ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಾಗ ಮಾತ್ರ ಪ್ರತಿಭಾನ್ವಿತರಿಗೆ ಮತ್ತಷ್ಟು ಶಕ್ತಿಬರಲು ಸಾಧ್ಯ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು.
ಗೋಳ್ತಮಜಲು ಗ್ರಾಮ ಪಂಚಾಯತ್ ವತಿಯಿಂದ ಮಂಗಳವಾರ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಅಪರೂಪದ ನಾಣ್ಯ, ಪುರಾತನ ವಸ್ತುಗಳ ಸಂಗ್ರಾಹಕ ಮುಹಮ್ಮದ್ ಯಾಸಿರ್‌ರವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ನೆರವೇರಿಸಿ ಮಾತನಾಡಿದರು.
ಬಾಲ್ಯದಲ್ಲಿ ಮೈಗೂಡಿಸಿಕೊಳ್ಳುವ ಸೃಜನಶೀಲ ಹವ್ಯಾಸಗಳು, ಸೂಕ್ತ ಪ್ರೋತ್ಸಾಹ ದೊರಕಿದಾಗ ಎಷ್ಟು ಎತ್ತರಕ್ಕೆ ಏರಲು ಸಾಧ್ಯ ಎಂಬುದಕ್ಕೆ ಯಾಸಿರ್ ಉದಾಹರಣೆ ಎಂದ ಅವರು, ಮುಂದಿನ ದಿನಗಳಲ್ಲಿ ಅವರ ಖ್ಯಾತಿ ರಾಜ್ಯ , ದೇಶಮಟ್ಟದಲ್ಲಿ ವ್ಯಾಪಿಸಲಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಭಟ್ ಮಾತನಾಡಿ, , ಯಾಸಿರ್ ಅವರನ್ನು ಗೌರವಿಸಿರುವುದು ಪಂಚಾಯತ್ ಗೂ ಹೆಮ್ಮೆಯ ವಿಚಾರ ಎಂದರು. ಯಾಸಿರ್ ಮಾತನಾಡಿ, ಶಾಲಾ ದಿನಗಳಲ್ಲಿ ಬೆಳೆಸಿಕೊಂಡ ಹವ್ಯಾಸ ಇಂದು ನನ್ನನ್ನು ರಾಜ್ಯಮಟ್ಟದಲ್ಲಿ ಗುರುತಿಸಿದೆ, ಪಂಚಾಯತ್ ನೀಡಿದ ಗೌರವ ಹೆಚ್ಚು ಖುಷಿ ತಂದಿದೆ ಎಂದರು.
ಗ್ರಾ.ಪಂ.ಸದಸ್ಯ ಶೇಖರ ಕೊಟ್ಟಾರಿ, ಮಾಜಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು, ಕಲ್ಲಡ್ಕ ಶಾಲಾ ಮುಖ್ಯೋಪಾಧ್ಯಾಯ ಅಶ್ರಫ್, ತಾ.ಪಂ.ಮಾಜಿ ಸದಸ್ಯೆ ಹೈಡಾಸುರೇಶ್ ಮಾತನಾಡಿದರು. ತಾ.ಪಂ.ಸದಸ್ಯ ಮಹಾಬಲ ಆಳ್ವ, ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ಮುಸ್ತಫಾ ಗೋಳ್ತಮಜಲು, ಮೋನಪ್ಪ ದೇವಸ್ಯ, ಗ್ರಾ.ಪಂ. ಅಭೀವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.