ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಗ್ರಾಮ ಸಭೆ ಆಯೋಜಿಸಲು ಸರಕಾರ ಚಿಂತನೆ ನಡೆಸಬೇಕೆಂದು ಕೃಷಿಕರು ಒತ್ತಾಯಿಸಿದರು.
www.bantwalnews.com report
ಬಂಟ್ವಾಳ ತೋಟಗಾರಿಕಾ ಇಲಾಖೆ, ಮಂಚಿ ಕಾಮಧೇನು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ವತಿಯಿಂದ ಕೃಷಿಕ ವಿಶ್ವನಾಥ ನಾಯ್ಕ ಅವರ ತೋಟದಲ್ಲಿ ನಡೆದ ರೈತರಿಗೆ ಮಾಹಿತಿ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರು ವಿವಿಧ ಬೇಡಿಕೆಗಳನ್ನು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮುಂದಿಟ್ಟರು.
ಮಂಚಿ ಪರಿಸರದಲ್ಲಿ ನೀರ ಘಟಕವನ್ನು ಸ್ಥಾಪಿಸಿ, ನೀರ ಬೆಳೆಗಾರರನ್ನು ಪ್ರೋತ್ಸಾಹಿಸಬೇಕು. ವೈಜ್ಞಾನಿಕ ಮಾದರಿಯಲ್ಲಿ ತೆಂಗು ಬೆಳೆಸಬೇಕು. ಪ್ರತೀ ಹಳ್ಳಿಯಲ್ಲಿ ಇಲಾಖಾ ವತಿಯಿಂದ ರೈತ ಸಂಪರ್ಕ ಕಾರ್ಯಕ್ರಮ ಆಯೋಜಿಸಬೇಕು. ರೈತರ ಸಮಸ್ಯೆಗೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸ್ಪಂದಿಸಬೇಕೆಂದು ಕಾಮಧೇನು ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಅಧ್ಯಕ್ಷ ಉಮ್ಮರ್ ಮಂಚಿ ಅವರು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ರೈತರ ಮನೆಯಂಗಳದಲ್ಲಿ ರೈತರ ಸಂವಾದ ಏರ್ಪಡಿಸಲಾಗಿದ್ದು, ವಿಶಿಷ್ಟವಾದ ಪ್ರಯತ್ನ. ರಾಜ್ಯ ಮಟ್ಟದಲ್ಲೇ ಈ ಕಾರ್ಯಕ್ರಮ ಗಮನ ಸೆಳೆದಿದೆ ಎಂದರು. ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸಹಾಯಕ ತೋಟಗಾರಿಕಾ ನಿರ್ದೇಶಕ ದಿನೇಶ್, ಸೊಸೈಟಿಯ ಜತೆ ಕಾರ್ಯದರ್ಶಿ ಬದ್ರುದ್ಧೀನ್, ಮುಲ್ಕಿ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಮತ್ತಯ್ಯ,
ಮಾಜಿ ತಾ.ಪಂ. ಸದಸ್ಯ ಡಿ.ಕೆ.ಹಂಝ ಉಪಸ್ಥಿತರಿದ್ದರು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರೇಶ್ಮಾ ರೈತರು ಎದುರಿಸುತ್ತಿರುವ ಸವಾಲು, ಸಮಸ್ಯೆ ಹಾಗೂ ಬೆಳೆಗಳ ವಿಸ್ತೃತ ಮಾಹಿತಿ ನೀಡಿದರು. ಸ್ಥಳೀಯ ಜನ ಪ್ರತಿನಿಧಿಗಳು, ಪ್ರಗತಿಪರ ಕೃಷಿಕರು ಸಂವಾದದಲ್ಲಿ ಪಾಲ್ಗೊಂಡರು.
ಅಮ್ಮುಂಜೆ ಅಬೂಬಕ್ಕರ್ ಕಾರ್ಯಕ್ರಮ ನಿರೂಪಿಸಿದರು. ರೈತರಿಗೆ ಕೃಷಿ ಸೌಲಭ್ಯವನ್ನು ವಿತರಿಸಲಾಯಿತು. ಸೊಸೈಟಿಯ ಕಾರ್ಯದರ್ಶಿ ದಿವಾಕರ ನಾಯಕ್ ವಂದಿಸಿದರು.