www.bantwalnews.com report
ಇನ್ನು ಪ್ರತಿದಿನ ಬೆಳಗ್ಗೆ ಪುತ್ತೂರು ಪರಿಸರದ ಜನರಿಗೆ ತಮ್ಮೂರ ವಿಚಾರಗಳನ್ನು 90.8 ಎಫ್.ಎಂ. ಮೂಲಕ ಕೇಳುವ ಅವಕಾಶ. ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಅನ್ನು ಗುರುವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಮೂಲಕ ಜನಮನ ತಲುಪುತ್ತಿರುವಂತೆಯೇ ಪುತ್ತೂರು ಸುತ್ತಮುತ್ತಲಿನ ಮಂದಿಯ ಮನದಾಳದ ಮಾತು ಪಾಂಚಜನ್ಯದ ಮೂಲಕ ಮೊಳಗಲಿ ಈ ಸಂದರ್ಭ ಅವರು ಅಭಿಪ್ರಾಯಪಟ್ಟರು.
ಪಾಂಚಜನ್ಯದ ಹೆಸರನ್ನು ಕೇಳುವಾಗ ಭಗವಾನ್ ಶ್ರೀಕೃಷ್ಣ ಅಂತರಂಗಕ್ಕೆ ಬರುತ್ತಾನೆಅದನ್ನು ಕೇಳುವಾಗ ದೈವಿಕವಾದ ಅನುಭವವೊಂದು ನಮ್ಮದಾಗುತ್ತದೆ. ಹೀಗಿರುವಾಗ ಅದೇ ಹೆಸರಿನಲ್ಲಿ ಬಾನುಲಿ ಕೇಂದ್ರವೊಂದನ್ನು ಪ್ರಾರಂಭಿಸಿರುವುದು ರೊಮಾಂಚನಕಾರಿ ಸಂಗತಿ, ಕೇಂದ್ರದ ಸಿಗ್ನೇಚರ್ ಟ್ಯೂನ್ ಮನೋಜ್ಞವಾಗಿದೆ ಎಂದು ಸಚಿವೆ ಶ್ಲಾಘಿಸಿದರು.
ಪಾಂಚಜನ್ಯದ ಕಾರ್ಯವೈಖರಿ ಬಗೆಗೆ ವಿವೇಕಾನಂದ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಸಚಿವರಿಗೆ ವಿವರಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನಿರ್ದೇಶಕ ವಾಮನ ಪೈ, ಡಾ.ಕಮಲಾ ಪ್ರಭಾಕರ ಭಟ್, ಪಾಂಚಜನ್ಯ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ, ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ, ಸದಸ್ಯ ಬಿ.ಟಿ.ರಂಜನ್, ಸಿಗ್ನೇಚರ್ ಹಾಡು ಬರೆದ ಕವಿ ಸುಬ್ರಾಯ ಚೊಕ್ಕಾಡಿ ಮತ್ತಿತರರು ಉಪಸ್ಥಿತರಿದ್ದರು.