bantwalnews.com report
ಶಾಲಾ ದತ್ತು ಯೋಜನೆಯಡಿ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೋಟ್ಯಾಂತರ ರುಪಾಯಿ ವೆಚ್ಚದ ನೂತನ ಕಟ್ಟಡವನ್ನು ನಿರ್ಮಿಸುವುದರ ಜೊತೆಗೆ ಬಡವರ ಮಕ್ಕಳಿಗಾಗಿ ಸರಕಾರಿ ಶಾಲೆಗಳನ್ನು ಉಳಿಸಬೇಕೆಂಬ ಪಣತೊಟ್ಟು ಶೈಕ್ಷಣಿಕ ಆಂದೋಲನ ನಡೆಸುತ್ತಿರುವ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದಕ್ಷಿಣ ಭಾರತದ ರಾಜ್ಯಗಳ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನವನ್ನು ಮುಂದುವರೆಸಿದೆ. ಕಳೆದ ತಿಂಗಳು ಕೇರಳ ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು ಭೇಟಿ ಮಾಡಿದ್ದ ತಂಡ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಗುರುವಾರ ತಮಿಳುನಾಡು ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಸೂಲೈ ತಾಲೂಕಿನ ಸುಕ್ಕಿರಮನಿಯಾ ಪಂಚಾಯತ್ ಯೂನಿಯನ್ ಶಾಲೆ, ಭವಾನಿ ತಾಲೂಕಿನ ವೇಳಂಪಾಲಯಂ ಪಂಚಾಯಿತಿ ಯೂನಿಯನ್ ಶಾಲೆ, ಕಗಲೂರಿನ ಪಂಚಾಯಿತಿ ಯೂನಿಯನ್ ಪ್ರಾಥಮಿಕ ಶಾಲೆಗಳನ್ನು ತಂಡ ಸಂದರ್ಶಿಸಿತು.
ತಮಿಳುನಾಡಿನ ಬಹುತೇಕ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಸಮಸ್ಯೆ ಇಲ್ಲ ಎನ್ನುವುದು ತಂಡ ಅಧ್ಯಯನದಲ್ಲಿ ಕಂಡು ಕೊಂಡಿದೆ. ಒಂದರಿಂದ ಏಳನೆ ವರೆಗಿನ ಪ್ರಾಥಮಿಕ ಶಾಲೆಗಳಲ್ಲಿ ಇನ್ನೂರ ಐವತ್ತಕ್ಕೆ ಕಡಿಮೆ ಇಲ್ಲದಂತೆ ವಿದ್ಯಾರ್ಥಿಗಳ ಸಂಖ್ಯೆಯಿದೆ. ವಿದ್ಯಾರ್ಥಿಗಳಿಗನುಗುಣವಾಗಿ ಶಿಕ್ಷಕರ ಸಂಖ್ಯೆಯಿದೆ. ಹತ್ತು ವರ್ಷಗಳ ಹಿಂದೆ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು ಮಧ್ಯಂತರದಲ್ಲಿ ಆಂಗ್ಲ ಭಾಷಾ ವ್ಯಾಮೋಹದಿಂದ ಪೋಷಕರು ಖಾಸಗಿ ಶಾಲೆಯತ್ತ ಒಲವು ತೋರಿದ್ದರು. ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆ ಕಲಿಕೆಯನ್ನು ಖಡ್ಡಾಯಗೊಳಿಸದ ಬಳಿ ಮತ್ತೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆಯಾಗಿದೆ ಎಂದು ಅಲ್ಲಿನ ಶಿಕ್ಷಕರು ತಂಡಕ್ಕೆ ತಿಳಿಸಿದರು.
ಸ್ಮಾರ್ಟ್ ತರಗತಿಗಳು, ಸರಕಾರದ ವಿವಿಧ ಯೋಜನೆಗಳು, ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಪೋಷಕರ ಪರಿಶ್ರಮದಿಂದಾಗಿ ಸರಕಾರಿ ಶಾಲೆಗಳತ್ತ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಬೆಳಿಗ್ಗೆ ಪ್ರಾಣಾಯಾಮ ತರಗತಿ, ಮಧ್ಯಾಹ್ನದ ವೇಳೆ ಯೋಗ ತರಗತಿ ಹಾಗೂ ಸಂಜೆ ದೈಹಿಕ ಕ್ರೀಡೆಗಳು ಪಠ್ಯೇತರ ತರಗತಿಗಳಾಗಿ ನಿಯಮ ಬದ್ದವಾಗಿ ನಡೆಸಲಾಗುತ್ತಿದೆ ಎಂಬುದು ತಂಡದ ಸದಸ್ಯರ ಅಧ್ಯಯನದಲ್ಲಿ ಕಂಡುಬಂದಿದೆ.
ಅಧ್ಯಯನ ತಂಡದಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಅಂಚನ್, ಉಪಾಧ್ಯಕ್ಷ ರಮೇಶ್ ಕುಲಾಲ್ ಕರೆಂಕಿ, ತಮಿಳುನಾಡಿನ ಶಿಕ್ಷಣಾಸಕ್ತರಾದ ಶಿವರಾಜ್ ಚೆನ್ನಮಲೈ, ಸೋಮು ಈರೋಡ್, ಶಿಕ್ಷಕ ಕುಮಾರ್ ಈರೋಡ್ ಹಾಜರಿದ್ದರು.