ಗೋಸಂಪತ್ತು ಸಮೃದ್ಧವಾಗಿದ್ದರೆ ದೇಶ ಸುಭಿಕ್ಷ. ಗೋರಕ್ಷಣೆಯೆಂದರೆ ಅದು ರೈತ ರಕ್ಷಣೆ, ತನ್ಮೂಲಕ ದೇಶದ ಉಳಿವು ಎಂಬ ವಿಚಾರದೊಂದಿಗೆ ಅನ್ನದಾತನನ್ನು ಅನಾಥನನ್ನಾಗಿಸುತ್ತಿರುವ ಕಾಲಘಟ್ಟದಲ್ಲಿ ರೈತನ ನೋವಿನ ಧ್ವನಿಗೆ ಪ್ರತಿಧ್ವನಿಯಾಗಿ ಹೊರಟ ಯಾತ್ರೆ ಏಳು ರಾಜ್ಯಗಳಲ್ಲಿ ಮುನ್ನಡೆಯುತ್ತಿದೆ.
ಹತ್ತು ರಥಗಳು, 80 ದಿನಗಳು, ಏಳು ರಾಜ್ಯ, 250ಕ್ಕೂ ಅಧಿಕ ನಗರ, 500ಕ್ಕೂ ಹೆಚ್ಚು ಪಟ್ಟಣ, 10 ಸಾವಿರಕ್ಕೂ ಜಾಸ್ತಿ ಕಿಲೋಮೀಟರ್ ಸಂಚಾರ.
ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ತಿರುಗಾಟ ಮುಗಿಸಿ ಮಂಗಳೂರಲ್ಲಿ ಈ ತಿಂಗಳಾಂತ್ಯದಲ್ಲಿ ಸಂತರ ಸಮಾಗಮವಾಗಲಿದೆ. ಎಲ್ಲರ ಉದ್ದೇಶ ಒಂದೇ ಗೋವುಗಳ ರಕ್ಷಣೆ. ದೇಶ ಉಳಿಯಬೇಕಾದರೆ, ಗೋವುಗಳು ಸಮೃದ್ಧವಾಗಿರಬೇಕು ಎಂಬುದು ಅರ್ಥವಾದಂತಿದೆ. ಗೋರಕ್ಷಣೆಗೆ ಸಪ್ತರಾಜ್ಯಗಳ ಪರ್ಯಟನೆಗೆ ಅಭೂತಪೂರ್ವ ಬೆಂಬಲ ದೊರಕಿದೆ.
ಯಾಕೆ ಈ ಯಾತ್ರೆ
ಇದು ಕೇವಲ ಒಂದು ಜಾತಿ, ಒಂದು ಮಠ, ಒಂದು ಧರ್ಮಕ್ಕೆ ಸೀಮಿತವಾದ ವಿಚಾರವಲ್ಲ. ಇಡೀ ದೇಶದ ಉಳಿವು ಇದರಲ್ಲಡಗಿದೆ. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ಕಲ್ಪನೆ ಈ ಮಂಗಲ ಗೋಯಾತ್ರೆ. ಶ್ರೀಮಠದ ಗೋರಕ್ಷಾ ಅಭಿಯಾನಕ್ಕೆ ಮಹಾನಂದಿ ಹೊಸ ತಿರುವು ಕೊಟ್ಟದ್ದು ಮಹಾನಂದಿ. ಹಾಗೆಯೇ ಮಂಗಲಪಾಂಡೆ. ಗೋರಕ್ಷಣೆ ಹಿನ್ನೆಲೆಯಲ್ಲಿ ಹುಟ್ಟಿದ ಮಂಗಲಪಾಂಡೆಯ ಪ್ರತಿರೋಧ, ಪ್ರತಿಯೊಬ್ಬ ಭಾರತೀಯನಲ್ಲಿಜಾಗೃತಿ ಮೂಡಿಸಿತ್ತು. ಈ ಮಹಾಮಂಗಲದ ನಾಮ, ರೂಪಗಳನ್ನು ಹೊತ್ತು ಯಾತ್ರೆ ಹೊರಟಿತು.
ಇಂದು ಗೋವು ಎಷ್ಟು ಅನಿವಾರ್ಯ ಎಂದು ತಿಳಿಯಬೇಕಾದದ್ದು ಚಿಣ್ಣರು. ಉಳಿಯಬೇಕಾದವರೂ ಅವರೇ, ಉಳಿಸಿಕೊಳ್ಳಬೇಕಾದಾರೂ ಅವರೇ. ಯಾತ್ರೆ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಹಸುಗಳ ಆರೋಗ್ಯ ಸಂರಕ್ಷಣೆ, ಗೋವಿನ ನೋವಿಗೆ ಕಾರಣವಾಗುವ ಪ್ಲಾಸ್ಟಿಕ್…. ಹೀಗೆ ಪರಿಸರ ಸಂರಕ್ಷಣೆಯ ಮೂಲಕವೂ ಗೋವು ಉಳಿಸಲು ಸಾಧ್ಯ ಎಂಬ ಮಾಹಿತಿಯನ್ನೂ ಬಿತ್ತರಿಸಲಾಗುತ್ತಿದೆ.
ಭಾರತೀಯ ಗೋ ತಳಿಗಳ ಉಳಿವಿಗಾಗಿ ಪ್ರತಿ ತಾಲೂಕು ಕೇಂದ್ರದಲ್ಲಿ ಸ್ಥಳೀಯ ಸಂತರ, ಗಣ್ಯ ಗೋಭಕ್ತರ ನೇತೃತ್ವದಲ್ಲಿ ಗೋ ಪರಿವಾರಗಳನ್ನು ರಚಿಸಿ ಗೋಬ್ಯಾಂಕ್, ಗೋಶಾಲೆ ಸೇರಿ ಹಲವು ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶವನ್ನು ಯಾತ್ರೆಯ ಮೂಲಕ ಹೊಂದಲಾಗಿದೆ. ಹಲವು ಮಹಾಮಾರಿಗಳಿಗೆ ದಿವ್ಯ ಔಷಧವಾದ ಗೋ ಮೂತ್ರವನ್ನು ಸಂಗ್ರಹಿಸುವ ಉದ್ದೇಶದಿಂದ ಗಂವ್ಹಾರದಲ್ಲಿ ಗೋಮೂತ್ರ ಖರೀದಿ ಕೇಂದ್ರದ ಸ್ಥಾಪನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗೆ ಗೋಯಾತ್ರೆಯ ಉದ್ದೇಶ ಹಲವು.
ರಾಘವೇಶ್ವರ ಶ್ರೀಗಳ ನೇತೃತ್ವ
1998, ಏಪ್ರಿಲ್ 28.
ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕಾಮದುಘಾ ಯೋಜನೆಯ ಮಹಾಸಂಕಲ್ಪ ಸ್ವೀಕಾರ ದಿನ. ಭಾರತೀಯ ಗೋತಳಿ ರಕ್ಷಣೆಯೇ ಇದರ ಪರಮೋದ್ದೇಶ. 2003-04ರಲ್ಲಿ ದತ್ತ-ಶಂಕರ ಗೋಯಾತ್ರೆ, 2005ರಲ್ಲಿ ಭಾರತೀಯ ಗೋಯಾತ್ರೆ, 2006ರಲ್ಲಿ ಭಾರತೀಯ ಗೋಸಂಸತ್, 2007ರಲ್ಲಿ ವಿಶ್ವ ಗೋಸಮ್ಮೇಳನ, ಗೋ ಸಂಧ್ಯಾ, ಕೋಟಿ ನಿರಾಜನ, 2008ರಲ್ಲಿ ಅಭಯಧಾಮ, ದೀಪಗೋಪುರ, 2008-09ರಲ್ಲಿ ವಿಶ್ವ ಮಂಗಲ ಗೋಗ್ರಾಮ ಯಾತ್ರೆಯ ಸಿದ್ಧತಾಯಾತ್ರೆ, 2009-10 ರಲ್ಲಿ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ, 2012-14 ರಲ್ಲಿ ಜನಜನನಿ (ಗೋವು ಕತೆ), 2015 ರಲ್ಲಿ ಅನಂತಗೋಯಾತ್ರೆ…
ಹೀಗೆ ಗೋಸಂರಕ್ಷಣೆಗೆ ಪಣ ತೊಟ್ಟ ಮೇಲೆ ಒಂದಿನಿತೂ ವಿರಾಮವಿಲ್ಲ. ತನ್ನೊಡನೆ ಸೇರಿದ ಅಸಂಖ್ಯ ಗೋಪ್ರೇಮಿಗಳನ್ನು ಮತ್ತಷ್ಟು ಬಲಪಡಿಸಿ, ಗೋಕಿಂಕರರ ಯಾತ್ರೆ ಆರಂಭ. ವಿಶೇಷವೆಂದರೆ ಶ್ರೀಗಳೊಂದಿಗೆ ಎಲ್ಲ ಜಾತಿ, ಮತ, ಧರ್ಮಗಳ ಜನರು ಸೇರಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಸಮಾರೋಪ
ಜ.29ರಂದು ಮಂಗಳೂರು ಕೂಳೂರಿನಲ್ಲಿ ಯಾತ್ರೆ ಸಮಾಪನಗೊಳ್ಳಲಿದೆ. ಜ.12ಕ್ಕೆ ಹಿರೇಕೆರೂರು, ಜ.13ಕ್ಕೆ ಸಿದ್ದಾಪುರ, ಜ.15ಕ್ಕೆ ಯೆಲ್ಲಾಪುರ, ಜ.16ಕ್ಕೆ ಗೋವಾದ ರಾಮನಾಥಿಗೆ ಸಂಚರಿಸಿ ಜ.17ಕ್ಕೆ ಕರ್ನಾಟಕ ಕರಾವಳಿಯ ಕಾರವಾರ ತಲುಪಲಿದೆ.
ಜ.18ಕ್ಕೆ ಕುಮಟ, ಜ.19ಕ್ಕೆ ಮಂಕಿ, ಜ.20ಕ್ಕೆ ಬೈಂದೂರು ಮೂಲಕ ಉಡುಪಿ, ಜ.21ಕ್ಕೆ ಕಾರ್ಕಳ ಮೂಲಕ ಗುರುವಾಯನಕೆರೆ, ಜ.22ಕ್ಕೆ ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ, ಜ.23ಕ್ಕೆ ಗುತ್ತಿಗಾರು ಮೂಲಕ ಸುಳ್ಯ, ಜ.24ಕ್ಕೆ ಕುಂಟಾರು, ಚೆರ್ಕಳ, ಮಧೂರು ಕುಂಬಳೆ ಮೂಲಕ ಕಾಸರಗೋಡು, ಜ.25ಕ್ಕೆ ಬದಿಯಡ್ಕ ಪೆರ್ಲ ಪೆರ್ಮುದೆ ಪೈವಳಿಕೆ ಮೂಲಕ ಉಪ್ಪಳ, ಜ.26ಕ್ಕೆ ಮಂಜೇಶ್ವರ, ಆನೆಕಲ್, ಮುಡಿಪ್ಪು, ಕನ್ಯಾನ ಮೂಲಕ ವಿಟ್ಲ, ಜ.27ಕ್ಕೆ ಪುತ್ತೂರು, ಉಪ್ಪಿನಂಗಡಿ, ಕಲ್ಲಡ್ಕ ಮೂಲಕ ಮಂಗಳೂರು ನಗರಕ್ಕೆ ಆಗಮನ.
103 ಎಕರೆ ಜಾಗದಲ್ಲಿ ಮಂಗಲ ಭೂಮಿ
ಜನವರಿ 27, 28, 29ರಂದು ನಡೆಯುವ ಸಂತ ಸಮಾಗಮದಲ್ಲಿ ಪ್ರತಿದಿನ ಸಹಸ್ರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾರೋಪ ದಿನದಂದು 1 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕುಳೂರಿನಲ್ಲಿ ಸುಮಾರು 103 ಎಕರೆ ಜಾಗದಲ್ಲಿ ಸಿದ್ಧತೆಗಳು ಸಾಗಿವೆ. ಈ ಭೂಮಿಗೆ ಮಂಗಲಭೂಮಿ ಎಂದು ಹೆಸರಿಸಲಾಗಿದೆ. ವಸ್ತು ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಗೋ ತಳಿ, ಗೋ ಉತ್ಪನ್ನ, ಕೃಷಿ ಸಂಬಂಧಿ ವಸ್ತುಗಳ ಹಾಗೂ ಉಪಕರಣಗಳ ಪ್ರದರ್ಶನ ನಡೆಯಲಿದೆ.
ಜ.27ರಿಂದ 29ರವರೆಗೆ ಗೋ ಪ್ರೇಮಿಗಳ ಮಹಾಸಂಗಮ ನಡೆಯಲಿದೆ. ಪ್ರತಿನಿತ್ಯ ಗೋ ತುಲಾಭಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಜ.27ರಂದು ಬೆಳಗ್ಗೆ ಉಗ್ರಾಣ ಮುಹೂರ್ತ ನಡೆದು, ಗೋ ತುಲಾಭಾರ ಆರಂಭವಾಗಲಿದೆ. ಕಲ್ಲಡ್ಕ ಕಡೆಯಿಂದ ಕೂಳೂರಿಗೆ ಆಗಮಿಸುವ ದಶರಥಗಳ ಭವ್ಯ ಶೋಭಾಯಾತ್ರೆ ಮಧ್ಯಾಹ್ನ 2ರಿಂದ ಪ್ರಾರಂಭವಾಗಲಿದ್ದು, ಸಂಜೆ 6ಕ್ಕೆ ಮಂಗಲ ಭೂಮಿಗೆ ಮೆರವಣಿಗೆ ತಲುಪಲಿದೆ. ಬಳಿಕ ಗೋ ಜ್ಯೋತಿ ಬೆಳಗುವಿಕೆ, ಗೋ ವಸ್ತು ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ರಾತ್ರಿ ಭಜನೆ, ಗೋವಿನ ಬಗೆಗಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.28ರ 9.30ರಿಂದ ಸುಮಾರು 2 ಸಾವಿರ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಗೋ ಸಂಸತ್ ನಡೆಯಲಿದ್ದು, ವೈಜ್ಞಾನಿಕ, ಆರ್ಥಿಕತೆ, ಕೃಷಿಯಲ್ಲಿ ಗೋವಿನ ಬಳಕೆಯ ಬಗ್ಗೆ ವಿಚಾರ ಸಂಕೀರಣ ನಡೆಯಲಿದೆ. ಜ.29ರಂದು ಬೆಳಗ್ಗೆ 10ರಿಂದ ಸಹಸ್ರ ಸಂತರ ಉಪಸ್ಥಿತಿಯಲ್ಲಿ ಸುರಭಿ ಸಂತ ಸಂಗಮ.
ಜನವರಿ 29ರ ಬಳಿಕ ಗೋರಕ್ಷಣೆಯ ಸಂಕಲ್ಪ ಮುಗಿಯುವುದಿಲ್ಲ. ಏಕೆಂದರೆ ಇಡೀ ಯಾತ್ರೆ ಉದ್ದೇಶ ಈಡೇರಬೇಕಾದರೆ ನಿರ್ಣಯ ಅನುಷ್ಠಾನಕ್ಕೆ ಪಾಲ್ಗೊಂಡವರೆಲ್ಲರೂ ಶ್ರಮಿಸುವುದು , ಶ್ರೀಗಳ ಜೊತೆಗೆ ನೂರಾರು ಸಂತರ ಸಂಕಲ್ಪವನ್ನು ಸಾಕಾರಗೊಳಿಸುವುದು ಅಷ್ಟೇ ಅಗತ್ಯ.