bantwalnews.com
ಖಾಸಗೀ ಕಾರ್ಯಕ್ರಮಗಳಿಗೆ ಶಾಲಾ ಮಕ್ಕಳನ್ನು ಕರೆದೊಯ್ಯದಂತೆ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಸ್ಸಿಯ/ಎಸ್ಸಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ದಲಿತ ಮುಖಂಡರು, ಇತ್ತೀಚೆಗೆ ಸುಳ್ಯ ತಾಲೂಕಿನ ಸರಕಾರಿ ಶಾಲೆಯೊಂದರ ಮಕ್ಕಳನ್ನು ಶಿಕ್ಷಕರು ಶಾಲಾ ಸಮೀಪದ ಗೃಹಪ್ರವೇಶಕ್ಕೆ ಕರೆದುಕೊಂಡು ಹೋಗಿದ್ದಾಗ, ದಲಿತ ಮಕ್ಕಳನ್ನು ಮನೆಯ ಹೊರಗಡೆ ನಿಲ್ಲಿಸಿದ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯದಂತೆ ಶಾಲೆಗಳಿಗೆ ನಿರ್ದೇಶನ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ ಸಂಬಂಧಪಟ್ಟ ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಕೇಸು ದಾಖಲಾಗಿದೆ ಎಂದು ಸಭೆಗೆ ಡಿಡಿಪಿಐ ತಿಳಿಸಿದರು.
ರಕ್ಷಣೆಗೆ ನಿಗಾ
ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರಿಗಾಗಿ ಕಾದಿರಿಸಿರುವ ಡಿಸಿ ಮನ್ನಾ ಭೂಮಿಯನ್ನು ಯಾವುದೇ ಒತ್ತುವರಿಯಾಗದಂತೆ ಅದರ ರಕ್ಷಣೆಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಡಿಸಿ ಮನ್ನಾ ಜಾಗ ಒತ್ತುವರಿ ಬಗ್ಗೆ ಹಲವಾರು ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯ ಡಿಸಿ ಮನ್ನಾ ಜಾಗವನ್ನು ಸ್ಪಷ್ಟವಾಗಿ ಗುರುತಿಸಿ, ಅದರ ಮೇಲೆ ನಿಗಾ ಇಡುವಂತೆ ಅವರು ತಿಳಿಸಿದರು.
ಅಕ್ರಮ-ಸಕ್ರಮದಲ್ಲಿ ಮಂಜೂರಾತಿ ಪಡೆದ ಎಸ್ಸಿಪ/ಎಸ್ಟಿ ಸಮುದಾಯದವರಿಗೆ ಎಲ್ಲ ದಾಖಲಾತಿ ಹಾಗೂ ಪ್ರಕ್ರಿಯೆಗಳನ್ನು ತ್ವರಿತವಾಗಿ ನಡೆಸಿಕೊಡಬೇಕು. ಎಸ್ಸಿಿ/ಎಸ್ಟಿ ಯವರಿಗೆ ಕಾದಿರಿಸಲ್ಪಟ್ಟ ನಗರ ಸ್ಥಳೀಯ ಸಂಸ್ತೆಗಳ ವಾಣಿಜ್ಯ ಸಂಕೀರ್ಣ ಕೊಠಡಿಗಳಲ್ಲಿ ಬೇರೆಯವರು ವ್ಯವಹಾರ ನಡೆಸುತ್ತಿದ್ದರೆ ಕೂಡಲೇ ಅವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಶಂಕುಸ್ಥಾಪನೆ ಜನವರಿ 17ರಂದು
ಮಂಗಳೂರಿನಲ್ಲಿ ಅಂಬೇಡ್ಕರ್ ಭವನದ ಶಂಕುಸ್ಥಾಪನೆ ಜನವರಿ 17ರಂದು ನೆರವೇರಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಸಂತೋಷ್ ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಆರ್, ಉಮೇಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಹೆಚ್ಚುವರಿ ಎಸ್ಪಿಡಾ. ವೇದಮೂರ್ತಿ, ಮಂಗಳೂರು ಸಹಾಯಕ ಆಯುಕ್ತ ಎ.ಸಿ. ರೇಣುಕಾ ಪ್ರಸಾದ್, ಪಾಲಿಕೆ ಆಯುಕ್ತ ಮುಹಮ್ಮದ್ ನಜೀರ್ , ವಿವಿಧ ಇಲಾಖಾಧಿಕಾರಿಗಳು, ದಲಿತ ಮುಖಂಡರು ಉಪಸ್ಥಿತರಿದ್ದರು.