ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಇದರ ಸ್ವರ್ಣ ಹಬ್ಬ(50 ವರ್ಷ) ಮಹೋತ್ಸವ ಹಾಗೂ ಸಿರಾಜುಲ್ ಹುದಾ ಮದ್ರಸ ಮಿತ್ತೂರು ಇದರ 40ನೇ ವಾರ್ಷಿಕ ಹಾಗೂ 20ನೇ ಸ್ವಲಾತ್ ವಾರ್ಷಿಕ ಅನುಸ್ಮರಣಾ ಕಾರ್ಯಕ್ರಮ ಜನವರಿ 20 ಮತ್ತು 21 ರಂದು ನಡೆಯಲಿದೆ ಎಂದು ಸಿರಾಜುಲ್ ಹುದಾ ಮಸೀದಿಯ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಖಂದಕ್ ತಿಳಿಸಿದರು.
www.bantwalnews.com report
ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1966ರಲ್ಲಿ ಮಿತ್ತೂರು ಎಂಬ ಸಣ್ಣ ಗ್ರಾಮದಲ್ಲಿ ಅಂದಿನ ಬಡವರು ಸೇರಿ ಕಟ್ಟಿಸಲಾದ ಈ ಮಿತ್ತೂರು ಸಿರಾಜುಲ್ ಹುದಾ ಮಸೀದಿಗೆ ಇದೀಗ ಸ್ವರ್ಣ ಮಹೋತ್ಸವದ ಸಡಗರವಾಗಿದೆ. ಪಣಂಬೂರು ಎಂಬಲ್ಲಿ ಹಳೆಯದಾದ ಮಸೀದಿಯೊಂದನ್ನು ಕೆಡವಿ ಜೆಪ್ಪು ಮೊಹಿದು ಕುಟ್ಟಿ ಹಾಜಿಯವರ ಪರಿಶ್ರಮದಿಂದ ಮಸೀದಿಯ ಮರ ಮಟ್ಟು ಹಂಚುಗಳನ್ನು ಮಿತ್ತೂರಿಗೆ ತಂದು ಎತ್ತರವಾದ ಸ್ಥಳದಲ್ಲಿ ಮಸೀದಿಯನ್ನು ಸ್ಥಾಪಿಸಲಾಗಿತ್ತು. ದಿವಂಗತ ಮಮ್ಮಿ ಮಾಸ್ಟರ್ ಹಾಜಿ ಮುಂತಾದ ನೇತಾರರು ಮಸೀದಿ ಸ್ಥಾಪನೆಗೆ ಬಹಳಷ್ಟು ಸೇವೆ ಸಲ್ಲಿಸಿದ್ದರು ಎಂದು ವಿವರಿಸಿದರು.
20ರಂದು ಮಸೀದಿ ಅಧ್ಯಕ್ಷ ಮೌಲಾನ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉದ್ಘಾಟಿಸಲಿದ್ದು, ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಬ್ದುಲ್ಲ ಫೈಝಿ ಚೆಂಗಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
21ರಂದು ನಡೆಯಲಿರುವ ಸ್ವಲಾತ್ ಮಜ್ಲಿಸ್‌ನ ನೇತೃತ್ವವನ್ನು ಸೈಯ್ಯದ್ ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಕೇರಳ ವಹಿಸಲಿದ್ದು, ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಅಬ್ದುಲ್ ಅಝೀಜ್ ಅಶ್ರಫಿ ಪಾಣತ್ತೂರು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಖತೀಬು ಅಶ್ರಫ್ ಅಝ್‌ಹರಿ, ಜತೆ ಕಾರ್ಯದರ್ಶಿ ಪಿ.ಕೆ ಉಮ್ಮರ್, ಸದಸ್ಯ ಕೆ.ಬಿ ಶಾಹುಲ್ ಹಮೀದ್, ಅಬೂಬಕ್ಕರ್ ಉಪಸ್ಥಿತರಿದ್ದರು.