ಆಗಾಗ್ಗೆ ಹೊಸ ಹೊಸ ರೂಪದಲ್ಲಿ ಮಾರಕ ರೋಗಗಳು ಕಾಲಿಡುವುದುಂಟು. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಸದ್ದು ಮಾಡುತ್ತಿರುವ ಹಕ್ಕಿಜ್ವರ ಇವುಗಳಲ್ಲೊಂದು. ಇದರ ಕುರಿತು ಬಂಟ್ವಾಳನ್ಯೂಸ್ ಓದುಗರಿಗೆ ಮಾಹಿತಿ ನೀಡಿದವರು ಡಾ.ಮುರಲೀ ಮೋಹನ ಚೂಂತಾರು.
https://bantwalnews.com special
ಇನ್‌ಪ್ಲುಯೆಂಜಾ ಎಂಬ ವೈರಾಣುವಿನ ಸೋಂಕಿನಿಂದ ಹರಡುವ ಈ ಜ್ವರ ಸಾಮಾನ್ಯವಾಗಿ ಕೋಳಿ ಮತ್ತು ಹಕ್ಕಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೋಳಿ, ಬಾತುಕೋಳಿ, ಎಮು, ವಲಸೆ ಹಕ್ಕಿಗಳು ಮತ್ತು ಹಂದಿಯನ್ನು ಹೊರತು ಪಡಿಸಿ ಇತರ ಪ್ರಾಣಿಗಳಲ್ಲಿ ಈ ಖಾಯಿಲೆ ಕಂಡು ಬಂದ ನಿದರ್ಶನಗಳಿಲ್ಲ. ಹಕ್ಕಿಜ್ವರವನ್ನು ವೈಜ್ಞಾನಿಕವಾಗಿ ಆಂಗ್ಲಭಾಷೆಯಲ್ಲಿ ಏವಿಯನ್ ಇನ್‌ಪ್ಲುಯೆಂಜಾ ಅಥವಾ ಬರ್ಡ್ಸ್ ಪ್ಲೂ ಎಂದು ಕರೆಯುತ್ತಾರೆ.
ಇನ್‌ಪ್ಲುಯೆಂಜಾ ವೈರಸ್‌ಗಳಲ್ಲಿ ಇನ್‌ಪ್ಲುಯೆಂಜಾ ಎ. ಬಿ. ಸಿ. ಎಂದು ಮೂರು ನಮೂನೆಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮನುಷ್ಯರಲ್ಲಿ ಉಂಟಾಗುವ ಹೆಚ್ಚಿನ ಪ್ಲೂ ಪ್ರಕರಣಗಳಿಗೆ ಇನ್‌ಪ್ಲುಯೆಂಜಾ ’ಎ’ ಕಾರಣವಾಗಿದೆ. ಇನ್‌ಪ್ಲುಯೆಂಜಾ ’ಎ’ ಮತ್ತು ’ಬಿ’ ವೈರಸ್‌ಗಳು ಮನುಷ್ಯರಲ್ಲಿ ಹೆಚ್ಚು ತೀವ್ರವಾದ ಮತ್ತು ವ್ಯಾಪಕವಾದ ಪ್ಲೂ ಸೋಂಕನ್ನು ಉಂಟುಮಾಡುತ್ತದೆ.
ಇನ್‌ಪ್ಲುಯೆಂಜಾ ’ಸಿ’ ವೈರಾಣುವಿನಿಂದ ಉಂಟಾಗುವ ಸೋಂಕು ಸೀಮಿತವಾದ ಪ್ರದೇಶಗಳಲ್ಲಿಷ್ಟೆ ಉಂಟಾಗುತ್ತವೆ ಮತ್ತು ಹೆಚ್ಚೇನು ತೊಂದರೆಯನ್ನು ಉಂಟು ಮಾಡುವುದಿಲ್ಲ. ಈ ಇನ್‌ಪ್ಲುಯೆಂಜಾ ವೈರಸ್‌ಗಳು ಗೋಲಾಕಾರವಾಗಿದ್ದು, ಅವುಗಳ ಹೊರಗಿನ ಕವಚದಲ್ಲಿ ಹೀಮಾಗ್ಲುಟನಿನ್ ಮತ್ತು ನ್ಯೂರಮಿನಿಡೇಸ್ ಎಂಬ ಎರಡು ಗೈಕೋಪ್ರೋಟಿನ್ ಇರುತ್ತದೆ. ವೈರಾಣು ತಾನು ಸೋಂಕುವ ಜೀವಕಣಗಳನ್ನು ಪ್ರದೇಶಿಸಲು ಹೀಮಾಗ್ಲುಟಿನ್ ನೆರವಾಗುತ್ತದೆ ಮತ್ತು ಆ ಜೀವಕೋಶದೊಳಗೆ ಹುಟ್ಟಿದ ಹೊಸ ವೈರಾಣುಗಳು ಹೊರಗೆ ಬರಲು ನ್ಯೂರಮಿನಿಡೇಸ್ ಸಹಾಯ ಮಾಡುತ್ತದೆ. ವೈರಾಣುವಿನ ಹೊರ ಕವಚದಲ್ಲಿರುವ ಈ ಪ್ರೋಟಿನ್‌ಗಳಗನುಗುಣವಾಗಿ ಇನ್‌ಪ್ಲುಯೆಂಜಾ ವೈರಸ್‌ನ ಉಪನಮೂನೆಗಳನ್ನು ಹೆಸರಿಸಲಾಗಿದೆ. ಇನ್‌ಪ್ಲುಯೆಂಜಾ ’ಎ’ ವೈರಾಣುವಿನಲ್ಲಿ ಒಟ್ಟು 16 ಬಗೆಯ ಹೀಮಗ್ಲುಟಮಿನ್ ವಿಧಗಳಿರುತ್ತದೆ. ಈ ಪ್ರೋಟಿನ್‌ಗಳ ಆಧಾರದ ಮೇಲೆ ಹಲವಾರು ಉಪನಮೂನೆಗಳನ್ನು ಇನ್‌ಪ್ಲುಯೆಂಜಾ ವೈರಾಣುವಿನಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ ಹಂದಿಜ್ವರ ಹೆಚ್ಚು ಸರ್ವಸಾಮಾನ್ಯವಾಗಿ ಕಾಣಿಸುವ ’ಪ್ಲೂ’ ರೋಗವಾಗಿದೆ. ಅದೇ ರೀತಿ ಇನ್‌ಪ್ಲುಯೆಂಜಾ ’ಎ’ ವೈರಾಣುವಿನ ಉಪಪ್ರಬೇಧ ಸಾಮಾನ್ಯವಾಗಿ ಕೋಳಿ ಮತ್ತು ಹಕ್ಕಿಗಳಲ್ಲಿ ಹೆಚ್ಚು ಕಾಡುತ್ತದೆ. ಈ ಕಾರಣಕ್ಕಾಗಿಯೇ ಈ ಜ್ವರವನ್ನು ಹಕ್ಕಿಜ್ವರ ಅಥವಾ ಕೋಳಿಜ್ವರ ಎಂದು ಕರೆಯಲಾಗುತ್ತದೆ. ಒಟ್ಟಿನಲ್ಲಿ ಪ್ಲೂ ಸೋಂಕು ಮನುಷ್ಯರನ್ನಷ್ಟೇ ಕಾಡುವುದಲ್ಲದೇ, ಹಕ್ಕಿ ಮತ್ತು ಹಲವು ಪ್ರಾಣಿಗಳನ್ನೂ ಕಾಡುತ್ತದೆ. ಅದಲ್ಲದೇ ಇವುಗಳ ನಡುವೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹರಡುತ್ತಿರುತ್ತದೆ. ಪ್ಲೂ ವೈರಾಣುಗಳಲ್ಲಿ ಉಂಟಾಗುವ ರೂಪಾಂತರಗಳು ಮತ್ತು ಮನುಷ್ಯ, ಹಕ್ಕಿ ಮತ್ತು ಪ್ರಾಣಿಗಳು ಪರಸ್ಪರ ನಿಕಟಗೊಳ್ಳುವುದು ಈ ಹರಡುವ ಪ್ರಕ್ರಿಯೆಗೆ ನೆರವಾಗುತ್ತದೆ. ಆಹಾರಕ್ಕಾಗಿ ಬೇರೆ ಬೇರೆ ರೀತಿಯ ಹಕ್ಕಿಗಳು ಮತ್ತು ಪ್ರಾಣಿಗಳೊಂದಿಗೆ ಮನುಷ್ಯನ ಸಂಪರ್ಕ ಹೆಚ್ಚದಂತೆ ಈ ಹರಡುವಿಕೆ ಹೆಚ್ಚಾಗುತ್ತದೆ. ಪಶು ಮತ್ತು ಪಕ್ಷಿ ಸಾಕಣೆಗಳಲ್ಲಿ ತೀರ ಇಕ್ಕಟ್ಟಿನಲ್ಲಿ ಒತ್ತಿಟ್ಟು ಸಾಕುವುದು, ಅವುಗಳ ಆರೋಗ್ಯದ ಬಗ್ಗೆ ನಿಗಾವಹಿಸದಿರುವುದು ಈ ರೋಗ ಹರಡುವಿಕೆಗೆ ಸಹಾಯ ಮಾಡುತ್ತದೆ.
ರೋಗ ಲಕ್ಷಣಗಳು ಏನು?
ಹಕ್ಕಿಜ್ವರ ಅಥವಾ ಕೋಳಿಜ್ವರ ಬಹಳ ಬೇಗನೆ ಹರಡುತ್ತದೆ. ಒಂದು ಕೋಳಿಯಲ್ಲಿ ವೈರಾಣು ಕಾಣಿಸಿಕೊಂಡರೆ 48 ಗಂಟೆಗಳ ಒಳಗೆ, ಗುಂಪಿನ ಎಲ್ಲಾ ಕೋಳಿಗಳೂ ಸೋಂಕಿಗೆ ಬಲಿಯಾಗುತ್ತದೆ. ಸೋಂಕಿಗೆ ಒಳಗಾದ ಹಕ್ಕಿಗಳ ಮಲ, ಮೂತ್ರ, ಸಿಂಬಳ, ನೀರು, ಸಣ್ಣ ರೋಗಾಣುವಿನಿಂದ ಕೂಡಿರುತ್ತದೆ. ಹಕ್ಕಿಗಳು ವಾಸಿಸುವ ಸ್ಥಳ, ಅಲ್ಲಿನ ಗಾಳಿ ಸೇರಿದಂತೆ ಎಲ್ಲದರಲ್ಲೂ ವೈರಾಣು ಕೂಡಿರುತ್ತದೆ. ಈ ವೈರಾಣು ಮಾನವ ದೇಹಕ್ಕೆ ಗಾಳಿಯ ಮೂಲಕ ಸೇರಿದರೆ ಅಪಾಯ ತಪ್ಪಿದಲ್ಲ. ಆದರೆ ಈ ರೋಗ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಆದಾಗ್ಯೂ ಹಕ್ಕಿಗಳ ಸಂಪರ್ಕಕ್ಕೆ ಹೋದಾಗ ಅತೀ ಎಚ್ಚರಿಕೆ ಅಗತ್ಯ. ಹಕ್ಕಿಜ್ವರದ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ 2-3 ದಿನಗಳಲ್ಲಿ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅತಿಯಾದ ಜ್ವರ, ನೆಗಡಿ, ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ಸ್ನಾಯು ಸೆಳೆತ, ಉಸಿರಾಟದ ತೊಂದರೆ ರೋಗದ ಲಕ್ಷಣಗಳಾಗಿರುತ್ತದೆ. ಕೆಲವೊಮ್ಮೆ ಸತತ ವಾಂತಿ, ಬೇಧಿ ಮತ್ತು ವಿಪರೀತ ಸುಸ್ತು ಇರಬಹುದು, ವಿಪರೀತ ತಲೆನೋವು, ಯಾವುದರಲ್ಲೂ ನಿರಾಸಕ್ತಿ ಮತ್ತು ಸ್ನಾಯು ಸೆಳೆತವೂ ಇರಬಹುದು.
ಏನು ಮುಂಜಾಗ್ರತೆ ವಹಿಸಬೇಕು?
ಕೊನೆಮಾತು
ಇನ್‌ಪ್ಲುಯೆಂಜಾ ವೈರಸ್‌ನಿಂದ ಹರಡುವ ಹಕ್ಕಿಜ್ವರವನ್ನು ಕೋಳಿಜ್ವರ ಎಂದೂ ಕರೆಯುತ್ತಾರೆ. ನಿರಂತರವಾಗಿ ದೇಹ ರಚನೆ ಬದಲಿಸಿಕೊಳ್ಳುವುದು ಈ ಇನ್‌ಪ್ಲುಯೆಂಜಾ ವೈರಾಣುಗಳ ವಿಶೇಷತೆಯಾಗಿದ್ದು, ಈ ವೇಷಾಂತರಗೊಂಡ ವೈರಾಣಗಳು ತನ್ನ ಸೋಂಕನ್ನುಂಟು ಮಾಡುವ ಸಾಮರ್ಥ್ಯವನ್ನ ಹೆಚ್ಚಿಸಿಕೊಂಡು ಮತ್ತಷ್ಟು ತಳಿ ಬೆರೆಕೆಯಿಂದ ದೊಡ್ಡ ರೂಪಾಂತರ ಮಾಡಿಕೊಂಡು ಮತ್ತಷ್ಟು ವ್ಯಾಪಕವಾದ ಮತ್ತು ತೀವ್ರತರವಾದ ಕಾಯಿಲೆಗೆ ಮುನ್ನಡಿ ಬರೆಯುತ್ತದೆ. ಶ್ವಾಸಕೋಶದ ದ್ರವಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಅತೀ ಸುಲಭವಾಗಿ ಹರಡುವ ಈ ಇನ್‌ಪ್ಲುಯೆಂಜಾ ವೈರಾಣು ಮನುಕುಲದ ಬಹುದೊಡ್ಡ ಶತ್ರು ಎಂದರೂ ತಪ್ಪಲ್ಲ. ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ೨೪ ಗಂಟೆಗಳ ಮೊದಲೇ ಈ ವೈರಾಣುಗಳು ಸೋಂಕುಳ್ಳ ವ್ಯಕ್ತಿಗಳಿಂದ ಇತರ ಆರೋಗ್ಯವಂತರಿಗೆ ಹರಡುವ ಸಾಧ್ಯತೆ ಇರುತ್ತದೆ. ರೋಗಿಯ ದೇಹದಿಂದ ಉಸಿರಾಟದ ಮೂಲಕ ಹೊರಬಿದ್ದ ವೈರಾಣುಗಳು, ಹಲವು ಅಡಿಗಳವರೆಗೆ ಪಸರಿಸಿ, ಹಲವು ಗಂಟೆಗಳ ಕಾಲ ಜೀವಂತವಾಗಿ ಉಳಿದು ರೋಗ ಹರಡುವಲ್ಲಿ ಪ್ರಮುಖ ಭೂವಿಕೆ ವಹಿಸುತ್ತದೆ. ಈ ನಿಟ್ಟಿನಲ್ಲಿ ಸೋಂಕುಳ್ಳ ವ್ಯಕ್ತಿಯ ತನ್ನ ಸಾಮಾಜಿಕ ಜವಾಬ್ದಾರಿ ಅರಿತು, ಮನೆಯೊಳಗೆ ಉಳಿದು ರೋಗ ಹರಡದಂತೆ ಮಾಡುವ ಮಹತ್ವದ ಜವಾಬ್ದಾರಿ ಹೆಚ್ಚಿದೆ. ಹಕ್ಕಿಜ್ವರ ಹಕ್ಕಿಯಿಂದ ಹಕ್ಕಿಗೆ ಹರಡುವ ರೋಗವಾದರೂ ಹಕ್ಕಿಯ ಜೊತೆಗಿನ ಒಡನಾಟ ಮತ್ತು ಮಾಂಸ ಸೇವನೆಯಿಂದ ಮನುಷ್ಯನಿಗೂ ಹರಡಬಹುದು. ಉಸಿರಾಟದ ಅಥವಾ ನೀರಿನ ಮೂಲಕ ಈ ವೈರಾಣುಗಳು ಮನುಷ್ಯನ ದೇಹಕ್ಕೆ ಸೇರಿ ಸೋಂಕಿಗೆ ಕಾರಣವಾಗಬಹುದು. ಹೆಚ್ಚುತ್ತಿರುವ ಕೋಳಿ ಸಾಕಾಣೆಯಿಂದಾಗಿ ಹಕ್ಕಿಜ್ವರ ಹರಡುವ ಸಾಧ್ಯತೆ ಹೆಚ್ಚಾಗಿದೆ. ಆರಂಭಿಕ ಹಂತದಲ್ಲಿ ತಡೆಗಟ್ಟಿ ಮತ್ತು ಗುರುತಿಸಿ ಚಿಕಿತ್ಸೆ ನೀಡದಿದ್ದಲ್ಲಿ ಬಹು ಅಂಗಾಂಗ ವೈಪಲ್ಯದಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಹಕ್ಕಿಜ್ವರ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ನಿಭಾಯಿಸಿದ್ದಲ್ಲಿ ಹಕ್ಕಿಜ್ವರ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು, ಅದರಲ್ಲಿಯೇ ನಮ್ಮೆಲ್ಲರ ಜಾಣತನ ಅಡಗಿದೆ.
ಡಾ.ಮುರಲೀ ಮೋಹನ ಚೂಂತಾರು, 9845135787