗೊಂಡರೆ ಬಂಟ್ವಾಳ ಪೇಟೆ ಸದ್ಯಕ್ಕೆ ಅಗಲೀಕರಣ ಬೇಡ ಎಂದು ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಇದಕ್ಕೆ ವರ್ತಕರ ಸಂಘದವರು ಬೆಂಬಲ ಸೂಚಿಸಿದರು.
  • ಬಂಟ್ವಾಳ ಪೇಟೆಯ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪೇಟೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ ಬಳಿಕವೇ ಪೇಟೆ ಅಗಲೀಕರಣ ಕಾರ್ಯ ಕೈಗೊಳ್ಳಿ ಎಂದು ವರ್ತಕತ ಸಂಘದ ಅಧ್ಯಕ್ಷ ಸುರೇಶ್ ಬಾಳಿಗ ಹೇಳಿದರು. ರಸ್ತೆ ಅಗಲೀಕರಣಕ್ಕೆ ಮುನ್ನ ವೈಜ್ಞಾನಿಕ ಸರ್ವೇ ಆಗಬೇಕು, ಪೇಟೆಯ ಎಲ್ಲಾ ವ್ಯಾಪರೀಗಳನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಸರ್ವೇ ಕಾರ್ಯ ನಡೆಸಬೇಕು ಎನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.
  • ರಸ್ತೆ ಅಗಲೀಕರಣದ ಬಗ್ಗೆ ಸಭೆ ನಡೆಸುವ ಮೊದಲು ಅಧಿಕಾರಿಗಳು ರಸ್ತೆಯನ್ನು ಪರಿಶೀಲನೆ ನಡೆಸಬೇಕು, ಈಗಾಗಲೇ ಕೈಕಂಬದಲ್ಲಿ ರಸ್ತೆ ಅಗಲೀಕರಣ ಮಾಡುವುದಾಗಿ ಹೊರಟು ವ್ಯಾಪರೀಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದೇ ಪರಿಸ್ಥಿತಿ ಬಂಟ್ವಾಳ ಪೇಟೆಯಲ್ಲಿ ಆದರೆ ಹೇಗೆ ಎಂದು ಪುರಸಭಾ ಸದಸ್ಯ ಮೊನೀಶ್ ಅಲಿ ಸಹಾಯಕ ಆಯುಕ್ತರನ್ನು ಪ್ರಶ್ನಿಸಿದರು.

ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಯೋಜನಾ ನಿರ್ದೇಶಕ ಪ್ರಸನ್ನ, ತಹಶೀಲ್ದಾರ್ ಪುರಂದರ ಹೆಗ್ಡೆ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಕೆಯುಡಿಸಿಯ ಎಂಜಿನಿಯರ್ ಶುಭಲಕ್ಷ್ಮೀ, , ಪುರಸಭಾ ಸದಸ್ಯ ಪ್ರವೀಣ್ ಬಿ, ನಾಮನಿರ್ದೇಶಿತ ಸದಸ್ಯ ಪ್ರವೀಣ್ ಕಿಣಿ ಪ್ರಮುಖರಾದ ಪ್ರಕಾಶ್ ಅಂಚನ್, ವಿಶ್ವನಾಥ ಚೆಂಡ್ತಿಮಾರ್ ಚರ್ಚೆಯಲ್ಲಿ ಪಾಲ್ಗೊಂಡರು.

  • ಸಭೆಗೆ ಬಾರದ ಬಿಜೆಪಿ ಸದಸ್ಯರು

ಬಂಟ್ವಾಳ ವ್ಯಾಪ್ತಿಯ ಬಿಜೆಪಿ ಸದಸ್ಯರು ಇಬ್ಬರು. ಗೋವಿಂದ ಪ್ರಭು ಮತ್ತು ಬಿ.ದೇವದಾಸ ಶೆಟ್ಟಿ. ಅವರಿಬ್ಬರೂ ಸಭೆಗೆ ಬರಲಿಲ್ಲ. ಇದಕ್ಕೆ ಕಾರಣ ಇದುವರೆಗೆ ಕೊಟ್ಟ ಯಾವುದೇ ಅರ್ಜಿ ಹಾಗೂ ಮನವಿಗಳಿಗೆ ಅಧಿಕಾರಿಗಳಿಂದ ಸ್ಪಂದನೆ ಸಿಗದೇ ಇದ್ದುದು. ಸಭೆಯ ಬಳಿಕ ಸಹಾಯಕ ಕಮೀಷನರ್ ಅವರನ್ನು ಭೇಟಿಯಾದ ಇಬ್ಬರೂ ರಸ್ತೆ ಅಗಲೀಕರಣ ಮತ್ತು ಒತ್ತುವರಿ ಕುರಿತ ಸಭೆ ಕೇವಲ ಅಗಲೀಕರಣ ವಿಚಾರಕ್ಕೆ ಸೀಮಿತವಾದುದಕ್ಕೆ ಆಕ್ಷೇಪ ಸಲ್ಲಿಸಿದರು. ಮೂರು ಮನವಿಗಳನ್ನು ಕೊಟ್ಟರೂ ಜಿಲ್ಲಾಡಳಿತದಿಂದ ಸ್ಪಂದನೆ ಇಲ್ಲ. ಬಂಟ್ವಾಳ ಜೋಡುಮಾರ್ಗ ಉದ್ಯಾನವನ ವಿಚಾರದಲ್ಲೂ ಆಡಳಿತ ತಮ್ಮ ಮನವಿಗೆ ಕಿವಿಗೊಡಲಿಲ್ಲ ಎಂದು ಗಮನ ಸೆಳೆದರು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts