ಮಕ್ಕಳ ಹಕ್ಕು, ಪ್ರತಿಭಟನೆ,ದ್ವೇಷ ಏನೂ ಗೊತ್ತಿಲ್ಲದ ಉಮಾಶ್ರೀಯ ಹೂವಿನಂತಾ ಮುಗ್ದಮನಸ್ಸಿನಿಂದ ಆ ಬಗೆಯ ಆಕ್ರೋಶ ಹೊರಬಂದಿತೆಂದರೆ, ಆಕೆ ಮತ್ತು ಆ ಮಕ್ಕಳೆಲ್ಲರೂ ಎಷ್ಟು ಸಂಕಟ ಅನುಭವಿಸಿದ್ದರೋ ಏನೋ..
ಇದು ದೂರದ ಬಿಜಾಪುರ ಜಿಲ್ಲೆಯ ಶಾಲೆಯಲ್ಲಿ ನಡೆದ ಘಟನೆ ಅಲ್ಲಿನ ಕಸ್ತೂರ್ ಬಾ ವಸತಿ ಶಾಲೆಯ ವಿದ್ಯಾರ್ಥಿನಿ ಉಮಾಶ್ರೀ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾಡಿದ ಪಾಠ ಯಾವ ಬಗೆಯಲ್ಲಿತ್ತು ಎನ್ನುವುದನ್ನು ಈ ವಾರ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.
ಕಸ್ತೂರ್ ಬಾ ವಸತಿ ಶಾಲೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆ. ಶಾಲೆ ಬಿಟ್ಟ ಮಕ್ಕಳು,, ಅನಾಥ ಮಕ್ಕಳು, ವಲಸೆ ಕೂಲಿಕಾರ್ಮಿಕರ ಮಕ್ಕಳು ಸೇರಿದಂತೆ ಎಲ್ಲ ಬಡವರ ಮಕ್ಕಳೂ ಶಿಕ್ಷಣ ಪಡೆಯಬೇಕು ಎನ್ನುವ ಆಶಯದಂತೆ ನಡೆಯುವ ಶಾಲೆಯಿದು.
೬ ರಿಂದ ೮ ನೇ ತರಗತಿವರೆಗಿನ ಮಕ್ಕಳು ಇಲ್ಲಿದ್ದಾರೆ. ಈ ಶಾಲೆಗೆ ಭೇಟಿ ನೀಡಿದ್ದ ನಾನು ಅಲ್ಲಿನ ಎಲ್ಲಾ ಮಕ್ಕಳೊಂದಿಗೆ ಮಾತನಾಡಿ, ಅವರ ಬಾಲ್ಯದ ಬದುಕನ್ನೂ, ಅವರ ಅನುಭವವನ್ನು ಕೇಳಿ ತಿಳಿದಿದ್ದೆ. ಆಗ ನನಗೆ ತಿಳಿದ ಉಮಾಶ್ರೀಯ ಪಾಠದ ಕತೆ ಕೇಳಿ.
ಅದು ಗಣರಾಜ್ಯೋತ್ಸವ ಕಾರ್ಯಕ್ರಮ. ವಿವಿಧ ಶಾಲೆಯ ಮಕ್ಕಳ ಭಾಗವಹಿಸುವಿಕೆಯೊಂದಿಗೆ ಹೋಬಳಿ ಮಟ್ಟದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿತ್ತು. ಬೆಳಿಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಅತಿಥಿಗಳಿಗೆ ಕಾದು ಕಾದು 11 ಗಂಟೆಯ ಬಳಿಕ ಆರಂಭವಾಯಿತು. ಅತಿಥಿಯಾಗಿ ಆಗಮಿಸಿದ್ದ ಆ ಊರಿನ ಶಾಸಕರು, ವಿವಿಧ ಜನಪ್ರತಿನಿಧಿಗಳ ಭಾಷಣವೂ ನಡೆಯಿತು. ಅಷ್ಟೊತ್ತಿಗಾಗಲೇ ಬಿಸಿಲು ನೆತ್ತಿಗೇರಿತ್ತು. ಗಣ್ಯರ ಭಾಷಣದ ಬಳಿಕ ಮಕ್ಕಳ ಸರದಿ ಬಂತು. ಮಕ್ಕಳು ಗಣರಾಜ್ಯೋತ್ಸವದ ಬಗ್ಗೆ ತಾವು ಸಿದ್ದಪಡಿಸಿದ್ದ ಭಾಷಣವನ್ನು ಮಾಡಬೇಕಾಗಿತ್ತು. ಮಕ್ಕಳ ಭಾಷಣ ಶುರುವಾಗುತ್ತಲೇ ಸ್ಟೇಜ್‌ನ ಮೇಲೆ ಬಿಸಿಲು ಬಂತೆಂದು ಶಾಸಕರಾದಿಯಾಗಿ ಜನಪ್ರತಿನಿಧಿಗಳೆಲ್ಲಾ ನಿರ್ಗಮಿಸಲು ತಯಾರಾದರು.
ಆ ಹೊತ್ತಿಗೆ ಭಾಷಣ ಆರಂಭಿಸಿದಳು ಉಮಾಶ್ರೀ ಏನ್ರೀ..ಸಾರ್..ಮಕ್ಕಳೆಂದ್ರೆ ಅಷ್ಟೂ ಸಲೀಸ್ ಮಾಡ್ತೀರೇನ್ರೀ..? ಇಷ್ಟೊತ್ತು ನಾವ್ ಬಿಸಿಲ್ ನಾಗೆ ಕುಂತ್ ನಿಮ್ಗಾಗಿ ಕಾದು, ನಿಮ್ಮ ಮಾತು ಕೇಳಿಲ್ವಾ.. ನಿಮ್ಗೇನು ಕೇಳೋಕೆ.. ಎಂದು ಮೈಕ್ ಹಿಡಿದು ಅಬ್ಬರಿಸುತ್ತಿದ್ದಂತೆಯೇ ಜನಪ್ರತಿನಿಧಿಗಳೆಲ್ಲಾ ಕಂಗಾಲಾದರು. ನಂತರ ತನ್ನ ಭಾಷಣದಲ್ಲಿ ಆಕೆ ಹೇಳಿದ್ದು ಇಷ್ಟು.. ಇವತ್ತು ನಾವು ಗಣರಾಜ್ಯೋತ್ಸವ ಆಚರಿಸ್ತಾ ಇದ್ದೀವಿ, ಒಳ್ಳೇ ವಿಚಾರ. ಆದ್ರೆ.. ಸ್ಟೇಜ್ ನ ಮೇಲೆ ಕುಂತಿರೋ ಮಂದಿಯೆಲ್ಲಾ ನೆರಳಾಗೆ ಕುಂತಿದ್ರಿ, ನಾವ್ ಮಕ್ಕಳು ಮಾತ್ರ ಬಿಸಿಲ್ನಾಗೆ ಕುಂತಿದ್ದೀವಿ,, ಮಕ್ಳ ಬಗ್ಗೆ ಯಾಕೆ ನೀವು ಕರುಣೆ ತೋರಿಸ್ತಿಲ್ಲಾ.. ಮಕ್ಳನ್ನು ಇನ್ನಾದ್ರೂ ಒಳ್ಳೇ ಮನಸ್ಸಿಂದ ನೋಡಿ..ಅನ್ನುತ್ತಾ ತಾನು ತಯಾರು ಮಾಡಿದ ಭಾಷಣ ಮುಂದುವರಿಸಿದಳು ಉಮಾಶ್ರೀ..
ಮಕ್ಕಳಹಕ್ಕು, ಪ್ರತಿಭಟನೆ,ದ್ವೇಷ ಏನೂ ಗೊತ್ತಿಲ್ಲದ ಉಮಾಶ್ರೀಯ ಹೂವಿನಂತಾ ಮುಗ್ದ ಮನಸ್ಸಿನಿಂದ ಆ ಬಗೆಯ ಆಕ್ರೋಶ ಹೊರಬಂದಿತೆಂದರೆ, ಆಕೆ ಮತ್ತು ಆ ಮಕ್ಕಳೆಲ್ಲರೂ ಎಷ್ಟು ಸಂಕಟ ಅನುಭವಿಸಿದ್ದರೋ ಏನೋ..?
ಇದು ಒಂದು ಸನ್ನಿವೇಶ, ಅಲ್ಲಿ ಉಮಾಶ್ರೀ ಮಾಡಿದ ಪಾಠ ಜನಪ್ರತಿನಿಧಿಗಳ ಕಣ್ತೆರೆಸಿತು. ಇಂತಹಾ ಘಟನೆಗಳು ಅಲ್ಲಲ್ಲಿ-ಆಗಾಗ ನಡೆಯುತ್ತಲೇ ಇರುತ್ತದೆ, ಸಾವಿರಾರು ಮಕ್ಕಳು, ಮಕ್ಕಳಪರ ಕಾಳಜಿಯುಳ್ಳವರು ಇದಕ್ಕೆ ಮೂಕಪ್ರೇಕ್ಷಕರಾಗುತ್ತಾರೋ ವಿನಃ ಕ್ಷಣದ ಪ್ರತಿಕ್ರಿಯೆ ನೀಡುವ ಧೈರ್ಯ ಮಾಡುವುದಿಲ್ಲ.
ಅನೇಕ ಸರ್ಕಾರಿ ಕಾರ್ಯಕ್ರಮಗಳು, ಕಾಟಾಚಾರಕ್ಕೆ ಎಂಬಂತೆ ನಡೆಯುವ ಕಾರ್ಯಕ್ರಮಗಳಲ್ಲಿ ಮಕ್ಕಳು ಪಡುವ ನೋವು-ಸಂಕಟ ಬಿಜಾಪುರದಲ್ಲಿ ಉಮಾಶ್ರೀಯ ಮುಖೇನ ಸ್ಪೋಟಗೊಂಡಿದೆ.
ಈ ಬಗೆಯಲ್ಲಿ ಮಕ್ಕಳು ನೋವು ಅನುಭವಿಸುವ ಘಟನೆಗಳು ಗೊತ್ತಿದ್ದೋ,ಗೊತ್ತಿಲ್ಲದೆಯೋ ನಮ್ಮಿಂದಲೇ ನಡೆಯುತ್ತದೆ. ಅದರಲ್ಲೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ಪ್ರೇಕ್ಷಕ ವರ್ಗದ ಸಂಖ್ಯೆ ಕಡಿಮೆಯಾಗಿರುವ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಮೆರವಣಿಗೆಗಳಲ್ಲಿ ಮಕ್ಕಳ ಬಳಕೆಯಾಗುತ್ತಲೇ ಇದೆ, ಆದರೆ ಅಲ್ಲಿ ಮಕ್ಕಳ ನೋವು-ಸಂಕಟಗಳನ್ನು ಅರ್ಥಮಾಡಿಕೊಳ್ಳುವವರು ಯಾರೂ ಇರುವುದಿಲ್ಲ. ಇದಕ್ಕೆಲ್ಲಾ ವಿದಾಯ ಹೇಳಬೇಕಾದರೆ ಶಿಕ್ಷಣ ಇಲಾಖೆ, ಪ್ರತೀ ಶಾಲೆಯ ಶಿಕ್ಷಕವರ್ಗ, ಶಾಲಾಭಿವೃದ್ದಿ ಸಮಿತಿಗಳು ಜಾಗೃತವಾಗಬೇಕು. ನಮ್ಮ ಮಕ್ಕಳು ಯಾವ್ಯಾವುದೋ ಕಾರಣಕ್ಕೆ, ಯಾರ್‍ಯಾರ ಹಿತಕ್ಕೋ ಬಲಿಪಶುಗಳಾಗುವುದನ್ನು, ನೋವು ಅನುಭವಿಸುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಸೂಚನೆಗಳಿದ್ದರೂ, ನಮ್ಮ ಮಕ್ಕಳು ಹಲವು ಬಾರಿ ಪ್ರದರ್ಶನದ ಗೊಂಬೆಗಳಾಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ದೊಡ್ಡವರಲ್ಲಿ ಆ ಬಗೆಯ ಇಚ್ಛಾಶಕ್ತಿ ಮೂಡಬೇಕು. ಮಕ್ಕಳ ಕುರಿತಾದ, ಮಕ್ಕಳ ಆಸಕ್ತಿಯ ಕಾರ್ಯಕ್ರಮಗಳಲ್ಲಿ ಮಾತ್ರ ಮಕ್ಕಳು ಭಾಗವಹಿಸುವಂತಾಗಲಿ.
ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ಮೈಲ್ ವಿಳಾಸ: bantwalnews@gmail.com ಗೆ ಕಳುಹಿಸಿ