ಗಿಡಗಳಿಗೂ ಇಲ್ಲ, ಮನುಷ್ಯರಿಗೂ ಇಲ್ಲ, ಎಲ್ಲೂ ನೀರೇ ಇಲ್ಲ… ಈ ಮಾತು ಪ್ರತಿ ವರ್ಷ ಕೇಳಿಬರುತ್ತದೆ. ಜಲತಜ್ಞರು ಇಂಥದ್ದಕ್ಕೆಲ್ಲ ಅಂತರ್ಜಲ ವೃದ್ಧಿಯೇ ಪರಿಹಾರ ಎಂಬ ಪಾಠವನ್ನು ಸಾರಿ ಹೇಳುತ್ತಿದ್ದಾರೆ. ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ ವಿಟ್ಲದ ಜನ. ಬಂಟ್ವಾಳನ್ಯೂಸ್ ಈ ಬಗ್ಗೆ ಬೆಳಕು ಚೆಲ್ಲಿದೆ.
bantwalnews.com COVER STORY
ಈರೆನ ಗೂವೆಲ್ ಡ್ ನೀರು ಉಂಡಾ? (ನಿಮ್ಮ ಬಾವಿಯಲ್ಲಿ ನೀರಿದೆಯೇ)
ಕ್ಯಾಲೆಂಡರ್ ಮಗುಚಿದೊಡನೆ ವಿಟ್ಲ ಪರಿಸರದ ಜನ ಪರಸ್ಪರ ಮಾತನಾಡಿಕೊಳ್ಳುವ ಸಂದರ್ಭ ಕೇಳುವ ಮೊದಲ ಪ್ರಶ್ನೆ ಇದು.
ಕಳೆದ ಬೇಸಗೆಯನ್ನೇ ನೋಡಿ. ವಿಟ್ಲ ಪೇಟೆಗೆ ನೀರಿನ ಅಭಾವ ಉಂಟಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗಿ ಬಂತು.
ವಿಟ್ಲ ಸುತ್ತಮುತ್ತಲೂ ಬೇಸಗೆ ಬಂತೆಂದರೆ ನೀರಿಗೆ ಪರದಾಟ ಆರಂಭ ಎಂದೇ ಅರ್ಥ. ಇದನ್ನು ನಿವಾರಿಸಲು ವಿಟ್ಲ ಪಟ್ಟಣ ಪಂಚಾಯಿತಿ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಯೋಜನೆಯೊಂದನ್ನು ಹಮ್ಮಿಕೊಂಡಿತು. ತನ್ನ ವ್ಯಾಪ್ತಿಯಲ್ಲಿನ ತೊರೆ, ಪುಟ್ಟ ನದಿಗೆ ಅಣೆಕಟ್ಟು ನಿರ್ಮಿಸುವ ಪ್ಲ್ಯಾನ್ ಇದು. ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸದಸ್ಯರಂತೂ ಸಂಪೂರ್ಣ ಸಾಥ್ ನೀಡಿದರು. ಹೀಗಾಗಿ ಜನವರಿ ಆರಂಭಗೊಂಡರೂ ವಿಟ್ಲ ಪರಿಸರದಲ್ಲಿ ನೀರಿನ ಒರತೆ ಕಳೆದ ವರ್ಷದಷ್ಟು ಕಡಿಮೆ ಆಗಿಲ್ಲ ಎಂಬ ಸಮಾಧಾನ ಜನರಿಗಿದೆ.
ಯಾಕೆ ಈ ಕ್ರಮ:
ಈಗಂತೂ ಕೊಳವೆ ಬಾವಿ ಕೊರೆಯುವಂತಿಲ್ಲ. ಹಾಗಾದರೆ ನೀರು ಎಲ್ಲಿಂದ ಬರುತ್ತದೆ, ಇದಕ್ಕೆ ಬೇಕಾಗಿರುವುದು ಜಲ ಸಂರಕ್ಷಣೆಯ ಉಪಾಯ ಎಂಬುದನ್ನು ಅರಿತು ಪಟ್ಟಣ ಪಂಚಾಯಿತಿ, ನದಿ, ತೊರೆಗಳ ನೀರಿಗೆ ಆದ್ಯತೆ ನೀಡುವುದು ಹಾಗೂ ಹಳೇ ಮದಕ, ಕೆರೆ, ಬಾವಿಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಿತು. ಅದರ ಫಲವೇ ಒಡ್ಡು ನಿರ್ಮಾಣ.
ವನಭೋಜನ, ಕೂಟೇಲು, ಒಕ್ಕೆತ್ತೂರು, ಸಿಪಿಸಿಆರ್ಐ, ಚಂದಪ್ಪಾಡಿ, ದೇವಸ್ಯ, ಕಾಯರ್ ಮಾರ್ ಭಾಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಇದು ಭೂಮಿಯಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಬಹುದು ಎಂಬ ಉದ್ದೇಶ ಇದರಲ್ಲಿ ಅಡಗಿತ್ತು.
ಆದರೆ ಇಷ್ಟೆಲ್ಲ ಕಾಮಗಾರಿ ಕೈಗೊಳ್ಳಲು ಪಂಚಾಯಿತಿ ಒಂದರ ಅನುದಾನದಿಂದ ಅಸಾಧ್ಯ. ಹೀಗಾಗಿ ಇದಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕೈಜೋಡಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ವಿಟ್ಲ, ಗ್ರಾಪಂ ಮಾಜಿ ಅಧ್ಯಕ್ಷ ಜಾನ್ ಡಿಸೋಜ, ಪಪೂ ಕಾಲೇಜು ಎನ್ನೆಸ್ಸೆಸ್ ಘಟಕ ಕಾರ್ಯಕ್ರಮ ಅಧಿಕಾರಿ ಅಣ್ಣಪ್ಪ ಸಾಸ್ತಾನ ಸಹಿತ ವಿದ್ಯಾರ್ಥಿಗಳ ತಂಡವೇ ಕೈಜೋಡಿಸಿತು.
ಎನ್ನೆಸ್ಸೆಸ್ ಹುಡುಗ, ಹುಡುಗಿಯರು ಮರಳು ಗೋಣಿ ಚೀಲ ಹೊತ್ತು ಮುನ್ನಡೆದರು. ಸಾರ್ವಜನಿಕರು ಸಹಕಾರ ನೀಡಿದರು. ಇಡೀ ವಿಟ್ಲದ ಜನತೆ ಇವರ ಕಾರ್ಯಕ್ಕೆ ಶಹಬ್ಬಾಸ್ ಹೇಳಿತು.
ಈಗ ಏನಾಗಿದೆ:
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರು ಕಡಿಮೆ ಆಗಿಲ್ಲ. ವಿಟ್ಲ ಪೇಟೆ ಬಾವಿಗಳಲ್ಲೂ ಅಂತರ್ಜಲ ವೃದ್ಧಿ ಆಗಿದೆ. ಮಕ್ಕಳು ಒಡ್ಡು ನಿರ್ಮಿಸಿದ್ದು ಮಕ್ಕಳಾಟಿಕೆ ಅಲ್ಲ ಎಂಬುದಂತೂ ಸ್ಪಷ್ಟ. ಏಕೆಂದರೆ ಒಡ್ಡು ನೀರು ನಿಲ್ಲಿಸಿದರೆ, ಪರೋಕ್ಷವಾಗಿ ವಿಟ್ಲದ ಸುಮಾರು 600 ಫಲಾನುಭವಿಗಳಿಗೆ ನೀರೊದಗಿಸಲು ಸಹಾಯ ಮಾಡುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಈ ಬೇಸಗೆಯಲ್ಲಿ ಕಳೆದ ವರ್ಷದಷ್ಟು ಜಲಕ್ಷಾಮ ವಿಟ್ಲದಲ್ಲಿ ತಲೆದೋರದು.
ದೇವಸ್ಯ, ಕೂಟೇಲುಗಳಲ್ಲಿ ಈಗ ನೀರು ನಿಂತಿದೆ ಎನ್ನುತ್ತಾರೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ವಿಟ್ಲ. ಸುಮಾರು ನೂರೈವತ್ತು ಕೃಷಿಕರು ಈ ಕಾರ್ಯಕ್ರಮದ ಪರೋಕ್ಷ ಫಲಾನುಭವಿಗಳಾಗಿದ್ದಾರೆ. ವಿಟ್ಲದಲ್ಲಿ ಈ ಬಾರಿ ಅಂತರ್ಜಲ ವೃದ್ಧಿಯಾಗುವುದು ನಿಶ್ಚಿತ. ನೀರಿನ ಸಮಸ್ಯೆ ಪರಿಹಾರವಾಯಿತು ಎಂದಾದರೆ ಅದಕ್ಕೆ ಅಣೆಕಟ್ಟು ನಿರ್ಮಾಣದ ಯೋಜನೆಯೇ ಕಾರಣ. ಐದು ಕಡೆ ಸುಸಜ್ಜಿತವಾಗಿಯೇ ಅಣೆಕಟ್ಟು ನಿರ್ಮಾಣವಾಗಿ ನೀರು ಸಂಗ್ರಹವಾಗುತ್ತಿದೆ. ಎಂದು ಅರುಣ್ ವಿಟ್ಲ ಬಂಟ್ವಾಳನ್ಯೂಸ್ ಗೆ ಮಾಹಿತಿ ನೀಡಿದರು..
ವಿಟ್ಲ ಪರಿಸರ, ಪೇಟೆ ಬದಲಾವಣೆಗೆ ತೆರೆದುಕೊಂಡಿದೆ. ಕುಡಿಯುವ ನೀರು ಸಮಸ್ಯೆ ಸಂಪೂರ್ಣ ಬಗೆಹರಿದರೆ, ವಿಟ್ಲದ ಹಿರಿಮೆಗೆ ಮತ್ತೊಂದು ಗರಿ.