ವಿಶೇಷ ವರದಿ

ಕೃಷಿಕ ಮತದಾರರಿಗೆ ಎಪಿಎಂಸಿ ಬೇಡವಾಯಿತೇ?

  • ಶೇ.44.85ರಷ್ಟು ಮತದಾನ
  • ಅರ್ಧದಷ್ಟು ಮತದಾರರು ಬರಲೇ ಇಲ್ಲ
  • ಕೃಷಿಕರಿಗೆ ಸಮಿತಿ ಬೇಡವಾಯಿತೇ?
  • ವರ್ತಕರಿಗಷ್ಟೇ ಎಪಿಎಂಸಿಯಲ್ಲಿ ಆಸಕ್ತಿ
  • ಸಂಕ್ರಾಂತಿ ಶುಭದಿನ ಎಪಿಎಂಸಿ ಕುತೂಹಲಕ್ಕೆ ತೆರೆ

ಈ ಬಾರಿ ಕಾಂಗ್ರೆಸ್ಸೋ, ಬಿಜೆಪಿಯೋ….

ರಾಜಕೀಯ ಚಿಹ್ನೆಯಡಿ ಸ್ಪರ್ಧಿಸದಿದ್ದರೂ ಎಪಿಎಂಸಿ ಚುನಾವಣೆಯಲ್ಲಿ ಪಕ್ಷಗಳ ಹಾಗೂ ಬೆಂಬಲಿಗರ ಕುತೂಹಲ ಗರಿಗೆದರಿದೆ. ಶನಿವಾರ ಫಲಿತಾಂಶ.

bantwalnews.com special

 ಅಂತೂ ಬಂಟ್ವಾಳ ತಾಲೂಕಿನಲ್ಲಿ ಎಪಿಎಂಸಿ ಚುನಾವಣೆ (ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಮುಗಿದಿದೆ. ಗೆದ್ದ ಮೇಲೆ ಅಭ್ಯರ್ಥಿಗಳು ಏನು ಮಹಾಸಾಧನೆ ಮಾಡುತ್ತಾರೋ ಎಂಬುದು ಮುಂದಿನ ಮಾತು. ಆದರೆ ಗುರುವಾರ ಸಂಜೆಯ ಹೊತ್ತಿಗೆ ಮತಪೆಟ್ಟಿಗೆಗಳು ಭದ್ರವಾಗಿ ಎಣಿಕೆಗಾಗಿ ಕಾದು ಕುಳಿತಿವೆ. ಕಾಂಗ್ರೆಸ್ ಬೆಂಬಲಿತರು ಗೆಲ್ಲಬಹುದು ಎಂಬ ಲೆಕ್ಕಾಚಾರದ ನಡುವೆಯೇ ಗೆಲುವಿನ ಆಸೆ ಬಿಜೆಪಿ ಬೆಂಬಲಿತರಿಗೂ ಇದೆ. ಒಟ್ಟು 22,492 ಮಂದಿ ಇವರ ಭವಿಷ್ಯ ಬರೆದಾಗಿದೆ.

ಬಂಟ್ವಾಳ ಎಪಿಎಂಸಿ ಒಟ್ಟು 50167 ಮತದಾರರನ್ನು ಹೊಂದಿದ್ದು ಈ ಪೈಕಿ 22497 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 16186 ಮಂದಿ ಪುರುಷರು ಹಾಗೂ 6311 ಮಂದಿ ಹೆಂಗಸರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಬಂಟ್ವಾಳ ಎಪಿಎಂಸಿ 12 ಕ್ಷೇತ್ರಗಳನ್ನು ಹೊಂದಿದ್ದು 11 ಕೃಷಿಕರ ಕ್ಷೇತ್ರದಲ್ಲಿ 45.02 ಶೇಕಡ ಹಾಗೂ ವರ್ತಕರ ಕ್ಷೇತ್ರಕ್ಕೆ 76.85 ಶೇಕಡಾ ಮತದಾನವಾಗಿದೆ.

ಶನಿವಾರ ಮತ ಎಣಿಕೆ ಕಾರ್ಯ ನಡೆಯಲಿದ್ದು ಮೊಡಂಕಾಪಿನ ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಇರಿಸಲಾಗಿದೆ.

ವರ್ತಕರಿಗೆ ಬೇಕು, ಕೃಷಿಕರಿಗೆ ಬೇಡ

ಚುನಾವಣೆಯಲ್ಲಿ ಮತದಾನವಾದ ಲೆಕ್ಕಾಚಾರಗಳನ್ನೇ ಗಮನಿಸಿದರೆ, ಕೃಷಿಕ ಮತದಾರ ಮತಗಟ್ಟೆಗೆ ಬಂದಿಲ್ಲ. ಆದರೆ ವರ್ತಕರ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಕೃಷಿಕನಿಗೆ ಎಪಿಎಂಸಿ ಏನೂ ಉಪಯೋಗವಿಲ್ಲ, ಕೇವಲ ಅಧಿಕಾರ ಮೆರೆಯಲಷ್ಟೇ ಎಂಬ ಭಾವನೆ ಬೇರೂರಿತೇ ಎಂಬ ಸಂಶಯ ಮೂಡುವಂತೆ ಮತದಾನ ಪ್ರಕ್ರಿಯೆ ನಡೆಯಿತು.

ಎರಡೂ ಪಕ್ಷಗಳ ನೇತಾರರು ಬೂತು ಬೂತು ಸಂಚಾರ ನಡೆಸಿದರೂ ಕಾರ್ಯಕರ್ತರಲ್ಲೂ ತೀವ್ರ ಉತ್ಸಾಹ ಕಂಡುಬರಲಿಲ್ಲ.  

ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು.
ಕ್ಷೇತ್ರಗಳು ಹಾಗು ಕಣದಲ್ಲಿರುವವರ ವಿವರ ಹೀಗಿವೆ.

1. ಸಂಗಬೆಟ್ಟು : ಪದ್ಮರಾಜ ಬಲ್ಲಾಳ ಮಾವಂತೂರು ಮತ್ತು ವಸಂತ ಕುಮಾರ ಅಣ್ಣಳಿಕೆ

2. ಚನ್ನೈತೋಡಿ : ಭಾರತಿ ಎಸ್. ರೈ ಪಡಂತರಕೋಡಿ ಮತ್ತು ಮಲ್ಲಿಕಾ ಅಜಿತ್ ಶೆಟ್ಟಿ.

3. ಅಮ್ಟಾಡಿ :ದಿವಾಕರ ಪಂಬದಬೆಟ್ಟು, ರಮೇಶ ಪೂಜಾರಿ ಬಟ್ಟಾಜೆ.

4. ಕಾವಳಮೂಡೂರು : ವಿಶ್ವನಾಥ ಸಾಲಿಯಾನ್ ಬಿತ್ತ, ಹರಿಶ್ಚಂದ್ರ ಪೂಜಾರಿ ಕಜೆಕಾರು.

5. ಕೊಳ್ನಾಡು ಬಿ.ಚಂದ್ರಶೇಖರ ರೈ, ಯೋಗೀಶ ಆಳ್ವ ಪುದ್ದೋಟು.

6. ಅಳಕೆ: ಗೀತಾಲತಾ ಟಿ.ಶೆಟ್ಟಿ, ಕೆ.ಭವಾನಿ ರೈ.

7. ಕೆದಿಲ ಜಗದೀಶ ಡಿ, ಸುಂದರ ನಾಯ್ಕ.

8. ಮಾಣಿಅಭ್ಯರ್ಥಿಗಳು: ಬಿ.ನೇಮಿರಾಜ ರೈ, ಬಾಲಕೃಷ್ಣ ಆಳ್ವ.

9. ಕಡೇಶ್ವಾಲ್ಯ: ಚಂದ್ರಶೇಖರ ಪೂಜಾರಿ, ಆರ್. ಚೆನ್ನಪ್ಪ ಕೋಟ್ಯಾನ್.

10. ಪಾಣೆಮಂಗಳೂರು  ಅರವಿಂದ ಭಟ್, ಕೆ. ಪದ್ಮನಾಭ ರೈ.

11. ತುಂಬೆ  ಚಂದ್ರಹಾಸ, ಪದ್ಮನಾಭ ನರಿಂಗಾನ, ವಿಠಲ ಸಾಲ್ಯಾನ್.

12. ವರ್ತಕರ ಕ್ಷೇತ್ರ  ಬಾಲಕೃಷ್ಣ ಆಳ್ವ, ಎಸ್.ಎಂ.ಹುಸೈನ್.

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.