ಮಕ್ಕಳ ಮಾತು

ಆ ಗಿಳಿಪಾಠ ನನಗೆ ಒಪ್ಪಿಸಿದಳು…

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಮಕ್ಕಳ ಗ್ರಾಮಸಭೆಯಲ್ಲಿಯೇ ಮಕ್ಕಳ ಭಾಗವಹಿಸುವ ಹಕ್ಕನ್ನು ಗ್ರಾಮಪಂಚಾಯತ್ ಕಸಿದುಕೊಂಡಿದೆ ಎಂದು ನಾನು ನೇರವಾಗಿ ಹೇಳಿದ್ದು, ಕೆಲವರ ಕಣ್ಣನ್ನು ಕೆಂಪಾಗಿಸಿತು.

  • ಮೌನೇಶ ವಿಶ್ವಕರ್ಮ

www.bantwalnews.com ಅಂಕಣ – ಮಕ್ಕಳ ಮಾತು

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒

 ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ, ದೊಡ್ಡವರಿಗೆ ಅರಿವಾಗಬೇಕು, ಮಕ್ಕಳೂ ಕೂಡ ಸರ್ಕಾರದ ಸೌಕರ್ಯಗಳನ್ನು ಕೇಳಿ ಪಡೆಯುವ ಅರ್ಹತೆ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯಬೇಕು ಎನ್ನುವ ಮಹದೋದ್ದೇಶವನ್ನು ಇರಿಸಿಕೊಂಡು ಗ್ರಾಮಪಂಚಾಯತ್ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಗುತ್ತಿದೆ. ಈ ಮೂಲಕ ಸರ್ಕಾರ ಮಕ್ಕಳ ಹಕ್ಕುಗಳಿಗೆ ಗೌರವ ಕೊಡುವಂತಾ ಕೆಲಸ ಮಾಡುತ್ತಿದೆ.

ಒಂದು ಗ್ರಾಮಪಂಚಾಯತ್‌ನಮಕ್ಕಳ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಅವಕಾಶ ನನಗೆ ಒದಗಿಬಂದಿತ್ತು. ಅಲ್ಲಿ ನಡೆದ ವಿದ್ಯಮಾನಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಬೆಳಿಗ್ಗೆ 10 ಗಂಟೆಗೆಂದು ನಿಗದಿಯಾಗಿದ್ದ  ಮಕ್ಕಳ ಗ್ರಾಮಸಭೆ 11 ಗಂಟೆ ಕಳೆದರೂ ಪ್ರಾರಂಭಗೊಂಡಿರಲಿಲ್ಲ. ಯಾಕೆಂದರೆ ಸಭೆಗೆ ಅಗತ್ಯವಾಗಿ ಬೇಕಾಗಿದ್ದ ಮಕ್ಕಳೇ ಬಂದಿರಲಿಲ್ಲ.

ಅಂತೂ ಇಂತೂ ಕೊನೆಗೆ ಹತ್ತಿರದ ಖಾಸಗಿ ಶಾಲೆಯೊಂದರ ಬೆರಳೆಣಿಕೆಯ ಮಕ್ಕಳನ್ನು ಸಭೆಗೆ ಆ ಶಾಲೆಯ ಟೀಚರ್ ಕರೆದುಕೊಂಡು ಬಂದರು. ಆ ಬಳಿಕ ಬಂದ ಗ್ರಾ.ಪಂ.ಅಧ್ಯಕ್ಷರು ಸಭೆ ಆರಂಭಿಸಲು ಸೂಚಿಸಿದರು. ಕೊನೆಗೂ 11.15 ಸುಮಾರಿಗೆ ಸಭೆ ಆರಂಭವಾಯಿತು.

ಸ್ವಾಗತದ ಬಳಿಕ ಮಕ್ಕಳ ಹಕ್ಕುಗಳ ಬಳಿಕ ಮಾಹಿತಿ ನೀಡಿ ಮಕ್ಕಳ ಬೇಡಿಕೆಗಳ ಬಗೆಗಿನ ಚರ್ಚೆಗೆ ಅವಕಾಶ ಒದಗಿಸಿ ಕೊಡುವ ಜವಬ್ದಾರಿ ನನ್ನದಾಗಿತ್ತು. ಮಕ್ಕಳ ಹಕ್ಕುಗಳ ಅಧಿನಿಯಮ ಒದಗಿಸಿದ ಮಕ್ಕಳ ಹಕ್ಕುಗಳ ಬಗ್ಗೆ ಹೇಳುತ್ತಾ ಭಾಗವಹಿಸುವ ಹಕ್ಕು ಕುರಿತಾಗಿ ಒತ್ತಿ ಹೇಳಿದೆ. ಯಾಕೆಂದರೆ ಅಂದಿನ ಸಭೆಯಲ್ಲಿ ಗ್ರಾ.ಪಂ.ವ್ಯಾಪ್ತಿಯ 3 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿರಲಿಲ್ಲ. ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದ್ದ ಸಭೆಯಲ್ಲಿ ಗ್ರಾ.ಪಂ.ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಅತಿಥಿಗಳು, ಶಿಕ್ಷಕಿಯರು ಸೇರಿದಂತೆ ಹಿರಿಯರೇ ಹೆಚ್ಚು ಸಂಖ್ಯೆಯಲ್ಲಿದ್ದರು. ಹೆಚ್ಚು ಮಕ್ಕಳು ಭಾಗವಹಿಸದಿರುವುದಕ್ಕೆ  ಪಂಚಾಯತ್ ನಿರ್ಲಕ್ಷ್ಯವೇ ಕಾರಣ, ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಮಕ್ಕಳ ಗ್ರಾಮಸಭೆಯಲ್ಲಿಯೇ ಮಕ್ಕಳ ಭಾಗವಹಿಸುವ ಹಕ್ಕನ್ನು ಗ್ರಾಮಪಂಚಾಯತ್ ಕಸಿದುಕೊಂಡಿದೆ ಎಂದು ನಾನು ನೇರವಾಗಿ ಹೇಳಿದ್ದು, ಕೆಲವರ ಕಣ್ಣನ್ನು ಕೆಂಪಾಗಿಸಿತು.

ಗ್ರಾ.ಪಂ.ಆಡಳಿತ ಹಾಗೂ ಶಾಲಾಶಿಕ್ಷಕರ ನಡುವಿನ ಸಂವಹನ ಕೊರತೆಯಿಂದಾಗಿಯೇ ಅಂದಿನ ಸಭೆಯಲ್ಲಿ ನೂರಾರು ಮಕ್ಕಳು ಭಾಗವಹಿಸುವ ಅವಕಾಶದಿಂದ ವಂಚಿತರಾದದ್ದು ಎಂಬುದು ನನ್ನ ಅರಿವಿಗೆ ಬಂತು. ಹಾಗಾಗಿ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಪಂಚಾಯತ್ ನ ಪಾತ್ರವೇನೆಂದು ವಿವರಿಸಿ ಹೇಳಿದೆ.  ಗ್ರಾ.ಪಂ.ವ್ಯಾಪ್ತಿಯ  ಜನಸಂಖ್ಯೆ ಎಷ್ಟು..? ಎಂದು ನಾನು ಗ್ರಾ.ಪಂ.ಅಧಿಕಾರಿಯಲ್ಲಿ ಪ್ರಶ್ನಿಸಿದಾಗ ಸಾವಿರದ ಲೆಕ್ಕಾಚಾರ ಕೊಟ್ಟರು. ಮಕ್ಕಳೂ ಅದರಲ್ಲಿ ಸೇರಿದ್ದಾರಾ..? ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ. ಹಾಗಿದ್ದರೆ ಪಂ.ವ್ಯಾಪ್ತಿಯ ಮಕ್ಕಳ ಸಂಖ್ಯೆ ಎಷ್ಟು..? ಎಂದಾಗ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಅಂದಾಜು ಸಂಖ್ಯೆಯನ್ನು ಲೆಕ್ಕಹಾಕಿ ನನ್ನ ಮುಂದಿಟ್ಟರು. ಮತ್ತೂ ಪಟ್ಟು ಬಿಡಲಿಲ್ಲ ನಾನು.. ಹೌದು ನೀವು ಕೊಡುತ್ತಿರುವುದು ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಲೆಕ್ಕಾಚಾರ. ಗ್ರಾ.ಪಂ.ವ್ಯಾಪ್ತಿಯಲ್ಲಿದ್ದುಕೊಂಡೇ ಶಾಲೆಗೆ ಬಾರದ ಮಕ್ಕಳು, ಬೇರೆ ಗ್ರಾಮದ ಶಾಲೆಗೆ ಹೋಗುವ ಮಕ್ಕಳು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ನಿಮ್ಮ ಲೆಕ್ಕಕ್ಕೆ ಬರುದಿಲ್ವಾ.. ಎಂದಾಗ ಅವರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಯಿತು. ಮಕ್ಕಳ ಗ್ರಾಮಸಭೆಯನ್ನು ಕಾಟಾಚಾರಕ್ಕೆ ನಡೆಸುವುದು ಬೇಕಿಲ್ಲ, ಸರ್ಕಾರದ ಆಶಯ, ಮಕ್ಕಳ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಂ.ಆಡಳಿತ ಯೋಚಿಸಬೇಕು, ಅವಕಾಶ ಕಲ್ಪಿಸಬೇಕು , ಮುಂದಿನ ಸಭೆಯನ್ನಾದರೂ ಅರ್ಥಪೂರ್ಣವಾಗಿ ನಡೆಸಿ ಎಂದು ಹೇಳುತ್ತಾ ಚರ್ಚೆಗೆ ಅವಕಾಶ ಒದಗಿಸಿದೆ.

ಮಕ್ಕಳು ತಮ್ಮ ನಿತ್ಯದ ವಾತಾವರಣದಲ್ಲಿ ಕಂಡು ಬಂದ ಸಮಸ್ಯೆ, ಘಟನೆಗಳ ಬಗ್ಗೆ  ಅಭಿಪ್ರಾಯ ಬೇಡಿಕೆಗಳನ್ನು ಮುಂದಿಡಿ ಎಂದು ನಾನು ಹೇಳುತ್ತಿದ್ದಂತೆಯೇ. ಆ ಮಕ್ಕಳ ಟೀಚರ್ ಓರ್ವ ವಿದ್ಯಾರ್ಥಿನಿಯನ್ನು ಕೈ ಸನ್ನೆ ಮಾಡಿ ತನ್ನ ಬಳಿಗೆ ಕರೆದರು. ನನ್ನನ್ನು ಬೊಟ್ಟು ಮಾಡಿ ಅವರು ಆಕೆಯಲ್ಲಿ ಹೇಳಿದರು. ಮಕ್ಕಳ ಹಕ್ಕುಗಳ ಬಗ್ಗೆ ಹೇಳಿದಿರಿ, ನಮ್ಮ ಕರ್ತವ್ಯಗಳ ಬಗ್ಗೆ ಹೇಳಿ ಎಂದು ಅವರಲ್ಲಿ ಹೇಳು ಎಂದು. ಪಾಪ ಆ ವಿದ್ಯಾರ್ಥಿನಿ ಆ ಗಿಳಿಪಾಠವನ್ನು ನನಗೆ ಒಪ್ಪಿಸಿದಳು. ಆಗಂತೂ ನಾನು ಸಹನೆ ಕಳೆದುಕೊಂಡೆ. ಆದರೂ ಸಮಾಧಾನಪಟ್ಟುಕೊಂಡು ಹೇಳಿದೆ.

ಮಕ್ಕಳು ಶಾಲೆಗೆ ಬರುತ್ತಿದ್ದಾರೆ ಅಂದರೆ ಅವರು ಅವರ ಕರ್ತವ್ಯಗಳನ್ನು ಅರಿತುಕೊಂಡಂತೆಯೇ ಸರಿ. ಪಾಠದ ಹೆಸರಿನಲ್ಲಿ, ಆಟದ ಹೆಸರಿನಲ್ಲಿ ಮಕ್ಕಳ ಸ್ವಯಂ ಶಿಸ್ತು ಹೇಳಿಕೊಡುವ ಶಿಕ್ಷಕರು ಪರೋಕ್ಷವಾಗಿ ಮಕ್ಕಳ ಕರ್ತವ್ಯದ ಬಗ್ಗೆ ತಿಳಿಸಿದಂತೆಯೇ. ಮಕ್ಕಳಾಗಿ ತನ್ನ ಕರ್ತವ್ಯಗಳನ್ನು ಶ್ರದ್ದೆಯಿಂದ ನಿರ್ವಹಿಸುವ ಮಕ್ಕಳಿಗೆ ಎಲ್ಲಾ ಹಕ್ಕುಗಳು ತಾನಾಗಿ ಒದಗಿಬರುತ್ತದೆ, ಮತ್ತು ಹಕ್ಕುಗಳ ಉಲ್ಲಂಘನೆಯಾದಲ್ಲಿ ಕೇಳುವ ಅರ್ಹತೆ, ಧೈರ್ಯ ಎಲ್ಲಾ ಬರುತ್ತದೆ ಎಂಬುದನ್ನು ಸಣ್ಣಕತೆಯ ಮೂಲಕ ವಿವರಿಸಿದೆ.

ಭಾಗವಹಿಸಿದ್ದ ಮಕ್ಕಳಂತೂ ಈ ಎಲ್ಲಾ ಗೊಂದಲಗಳ ಬಗ್ಗೆ ಅರಿವಿಲ್ಲದಂತೆ ಉತ್ಸಾಹದಿಂದ ಭಾಗವಹಿಸಿದ್ದರು. ರಸ್ತೆಗೆ ಡಾಂಬರು ಹಾಕುವಂತೆ, ಶಾಲೆಗೆ ಆವರಗೋಡೆ ನಿರ್ಮಿಸುವಂತೆ, ಅಕ್ಷರದಾಸೋಹ ಕೊಠಡಿಗೆ ತಗಡು ಶೀಟು ಹಾಕುವಂತೆ, ದಾರಿದೀಪ ವ್ಯವಸ್ಥೆ ಸರಿಪಡಿಸುವಂತೆ, ಮಳೆಗಾಲದಲ್ಲಿ ಹಂಚಿನಿಂದ ನೀರು ಸೋರಿಕೆಯಾಗುವುದಾಗಿ ಮಕ್ಕಳು ತಮ್ಮ ಪರಿಸರದಲ್ಲಿನ ಸಮಸ್ಯೆಗಳನ್ನು ಸಭೆಯಲ್ಲಿ ತೆರೆದಿಟ್ಟರು. ಧನ್ಯವಾದದೊಂದಿಗೆ ಸಭೆ ಮುಕ್ತಾಯಗೊಂಡಿತು.

ಅಲ್ಲಿಂದ ವಾಪಾಸು ಬರುವಾಗ ಆ ಶಿಕ್ಷಕಿಯಲ್ಲಿ ಹೇಳಿದೆ ಮೇಡಂ ಇದು ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸುವ ಸಭೆ, ಮಕ್ಕಳಿಗೆ ಯಾವಾಗ್ಲೂ ನಾವು ಬುದ್ದಿ ಹೇಳಬೇಕಾಗಿಲ್ಲ. ಮಕ್ಕಳು ನಮಗಿಂತ ಬುದ್ದಿವಂತರಿರ್‍ತಾರೆ. ಇಲ್ಲಿ ಅವರ ಹಕ್ಕುಗಳಿಗೇ ಮೊದಲನೇ ಪ್ರಾಶಸ್ತ್ಯ. ಶಿಕ್ಷಣ-ಕಲಿಕೆಯ ಹೆಸರಿನಲ್ಲಿ ನಾವು-ನೀವು ಮಕ್ಕಳಿಗೆ ಹೇಳುತ್ತಿರುವುದು ಕರ್ತವ್ಯದ ಪಾಠವನ್ನೇ ವಿನಃ ಬೇರೇನಲ್ಲ  ಅಷ್ಟಕ್ಕೇ ಅವರ ಮುಖ ಸಣ್ಣಗಾಯಿತು.

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಬರೆಯಿರಿ : bantwalnews@gmail.com

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma

Recent Posts