ತೆಂಕುತಿಟ್ಟಿನ ಸ್ಟಾರ್ ಭಾಗವತ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಟ್ಲ ಸತೀಶ ಶೆಟ್ಟಿ ಅವರಿಗೆ ಈ ಬಾರಿಯ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯ ಗೌರವ.
www.bantwalnews.com report
ಧಾರ್ಮಿಕ, ಯಕ್ಷಗಾನ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ಧರ್ಮದರ್ಶಿ ದಿ.ರಾಘವೇಂದ್ರ ಭಟ್ ನೆನಪಲ್ಲಿ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ಜ.21ರಂದು ಶ್ರೀಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ, ಹಾಸ್ಯ ಕಲಾವಿದ ರಮೇಶ್ ಭಂಡಾರಿ, ಶ್ರೀದುರ್ಗಾ ಮಕ್ಕಳ ಮೇಳ ಸಂಸ್ಥಾಪಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಮೊದಲಾದವರಿಗೆ ಈ ಪ್ರಶಸ್ತಿ ಸಂದಿದೆ.
21 ರಂದು ರಾತ್ರಿ 7.30 ರಿಂದ ಯಕ್ಷ ದೃಶ್ಯ ಕಾವ್ಯ ನಡೆಯಲಿದೆ. ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ, ವಾದಿರಾಜ ಕಲ್ಲೂರಾಯ ಸಂಯೋಜನೆಯಲ್ಲಿ ಗಿರೀಶ್ ರೈ ಕಕ್ಕೆಪದವು, ಹೆಬ್ರಿ ಗಣೇಶ್, ಅಕ್ಷಯ ಮಾರ್ನಾಡ್, ಲೋಕೇಶ್ ಮುಂಚೂರು, ಶ್ರೀರಮಣ ಆಚಾರ್ ದೃಶ್ಯ, ಕಾವ್ಯಕ್ಕೆ ಜೀವ ತುಂಬಲಿದ್ದಾರೆ. ರಾತ್ರಿ 10.30ರಿಂದ ಕುಂದಾಪು ಕುಳ್ಳಪ್ಪು ತಂಡದಿಂದ ನಗೆ ನಾಟಕ ಮೂರು ಮುತ್ತು ಪ್ರದರ್ಶನಗೊಳ್ಳಲಿದೆ. ಜ.22ರಂದು ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ, ರಕ್ತೇಶ್ವರಿ, ವ್ಯಾಘ್ರಚಾಮುಂಡಿ ನೇಮ, ಅನ್ನಸಂತರ್ಪಣೆ ನಡೆಯಲಿದೆ.
ಮೇರು ಭಾಗವತ, ಮೇರು ವ್ಯಕ್ತಿತ್ವ
ತನ್ನ ಎಳೆಯ ಪ್ರಾಯದ ಸುಮಧುರ ಕಂಠ ಮಾಧುರ್ಯದಿಂದ ಅಪಾರ ಯಕ್ಷಗಾನ ಪ್ರೇಮಿಗಳ ಮೆಚ್ಚುಗೆಯನ್ನು ಪಡೆದಿರುವ ಕಿರಿಯ ವಯಸ್ಸಿನ ಭಾಗವತ ಪಟ್ಲ ಸತೀಶ ಶೆಟ್ಟಿ.
ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿರುವ ತೆಂಕು-ಬಡಗಿನ ಅಶಕ್ತ ಯಕ್ಷ ಗಾನ ಕಲಾವಿದರಿಗೆ ಮುಂದಿನ ಮೂರು ವರ್ಷದೊಳಗೆ 7ರಿಂದ 10 ಕೋಟಿ ರೂ. ವೆಚ್ಚದಲ್ಲಿ 100 ಮನೆಗಳನ್ನು ಯಕ್ಷ ಧ್ರುವ ಪಟ್ಲ ಫೌಂಡೇಷನ್ ಮೂಲಕ ನೀಡಲು ಮುಂದಾಗಿದ್ದಾರೆ.
ಅಶಕ್ತ ಕಲಾವಿದರ ಮಕ್ಕಳ ಶಿಕ್ಷ ಣಕ್ಕೆ ವಿದ್ಯಾರ್ಥಿ ವೇತನ, ಕಲಾವಿದರಿಗೆ ಆರೋಗ್ಯ ವಿಮೆ, ನಿವೃತ್ತ ಕಲಾವಿದರಿಗೆ ಪಿಂಚಣಿ ಮುಂತಾದ ಯೋಜನೆಯನ್ನು ಫೌಂಡೇಷನ್ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದ್ದಾರೆ. ಈಗಾಗಲೇ ಅಶಕ್ತ ಕಲಾವಿದರಿಗೆ ಹಣಕಾಸು ನೆರವು ನೀಡುವ ಮೂಲಕ ಕಲಾವಿದರ ಪೋಷಕರಾಗಿದ್ದಾರೆ ಅವರ ಕಲಾ ಪೋಷಣೆ ಮತ್ತು ಕಲಾ ಸೇವೆಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಪಟ್ಲ ಸತೀಶ ಶೆಟ್ಟರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಗೆನಾಡುವಿನಲ್ಲಿರುವ ಪಟ್ಲ ಮಹಾಬಲ ಶೆಟ್ಟಿ ಮತ್ತು ಲಲಿತಾ ಶೆಟ್ಟಿ ದಂಪತಿ ಮಗ. ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಾಗಲೆ ಹಿರಿಯ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಬಳಿ ಯಕ್ಷಗಾನ ಭಾಗವತಿಕೆ, ಚೆಂಡೆ, ಮದ್ದಲೆಯನ್ನು ಕಲಿತರು. ಯಕ್ಷಗಾನ ಛಂದಸ್ಸನ್ನು ಸೀಮಂತೂರು ನಾರಾಯಣ ಶೆಟ್ಟಿ ಅವರಲ್ಲಿ, ಕರ್ನಾಟಕ ಸಂಗೀತವನ್ನು ರೋಶನ್ ಕುಮಾರ್ ಅವರಲ್ಲಿ ಕಲಿತಿದ್ದಾರೆ. ಹನ್ನೆರಡು ವರ್ಷಗಳಿಂದ ಕಟೀಲು ಮೇಳದಲ್ಲಿ ಭಾಗವತರಾಗಿ, 5ನೇ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತಿದ್ದಾರೆ.