bantwalnews.com report
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಕಳವು ಜಾಲ ನಿಧಾನವಾಗಿ ಮತ್ತೆ ಸಕ್ರಿಯವಾಗುತ್ತಿದೆಯೇ?
ಕಳೆದ ಕೆಲ ದಿನಗಳ ಹಿಂದೆ ಸಾಲೆತ್ತೂರು, ಮಂಗಳವಾರ ರಾತ್ರಿ ಸೌತಡ್ಕದಲ್ಲಿ ಗೋವುಗಳನ್ನು ಕದ್ದೊಯ್ದ ಪ್ರಕರಣ ಇದಕ್ಕೆ ಇಂಬು ನೀಡುವಂತಿದೆ.
ಮಂಗಳವಾರ ರಾತ್ರಿ ಪ್ರಸಿದ್ಧ ಕ್ಷೇತ್ರ ಸೌತಡ್ಕ ಗೋಶಾಲೆಯಿಂದ ನಾಲ್ಕು ಗೋವುಗಳನ್ನು ಕಳವು ಮಾಡಲಾಗಿದೆ.
ಮಂಗಳವಾರ ರಾತ್ರಿ ಸುಮಾರು 2 ಗಂಟೆಯ ಬಳಿಕ ಗೋಶಾಲೆಗೆ ನುಗ್ಗಿದ ಕಳ್ಳರು, ಮೂರು ಗಬ್ಬದ ದನ, ಒಂದು ಹೋರಿ ಕರುವನ್ನು ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರೆ. ಕಳೆದ ವರ್ಷ ಜನವರಿ 5ರಂದು ಇದೇ ರೀತಿ ದನಗಳನ್ನು ಕದ್ದುಕೊಂಡು ಹೋಗಲಾಗಿತ್ತು. ಸರಿಯಾಗಿ ಒಂದು ವರ್ಷ ಕಳೆದು ಹತ್ತು ದಿನಗಳಾದ ಬಳಿಕ ಮತ್ತೊಂದು ಕಳವು ಕೃತ್ಯ ನಾಗರಿಕರನ್ನು ಬೆಚ್ಚಿಬೀಳಿಸಿದೆ.
ಸೌತಡ್ಕ ದೇವಸ್ಥಾನ ಬಯಲು ಆಲಯವೆಂದೇ ಹೆಸರುವಾಸಿ. ಇಲ್ಲಿನ ಗಣಪತಿ ದೇವರನ್ನು ದರ್ಶನ ಮಾಡಲು ಊರ, ಪರವೂರಿನಿಂದ ಆಸ್ತಿಕರು ಆಗಮಿಸುತ್ತಾರೆ. ಇಲ್ಲಿ ಹಸುಗಳನ್ನು ಸಾಕಲೆಂದೇ ಗೋಶಾಲೆ ನಿರ್ಮಿಸಿ, ಕಳವು ಪ್ರಕರಣಗಳ ನಡೆಯದಂತೆ ರಕ್ಷಣೆಗಾಗಿ ಗನ್ ಮ್ಯಾನ್ ಗಳನ್ನೂ ನೇಮಿಸಲಾಗಿತ್ತು. ಸಿಸಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು.
ಆದರೆ ಎರಡೂ ಸಿಸಿ ಕ್ಯಾಮರಾಗಳು ಕಾರ್ಯಾಚರಿಸುತ್ತಿಲ್ಲ ಹಾಗೂ ಗನ್ ಮ್ಯಾನ್ ಇದ್ದರೂ ಗೋಕಳ್ಳತನ ಅವರ ಅರಿವಿಗೆ ಬಂದಿಲ್ಲ ಎಂಬುದು ವಿಪರ್ಯಾಸ. ಎಂಧು ಸ್ಥಳೀಯರು bantwalnews.com ಗೆ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ದನಗಳನ್ನು ಕದ್ದೊಯ್ಯಲಾಗಿತ್ತು.
ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.