ಸರ್ಕಾರ ನೀರಾ ಲೀಟರ್ ಗೆ ಕನಿಷ್ಠ 70 ರೂ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹೇಳಿದೆ.
ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ರೈತ ಮುಖಂಡರು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಬೀಗ ಹಾಕಿರುವ ತುಂಬೆ ನೀರಾ ಘಟಕದಲ್ಲಿ ಫೆಡರೇಷನ್ ಹಾಗೂ ಸಿಪಿಸಿಆರ್‌ಐ ಅಧಿಕಾರಿಗಳ ಸಭೆಯನ್ನು ಕರೆದು, ಸಂಘಗಳು ನೀಡುವ ಲೀಟರ್ ನೀರಾಕ್ಕೆ 30 ರೂ. ನೀಡುವ ಸೂಚನೆ ನೀಡಿದ್ದರು ಎಂಬ ಮಾಹಿತಿ ನೀಡಿದರು.
www.bantwalnews.com report
ತೋಟಗಾರಿಕಾ ಇಲಾಖೆ ಹಾಗೂ ಪಾಲಕ್ಕಾಡು ಕಂಪನಿ ಜತೆಗೆ ವಿಜ್ಞಾನಿಗಳೂ ಸೇರಿ ರೈತರಿಗೆ ಅನ್ಯಾಯವೆಸಗಲು ಮುಂದಾಗಿದ್ದಾರೆ. ಲೀಟರ್ ನೀರಾಕ್ಕೆ 30ರೂ ಗಿಂತ ಅಧಿಕ ನೀಡಲು ಅಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂದಿರುವುದು ದುರದೃಷ್ಠಕರ. ತೆಂಗಿನ ಮರದ ಮಾಲಕನಿಗೆ ದಿನವೊಂದಕ್ಕೆ 30 ರೂ ಬಾಡಿಗೆ, ಮರ ಹತ್ತುವವರಿಗೆ ಒಂದು ಬಾರಿಗೆ 50 ರೂ ನೀಡಬೇಕಾಗಿದೆ. ಇದನ್ನು ಫೆಡರೇಷನ್ ಭರಿಸುವ ವ್ಯವಸ್ಥೆ ಇದ್ದು, ಇದಕ್ಕೆ ಸಂಘಗಳಿಗೆ ಲೀಟರ್ ನೀರಾಕ್ಕೆ 70 ರೂ. ನೀಡಬೇಕು ಎಂಬುದು ರೈತಸಂಘದ ಒತ್ತಾಯ.
ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ ಒಡ್ಡೂರು ಫಾರ್ಮ್ಸ್ನಲ್ಲಿ ಒಂದು ತೆಂಗಿನಮರದಿಂದ 2.5 ಲೀಟರ್ ನೀರಾ ಸಂಗ್ರಹಣೆ ಮಾಡಿ ಸಕ್ಕರೆ ತಯಾರಿಸುವ ಪ್ರಯೋಗ ಮಾಡಲಾಗುತ್ತಿದೆ. ಮಂಗಳೂರು ಫೆಡರೇಷನ್ ಗೌರವ ಸಲಹೆಗಾರ ಉಳಿಪ್ಪಾಡಿಗುತ್ತು ರಾಜೇಶ್ ನಾಕ್ ಅವರಲ್ಲಿ ಕಂಪನಿ ಹಾಗೂ ಅಧಿಕಾರಿಗಳ ನಡೆಯ ಬಗ್ಗೆ ಚರ್ಚಿಸಿದಾಗ ಲೀಟರ್ ನೀರಾಕ್ಕೆ 60 ರೂಗೆ ಖರೀದಿ ಮಾಡಲುಮುಂದೆ ಬಂದಿದ್ದಾರೆ. ಭಾರತದಲ್ಲಿ ಕೆಜಿಗೆ ಸಕ್ಕರೆಗೆ 900 ರೂ ತಗುಲುವುದರಿಂದ ವಿದೇಶಕ್ಕೆ ರಪ್ತು ಮಾಡುವ ಯೋಜನೆಯನ್ನು ಮುಂದೆ ಹಾಕಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಿದರು.
ಮುಂದಿನ ದಿನದಲ್ಲಿ ಅಧಿಕ ನೀರಾ ಉತ್ಪಾದಿಸುವ ರೈತರ ಮನೆಗೆ ಕೆಎಂಎಫ್ ಮಾದರಿಯಲ್ಲಿ ವಾಹನ ಕಳುಹಿಸಿ ಸಂಗ್ರಹಿಸುವ ಕಾರ್ಯ ಮಾಡಲಾಗುವುದು. ಇದರ ಸಾಗಾಣೆ ಖರ್ಚನ್ನೂ ಸಂಘ ಭರಿಸಿ ರೈತರ ಖಾತೆಗೇ ಲೀಟರ್ ನೀರಾಕ್ಕೆ 60 ಖಾತೆಗೆ ಜಮೆ ಮಾಡಬಹುದಾಗಿದೆ. ಐಸ್ ಬಾಕ್ಸ್‌ಗೆ ಸದ್ಯ 1700 ರೂ ಇದ್ದು, ಫೆಡರೇಶನ್ ವಿತರಣೆಯ ವ್ಯವಸ್ಥೆಯನ್ನೂ ಮಾಡಲಾಗುವುದು. ಮರಹತ್ತಲು ಕಷ್ಟವಾಗುವುದನ್ನು ಪರಿಗಣಿಸಿ ಗಿಡ್ಡ ತಳಿಯ ತೆಂಗಿನ ಗಿಡಗಳ ಬೇಡಿಕೆಯನ್ನು ಇಡಲಾಗಿದೆ ಎಂದು ಹೇಳಿದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ತೆಂಗಿನ ಹುಡಿ ಹಾಗೂ ತೆಂಗಿನ ಎಣ್ಣೆ ತಯಾರಿ ಘಟಕಗಳೂ ಸದ್ಯದಲ್ಲೇ ಒಡ್ಡೂರು ಫಾರಮ್ಸ್ ನಲ್ಲಿ ಆರಂಭವಾಗಲಿದ್ದು, ಇದಕ್ಕೆ ಸುಮಾರು 30 ಸಾವಿರ ತೆಂಗಿನ ಅವಶ್ಯಕತೆ ಇದೆ. ಇದಕ್ಕೆ ವಾಹನಗಳನ್ನು ಕಳುಹಿಸಿ ತೆಂಗಿನ ಕಾಯಿ ಅತ್ಯಧಿಕ ದರದಲ್ಲಿ ಖರೀದಿ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ನೀರಾ ಘಟಕದಲ್ಲಿನ ಕೆಲಸಗಳಿಗಾಗಿ ಸುಮಾರು 80 ಲಕ್ಷ ಬಿಡುಗಡೆಯನ್ನೂ ಮಾಡಿತ್ತು. ಇದಾದ ಕೆಲವೇ ಸಮಯದಲ್ಲಿ ಘಟಕ ಬೀಗ ಹಾಕಿದ್ದು, ಇದನ್ನು ವಿರೋಧಿಸಿ ಹೋರಾಟಗಳನ್ನು ರೈತ ಸಂಘ ನಡೆಸಿದೆ ಎಂದು ಹೇಳಿದರು.
ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಬಂಟ್ವಾಳ ತಾಲೂಕು ಅಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುದೇಶ್ ಮೈಯ್ಯ, ಉಪಾಧ್ಯಕ್ಷ ಎನ್ ಕೆ ಇದಿನಬ್ಬ ಉಪಸ್ಥಿತರಿದ್ದರು.