ಬಂಟ್ವಾಳ ತಾಲೂಕಿನ ಕೆಲಿಂಜ ವೀರಕಂಭದ ಬಳಿ ಅರಣ್ಯ ಇಲಾಖೆಯ ಸಿರಿ ಚಂದನವನ ಉದ್ಘಾಟನೆ
www.bantwalnews.com report
ಸುಮಾರು 500 ಎಕ್ರೆ ಪ್ರದೇಶದಲ್ಲಿ ಮೂರು ಸಾವಿರ ಶ್ರೀಗಂಧದ ಸಸಿಗಳನ್ನು ನೆಡುವುದರೊಂದಿಗೆ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕೆಲಿಂಜ ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾದ ಸಿರಿ ಚಂದನವನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಟ್ರೀ ಪಾರ್ಕ್
ಕಾರಿಂಜದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ದೈವೀವನ ನಿರ್ಮಿಸಲಾಗಿದೆ. ಪುತ್ತೂರಿನಲ್ಲಿ ದೇಯಿ ಬೈದೇತಿ ಔಷಧಿವನ ನಿರ್ಮಿಸಲಾಗಿದೆ. ಬಂಟ್ವಾಳ ಐಬಿ ಎದುರು ಟ್ರೀ ಪಾರ್ಕ್ ನಿರ್ಮಾಣ ಸಹಿತ ರಾಜ್ಯದ ಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗುವುದು. ಈಗಾಗಲೇ ಮಂಗಳೂರಿನ ತಣ್ಣೀರುಬಾವಿ, ಉಡುಪಿಯ ಬಡಗಬೆಟ್ಟುವಿನಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಟ್ರೀ ಪಾರ್ಕ್ ರಚಿಸುವ ಗುರಿ ಇದೆ. ಇದರಿಂದ ಶುದ್ಧ ಗಾಳಿಯ ಪರಿಸರ ನಿರ್ಮಾಣವಾಗುತ್ತದೆ ಎಂದು ರಮಾನಾಥ ರೈ ಹೇಳಿದರು.
ಚಿಣ್ಣರ ವನದರ್ಶನ
ಮಕ್ಕಳು ಪರಿಸರ ರಕ್ಷಣೆಯ ಕುರಿತು ಅರಿತುಕೊಳ್ಳುವುದು ಅತೀ ಅಗತ್ಯ. ಇದಕ್ಕಾಗಿಯೇ ಅರಣ್ಯ ಇಲಾಖೆ ಚಿಣ್ಣರ ವನದರ್ಶನ ಕಾರ್ಯಕ್ರಮ ಆಯೋಜಿಸುತ್ತದೆ. ಪರಿಸರ ಸಂರಕ್ಷಣೆ ನಿಜ ಅರ್ಥದಲ್ಲಿ ಅನುಷ್ಠಾನಗೊಳ್ಳುತ್ತದೆ ಎಂದರು.
ಕಸ್ತೂರಿರಂಗನ್ ವರದಿ
ಕಸ್ತೂರಿ ರಂಗನ್ ವರದಿ ರಿಸರ್ವ್ ಫಾರೆಸ್ಟ್ ಗೆ ಸೀಮಿತವಾಗಿಯಷ್ಟೇ ಅನುಷ್ಠಾನಗೊಳ್ಳುವಂತೆ ಶಿಫಾರಸು ಮಾಡಿದ್ದೇವೆ ಎಂದು ರಮಾನಾಥ ರೈ ಹೇಳಿದರು. ಪಶ್ಚಿಮ ಘಟ್ಟಗಳ ಕಾಡು ಉಳಿಯುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕಸ್ತೂರಿರಂಗನ್ ವರದಿ ಕುರಿತು ನಿಜಾಂಶ ತಿಳಿಸಬೇಕು. ಡಿಸಿ ಕಚೇರಿ ಪಡೀಲ್ ಬಳಿ ನಿರ್ಮಿಸಲು ಹೊರಟರೆ, ಮರ ಕಡಿಯುವುದಕ್ಕೆ ಆಕ್ಷೇಪ ಸಲ್ಲಿಸಲಾಗುತ್ತದೆ ಎಂದು ರೈ ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿರರುವ ಪ್ರತಿಯೊಂದು ಕೆರೆಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದ ಸಚಿವ, ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಇಲಾಖೆ ಬಳಸಲು ಆಗೋದಿಲ್ಲ ಎಂದು ಪುನರುಚ್ಛರಿಸಿದರು.
ಯಾರೂ ಕಾನೂನು ಮುರಿಯುವ ಕೆಲಸ ಮಾಡಬಾರದು. ವನ್ಯಜೀವಿಗಳ ಸಂರಕ್ಷಣೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದರು.
ಡಾ.ಕೆ.ಟಿ.ಹನುಮಂತಪ್ಪ ಸ್ವಾಗತಿಸಿದರು. ಡಾ.ಸಂಜಯ ಎಸ್.ಬಿಜ್ಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ವಂದಿಸಿದರು.
ಇದಕ್ಕೂ ಮುನ್ನ ಸ್ಥಳೀಯ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತು ನಾಟಕ ಪ್ರದರ್ಶಿಸಿದರು.