bantwalnews.com report
ಶಿಕ್ಷಕಿಯ ಮೇಲಿನ ಭಯದಿಂದ ಶಾಲೆಗೆ ಹೋಗದೆ ಅನಾರೋಗ್ಯದ ನೆಪವೊಡ್ಡಿ ಮನೆಯಲ್ಲಿ ಉಳಿದಿದ್ದ ಬಾಲಕನಿಗೆ ಧೈರ್ಯ ತುಂಬಿ ಮತ್ತೆ ಶಾಲೆಗೆ ಕರೆ ತರುವಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಯಶಸಿಯಾಗಿದೆ.
ಇಲ್ಲಿನ ಮೂಡನಡುಗೋಡು ಗ್ರಾಮದ ಕೊರಗ ಕಾಲನಿಯಿಂದ ದಡ್ಡಲಕಾಡು ಸರಕಾರಿ ಪ್ರಾಥಮಿಕ ಹಿರಿಯ ಶಾಲೆಯ ಎಂಟನೆ ತರಗತಿಗೆ ಬರುತ್ತಿದ್ದ ವಿದ್ಯಾರ್ಥಿ ಗಣೇಶ್ ಕಳೆದ ಹಲವು ಸಮಯಗಳಿಂದ ಶಾಲೆಗೆ ಬಾರದೆ ತಪ್ಪಿಸಿಕೊಳ್ಳುತ್ತಿದ್ದ. ಈ ಬಗ್ಗೆ ಅಧ್ಯಾಪಕರು ವಿಚಾರಿಸಿದಾಗ ಅನಾರೋಗ್ಯದಿಂದ ಶಾಲೆಗೆ ಬರಲಾಗುತ್ತಿಲ್ಲ ಎನ್ನುವ ಕಾರಣ ನೀಡುತ್ತಿದ್ದ.
ಶಾಲಾ ದತ್ತು ಸ್ವೀಕರಿಸಿದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಸದಸ್ಯರು ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಸೋಮವಾರ ಬೆಳಿಗ್ಗೆ ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಆರಂಭದಲ್ಲಿ ಅನಾರೋಗ್ಯದ ನೆಪ ನೀಡಿದರೂ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಯ ಪೋಷಕರಿಗೆ ಮನವರಿಕೆ ಮಾಡಿದಾಗ ಶಿಕ್ಷಕಿಯೋರ್ವರಿಗೆ ಹೆದರಿ ಶಾಲೆಗೆ ಹೋಗದೆ ಉಳಿದಿರುವುದು ಗಮನಕ್ಕೆ ಬಂತು.
ವಿದ್ಯಾರ್ಥಿಯ ಮನವೊಲಿಸಿ ಇಂದಿನಿಂದಲೇ ಶಾಲೆಗೆ ಹೋಗುವಂತೆ ಪ್ರೇರಿಪಿಸುವಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರ ಪ್ರಯತ್ನ ಯಶಸ್ವಿಯಾಯಿತು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ರಮೇಶ್ ಕುಲಾಲ್, ವಿಠಲ ಡಿ., ಗಂಗಾಧರ ಕುಲಾಲ್, ನವೀನ್ ಎಸ್., ದಿಲಿಪ್ ಡೆಚ್ಚಾರು, ವಿನೋದ್ ಕುಲಾಲ್ ಹಾಜರಿದ್ದರು.