bantwalnews.com report
ಜಿಲ್ಲೆಯ ಎಲ್ಲ ಎಪಿಎಂಸಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿರುವುದು ಸಂತಸ ತಂದಿದೆ. ತನ್ನ ವಿಧಾನಸಭಾ ಕ್ಷೇತ್ರವಾದ ಬಂಟ್ವಾಳದಲ್ಲಿ ಕಾಂಗ್ರೆಸಿಗೆ ಹಿಂದಿಗಿಂತ ಹೆಚ್ಚು ಎರಡು ಸ್ಥಾನ ಬಂದಿರುವುದು ಖುಷಿ ಕೊಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಎಪಿಎಂಸಿ ಚುನಾವಣೆಯ ಫಲಿತಾಂಶದ ಬಗ್ಗೆ ಬಂಟ್ವಾಳ ತಾಲೂಕಿನ ಅರಳ ಶ್ರೀ ಗರುಡ ಮಹಕಾಳಿ ದೇವಸ್ಥಾನದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು, ಶೀಘ್ರದಲ್ಲೇ ಬಂಟ್ವಾಳ ಎಪಿಎಂಸಿಗೂ ನಾಮನಿರ್ದೇಶಿತ ಸದಸ್ಯರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಇದೇ ವೇಳೆ ಅಲ್ಲಿದ್ದ ಸಂಸದ ನಳೀನ್ ಕುಮಾರ್ ಕಟೀಲು ಅವರು ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ ಬಂಟ್ವಾಳ ಸಹಿತ ಜಿಲ್ಲೆಯ ಎಲ್ಲಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮಬಲದ ಜಯಭೇರಿ ಗಳಿಸಿದ್ದಾರೆ. ವಿಜೇತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಬಿ.ಸಿ.ರೋಡ್ ಸಮೀಪದ ಮೊಡಂಕಾಪಿನ ಇನ್ಫೆಂಟ್ ಜೀಸಸ್ ಪ್ರೌಢ ಶಾಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ನಡೆದಿತ್ತು.
ತಹಶೀಲ್ದಾರ್ ಪುರಂದರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಮತ ಎಣಿಕೆ ಕಾರ್ಯ ನಡೆಸಿದರು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಕಾರ್ಯವು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ಫಲಿತಾಂಶ ಹೊರ ಬಿದ್ದಿತು.
ಶೀಘ್ರದಲ್ಲೇ ಎಪಿಎಂಸಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕವಾಗುವ ಸಾಧ್ಯತೆ ಇದೆ. ಎಪಿಎಂಸಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನದ ಹಕ್ಕು ಹೊಂದಿರುವುದರಿಂದ ಅಧಿಕಾರ ಕಾಂಗ್ರೆಸ್ ಬೆಂಬಲಿತರ ಪಾಲಾಗುವುದು ನಿಚ್ಚಳ.