ವಿಶೇಷ ವರದಿ

ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರಾ ಸಂಭ್ರಮಕ್ಕೆ ದಿನಗಣನೆ

ಜನವರಿ ಬಂತೆಂದರೆ, ವಿಟ್ಲದಲ್ಲಿ ಹಬ್ಬದ ಸಡಗರ.  ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾ ಮಹೋತ್ಸವದ ಸಂಭ್ರಮದ ಕ್ಷಣಗಳಿಗೆ ವಿಟ್ಲ ಸಜ್ಜಾಗುತ್ತಿದೆ. ಹತ್ತೂರಿನಿಂದ ವಿಟ್ಲಕ್ಕೆ ಆಗಮಿಸಿ, ಜಾತ್ರಾ ಸಂಭ್ರಮ ಸವಿಯುತ್ತಾರೆ. ವಿಟ್ಲ ಜಾತ್ರೆಗೆ ಪರಂಪರಾಗತ ವೈಭವದ ಜೊತೆಗೆ ಐತಿಹಾಸಿಕ ಮಹತ್ವವೂ ಇದೆ.14ರಿಂದ 21ವರೆಗೆ ವಿಟ್ಲ ಜಾತ್ರಾ ವೈಭವ. ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ ಜಾತ್ರೋತ್ಸವ ಕಣ್ತುಂಬಿಸಿಕೊಳ್ಳಲು ವಿಟ್ಲದ ನಂಟು ಇರುವವರಷ್ಟೇ ಅಲ್ಲ, ಜಿಲ್ಲೆಯ ಹೊರಭಾಗದ ಕುತೂಹಲಿಗರೂ ಆಗಮಿಸಲು ಸಜ್ಜಾಗಿದ್ದಾರೆ.

  • www.bantwalnews.com speacial
  • ಜನವರಿ 14ರಂದು ಕಾಲಾವಧಿ ಜಾತ್ರೋತ್ಸವ ಆರಂಭ. ಅಂದು ಧ್ವಜಾರೋಹಣದಿಂದ ಆರಂಭವಾಗಿ ಒಂಭತ್ತು ದಿನ ಉತ್ಸವಾದಿಗಳು ನಡೆಯುತ್ತವೆ.
  • 14ರಂದು ಶನಿವಾರ ಲಕ್ಷದೀಪೋತ್ಸವ ನಡೆಯಲಿದೆ. ಬೆಳಗ್ಗೆ 10ಕ್ಕೆ ಧ್ವಜಾರೋಹಣ, ರಾತ್ರಿ 8.30ಕ್ಕೆ ಉತ್ಸವ ಬಲಿ.
  • 15, 16, 17ರಂದು ಸಂಜೆ 6.30ಕ್ಕೆ ನಿತ್ಯೋತ್ಸವಗಳು ನಡೆಯುವುದು.
  • 18ರಂದು ಬುಧವಾರ ರಾತ್ರಿ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುತ್ತದೆ. ರಾತ್ರಿ 9ಕ್ಕೆ ಉತ್ಸವ ನಡೆಯಲಿದೆ. ಬಯ್ಯದ ಬಲಿ ಉತ್ಸವ
  • 19 ಗುರುವಾರ ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ  ವಿತರಣೆ, ರಾತ್ರಿ 8ಕ್ಕೆ ತೆಪ್ಪೋತ್ಸವ ನಡೆಯಲಿದೆ. ಅಂದು ನಡುದೀಪೋತ್ಸವ ನಡೆಯುವುದು.
  • 20ಕ್ಕೆ ರಾತ್ರಿ 9ಕ್ಕೆ ಹೂತೇರು ಉತ್ಸವ. 21ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ.
  • ಅಂದು ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ. ರಾತ್ರಿ 7.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು. ರಾತ್ರಿ 8ಕ್ಕೆ ಮಹಾರಥೋತ್ಸವ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.

22ರಂದು ಅವಭೃತ ಸ್ನಾನ, 24ರಂದು ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ. 25ರಂದು ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ನಡೆಯಲಿದೆ.

ವಿಟ್ಲ ಸೀಮೆಯ ಉತ್ಸವ

ವಿಟ್ಲ ಸೀಮೆ ಅಂದರೆ ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ಎರಡು ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ 17 ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ಇಂದು ಈ ಸೀಮೆಯ ಕೆಲ ಭಾಗಗಳು ಕೇರಳಕ್ಕೆ ಸೇರಿಕೊಂಡಿದೆ. ಶೈವ, ವೈಷ್ಣವ, ಸಾಧಾರಣ ಎಂಬ ಪ್ರಶಂಸೆಗೆ ಪಾತ್ರರಾದ ವಿಟ್ಲ ಅರಸು ವಂಶಜರು 5 ವೈಷ್ಣವ ದೇಗುಲ ಮತ್ತು 6 ಶಿವನ ದೇಗುಲಗಳನ್ನು ಸಂಪ್ರದಾಯನಿಷ್ಠರಾಗಿ ನಡೆಸಿಕೊಂಡು ಬಂದವರು. ಇವರ ಆಳ್ವಿಕೆಯಲ್ಲೇ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವೂ ಸಂಪ್ರದಾಯಬದ್ಧವಾದ ಭಕ್ತಿಯ, ಕಾರಣಿಕ ಕ್ಷೇತ್ರವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಸನ್ನಿಧಿ.

ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಸ್ವರೂಪಗಳು ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ಪಂಚತತ್ವಗಳನ್ನು ಪ್ರತಿನಿಧೀಕರಿಸುವ ಮೂರ್ತ ಸ್ವರೂಪಗಳು.

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವನ್ನು 13 ಕೋಟಿ ರೂ.ಗಳ ವೆಚ್ಚದಲ್ಲಿ ಪುನರ್‌ನಿರ್ಮಿಸಿ, ಶ್ರೀದೇವರನ್ನು ಪ್ರತಿಷ್ಠಾಪಿಸಿ, ಅದ್ದೂರಿಯಿಂದ ಬ್ರಹ್ಮಕಲಶೋತ್ಸವ ನಡೆದಿದೆ. ಈ ದೇಗುಲವನ್ನು ಊರ ಪರವೂರ ಭಕ್ತರ ಸಹಕಾರದಲ್ಲಿ ಪುನರ್ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಅಸಂಖ್ಯ ಭಕ್ತಾದಿಗಳು ತಮ್ಮ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ.

ಹೊರಗೆ ಆನೆಬಾಗಿಲು ಪುನಃ ನಿರ್ಮಾಣಗೊಂಡಿದೆ. ಆಮೇಲೆ ಪಶ್ಚಿಮಗೋಪುರ ಸುಂದರವಾಗಿ ನಿರ್ಮಾಣವಾಗಿದೆ. ರಥ ತಂಗುವುದಕ್ಕೆ ಉತ್ತಮ ಜಾಗ ನಿರ್ಮಾಣವಾಗಿದೆ.

ಇದನ್ನು ಜೀರ್ಣೋದ್ಧಾರ ಸಮಿತಿಯೇ ಕೈಗೆತ್ತಿಕೊಂಡಿದೆ. ಬ್ರಹ್ಮಕಲಶದ ಖರ್ಚುವೆಚ್ಚಗಳ ಬಳಿಕ ಉಳಿದ ಮೊತ್ತ 1 ಕೋಟಿ ರೂ.ಗಳು. ಆ ಮೊತ್ತದಲ್ಲಿ ಈ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗಿದೆ. ಎಲ್.ಎನ್.ಕುಡೂರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು.

ವಿ.ಜನಾರ್ದನ ವರ್ಮ ಅರಸರು ಆನುವಂಶೀಯ ಆಡಳಿತದಾರರು.

 ವಿಳಾಸ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಅಂಚೆ : ವಿಟ್ಲ, ಬಂಟ್ವಾಳ ತಾಲೂಕು, ದ.ಕ. – 574242

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts